ದಾವಣಗೆರೆ:
ಕುಂದುವಾಡ ಕೆರೆ, ಟಿವಿ ಸ್ಟೇಷನ್ ಕೆರೆ, ವಿದ್ಯಾನಗರ ಪಾರ್ಕ್, ವಾಕಿಂಗ್ ಪಾಥ್‍ಗಳನ್ನು ಇಂದಿನಿಂದಲೇ ಬಂದ್ ಮಾಡಲಾಗುವುದು. ಆದ್ದರಿಂದ ಶನಿವಾರದಿಂದ ವಾಯುವಿಹಾರಿಗಳು ಈ ಪ್ರದೇಶಗಳಿಗೆ ಬರಬಾರದು ಮನೆಗಳಲ್ಲಿಯೇ ಧ್ಯಾನ, ಯೋಗ, ಏಕ್ಸರ್‍ಸೈಜ್ ನಡೆಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕಿವಿಮಾತು ಹೇಳಿದರು.
ನಗರದ ಕುಂದುವಾಡ ಕೆರೆ ಆವರಣಕ್ಕೆ ಶುಕ್ರವಾರ ಬೆಳಿಗ್ಗೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಇತರೆ ಇಲಾಖೆಗಳಿಂದ ಕೊರೊನಾ ಸೋಂಕು ಕುರಿತು ಜಾಗೃತಿ ಮೂಡಿಸಲು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿದ ಅವರು, ವಾಯು ವಿಹಾರ ಮಾಡುತ್ತಿರುವವರ ಬಳಿಗೆ ಹೋಗಿ ನಾಳೆಯಿಂದ ಇಲ್ಲಿಗೆ ಬರಬೇಡಿ, ಕುಂದುವಾಡ ಕೆರೆಯನ್ನು ಇಂದಿನಿಂದಲೇ ಬಂದ್ ಮಾಡುತ್ತೇವೆ ಎಂದರಲ್ಲದೆ, ಕೆರೆಯ ಆವರಣದಲ್ಲಿ ಅಳವಡಿಸಿದ್ದ ಓಪನ್ ಜಿಮ್‍ನಲ್ಲಿ ಜಿಮ್ ಮಾಡುತ್ತಿದ್ದ ವ್ಯಕ್ತಿಯ ಬಳಿಗೆ ಹೋಗಿ, ನೀವು ಹೀಗೆ ಇಲ್ಲಿ ಇಂತಹ ಸಂದರ್ಭದಲ್ಲಿ ಜಿಮ್ ಮಾಡಬಾರದು. ಏಕೆಂದರೆ, ಹೀಗೆ ಒಬ್ಬರು ಬಳಸಿದ ಜಿಮ್ ಸಲಕರಣೆಯನ್ನು ಮತ್ತೊಬ್ಬರು ಬಳಸುವುದು ಸೂಕ್ತವಲ್ಲ ಎಂದು ಹೇಳಿ ತಮ್ಮ ಆಪ್ತ ಸಹಾಯಕರ ಬಳಿ ಸ್ಯಾನಿಟೈಜರ್ ಕೊಡುವಂತೆ ಕೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಆರೋಗ್ಯದ ಸಲುವಾಗಿ ದಯವಿಟ್ಟು ಯಾರೂ ಮನೆಯಿಂದ ಅನಗತ್ಯವಾಗಿ ಹೊರಗೆ ಬರಬೇಡಿ. ಸಾರ್ವಜನಿಕ ಸ್ಥಳಗಳನ್ನು ಬಳಸಬೇಡಿ. ಹೀಗೆ ಗುಂಪಾಗಿ ಓಡಾಡುವುದು, ವಾಕ್ ಮಾಡುವುದನ್ನು ಸದ್ಯಕ್ಕೆ ನಿಲ್ಲಿಸುವುದು ಸೂಕ್ತ ಹಾಗೂ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಆದಷ್ಟು ಮನೆಯಲ್ಲೇ ಇರಿ ಎಂದು ಸಲಹೆ ನೀಡಿದರು.
