ದಾವಣಗೆರೆ:
ಮಾಡಿರುವ ತಪ್ಪನ್ನು ಎತ್ತಿ ಹಿಡಿದು ತೋರಿಸಿದವರನ್ನೇ ತಪ್ಪಿತಸ್ಥರನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಕಳವಳ ವ್ಯಕ್ತಪಡಿಸಿದರು.
ನಗರದ ಶ್ರೀಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕುರುಬರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶ್ರೀಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೋಷ ಇದೆ ಎಂದು ತೋರಿಸುವವರನ್ನೇ ದೋಷಿಗಳನ್ನಾಗಿಸುವ ಹಾಗೂ ತಪ್ಪು ಎತ್ತಿ ತೋರಿಸುವವರನ್ನೇ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತಿದೆ ಎಂದು ಹೇಳುವ ಮೂಲಕ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಜಿ.ಪಂ. ಸಿಇಒ, ಡಿಎಸ್ ವಿರುದ್ಧ ತಾವು ಎಸಿಬಿಗೆ ದೂರು ದಾಖಲಿಸಿರುವುದರ ವಿರುದ್ಧ ತಿರುಗಿ ಬಿದ್ದಿರುವ ಜಿ.ಪಂ. ಸದಸ್ಯರ ಹೆಸರು ಪ್ರಸ್ತಾಪಿಸದೇ ತಿರಿಗೇಟು ನೀಡಿದರು.
ಕನಕದಾಸರು, ಬಸವಣ್ಣ ಅಂದೇ ಸಮಾಜದಲ್ಲಿ ಮನೆ ಮಾಡಿದ್ದ ಅಸಮಾನತೆ, ತಾರತಮ್ಯಗಳ ನಿವಾರಣೆಗೆ ಶ್ರಮಿಸಿದ್ದರು. ಆದರೆ, ಸಮಾಜದಲ್ಲಿ ಇಂದಿಗೂ ಅಸ್ಪಶ್ಯತೆ, ಮೇಲು-ಕೀಳು, ಬಡವ-ಬಲ್ಲಿದನೆಂಬ ತಾರತಮ್ಯಗಳಿವೆ. ಇದಕ್ಕೆ ಹಿಂದುಳಿದ ಮತ್ತು ತಳ ಸಮುದಾಯಗಳು ಶಿಕ್ಷಣ ಪಡೆಯದಿರುವುದೇ ಮುಖ್ಯಕಾರಣವಾಗಿದೆ. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯವಾಗಲಿದ್ದು, ಎಲ್ಲರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ಸಲಹೆ ನೀಡಿದರು.
ಮಹಾನೀಯರ ಜಯಂತಿಗಳನ್ನು ಎಲ್ಲಾ ಸಮಾಜದವರು ಸೇರಿ, ಆಚರಣೆ ಮಾಡುವುದು ಅತ್ಯಂತ ವಿರಳವಾಗಿದೆ. ಯಾವುದೇ ಕಾರಣಕ್ಕೂ ಮಹಾನೀಯರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು ಎಂದ ಅವರು, ದಾಸ ಶ್ರೇಷ್ಠ ಕನಕದಾಸರು ಶ್ರೀಹರಿಯ ಸಾಕ್ಷಾತ್ಕಾರ ಮಾಡುವುದರ ಜತೆಗೆ ಸಮಾಜಕ್ಕೆ ತನ್ನದೇಯಾದ ಕೊಡುಗೆ ನೀಡಿದ್ದಾರೆ. ಆದರೆ, ಇಂದು ಕನಕದಾಸ, ಬಸಣ್ಣ ಸೇರಿದಂತೆ ಇತರೆ ದಾರ್ಶನಿಕರ ವಿಚಾರಧಾರೆಗಳನ್ನು ಎಷ್ಟರ ಮಟ್ಟಿಗೆ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆಂಬುದನ್ನು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