ಪ್ರಧಾನ ಮಂತ್ರಿಗಳು ಕರೆ ನೀಡಿರುವಂತೆ ನಾಳೆ (ಮಾ.22 ರಂದು) ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9ರ ವರೆಗೆ ನಿಮಗೆ ನೀವೇ ಜನತಾ ಕಫ್ರ್ಯೂ ಹಾಕಿಕೊಳ್ಳಿರಿ. ನಂತರ ಬಾಗಿಲಿಗೆ ಬಂದು ಧನ್ಯವಾದ ಸೂಚಕವಾಗಿ ಸಂಜೆ ನಂತರ ಚಪ್ಪಾಳೆ ಹೊಡೆದು, ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ತಂಡಕ್ಕೆ ಧನ್ಯವಾದ ಅರ್ಪಿಸಿ ಎಂದ ಅವರು, ಎನ್‍ಸಿಸಿ, ಎನ್‍ಎಸ್‍ಎಸ್ ನವರು ಈ ಸಂದೇಶವನ್ನು ಕನಿಷ್ಟ 10 ಜನಕ್ಕೆ ಕಾಲ್ ಮಾಡಿ ಹೇಳುವ ಮೂಲಕ ಆದಷ್ಟು ಜನರಿಗೆ ತಲುಪಿಸಬೇಕು. ಭಾನುವಾರ ಮಾತ್ರವಲ್ಲ ಮುಂದಿನ ದಿನ ಆದಷ್ಟು ಮನೆಯಲ್ಲೇ ಇರುವುದು ಸೂಕ್ತ ಎಂದರು.
ಕೊರೊನಾ ಕಳವಳದ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಿದರೂ ಹೀಗೆ ಗುಂಪು ಗುಂಪಾಗಿ ಸೇರಬಾರದು. ಓಡಾಡಬಾರದು ಎಂದ ಅವರು, 60 ವಯಸ್ಸು ದಾಟಿದ ಹಿರಿಯರು ಮನೆಯಿಂದ ಆದಷ್ಟು ಹೊರಗೆ ಬರದಂತೆ ನೋಡಿಕೊಳ್ಳಬೇಕು. ಕೊರೊನಾ ವೈರಸ್ ಸೋಂಕಿನ ಕಬಂಧ ಬಾಹುವಿನಿಂದ ಹೊರ ಬರುವವರೆಗೆ ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಓಡಾಡಬಾರದು. ನಿಮ್ಮ ಅಕ್ಕ ಪಕ್ಕದವರು ಯಾರಾದರೂ ವಿದೇಶಕ್ಕೆ ಹೋಗಿ ಬಂದು ಯಾರಿಗೂ ತಿಳಿಸದೇ ಸುಮ್ಮನಿದ್ದರೆ ನಮಗೆ ತಿಳಿಸಿ. ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಸೂಚನೆಯಂತೆ ಸ್ಟೇ ಅವೇ, ಸ್ಟೇ ಸೇಫ್ ಅಂಶವನ್ನು ಪಾಲಿಸಬೇಕು. ಸಾರ್ವಜನಿಕ ಸ್ಥಳಗಳನ್ನು ಬಳಸದೇ ಆದಷ್ಟು ಮನೆಯಲ್ಲಿ ಸೇಫ್ ಆಗಿರಿ. ವಿವಿಧ ಕೈಗಾರಿಕೆ, ಸಂಸ್ಥೆಗಳ ಮಾಲೀಕರು ಕಾರ್ಮಿಕರು ಗೈರಾದರೆ ಅವರ ಸಂಬಳ ಕಟ್ ಮಾಡದೇ ಪೂರ್ತಿ ಸಂಬಳ ನೀಡುವ ಮೂಲಕ ಸಹಕರಿಸಿ, ಯಾರೂ ಭೀತಿಗೊಳಗಾಗದೇ ಅನವಶ್ಯಕ ಮಾಸ್ಕ್ ಬಳಕೆ ಬೇಡ ಎಂದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಮಹಾನಗರಪಾಲಿಕೆ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ತಹಶೀಲ್ದಾರ್ ಸಂತೋಷ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
