ಹಾನಗಲ್ಲ :
ತಾಲೂಕಿ ರೈತರಿಗೆ ಜೀವಜಲವಾಗಬೇಕಾಗಿದ್ದ ಬಾಳಂಬೀಡ ಹಾಗೂ ಶಿರಗೋಡ ಏತ ನೀರಾವರಿ ಕಾರ್ಯರೂಪಕ್ಕೆ ತರುವಲ್ಲಿ ಸದನದಲ್ಲಿ ಒಂದೂ ಚರ್ಚೆಯಾಗದೆ ಈ ಭಾಗದ ರೈತರಿಗೆ ಅನ್ಯಾಯವೆಸಗುತ್ತಿರುವ ಸದನದ ರೈತರಿಗಿಲ್ಲದ ಚರ್ಚೆಗಳು ನಮಗೆ ಬೇಕಾಗಿಲ್ಲ ಎಂದು ಉತ್ತರ ಕರ್ನಾಟಕ ಹೋರಾಟ ವೇದಿಕೆ ರಾಜ್ಯಾಧ್ಯಕ್ಷ ಎಸ್.ಎಂ,ಕೋತಂಬರಿ, ರೈತ ಸಂಘದ ತಾಲೂಕಾಧ್ಯಕ್ಷ ಮರಿಗೌಡ ಪಾಟೀಲ ಜಂಟಿ ಹೇಳಿಕೆಯಲ್ಲಿ ತಿಳಿಸಿದರು.
ಶನಿವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಜನಪ್ರತಿನಿಧಿಗಳಿಗೆ ನೀರಾವರಿ ಯೋಜನೆಗಳನ್ನು ಜಾರಿಗೆ ತರು ಚಿಂತನೆ ಇಲ್ಲ. ಹಾನಗಲ್ಲ ತಾಲೂಕಿನ ಶಾಸಕರು ಹಾಗೂ ಸಂಸದರ ಸ್ವಂತದ ಊರು. ಅಲ್ಲದೆ ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆ ಹಾಗೂ ಎಸ್.ವಿ.ಸಂಕನೂರ ಹಾನಗಲ್ಲ ತಾಲೂಕನ್ನು ನೋಡಲ್ ಕೇಂದ್ರವಾಗಿ ಮಾಡಿಕೊಂಡಿದ್ದು, ಈ ನಾಲ್ವರು ಪಕ್ಷಬೇಧ ತೊರೆದು ನೀರಾವರಿ ಯೋಜನೆಗೆ ಕಟಿಬದ್ಧರಾದರೆ ಸುಲಭ ಸಾಧ್ಯ. ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಅಧಿವೇಶನಗಳಲ್ಲಿ ಈ ಬಗ್ಗೆ ಪಟ್ಟು ಹಿಡಿದು ಕಾರ್ಯ ಕೈಗೊಳ್ಳಬೇಕು. ಇದು ಈ ತಾಲೂಕಿನ ರೈತರ ಸಾವು ಬದುಕಿನ ಪ್ರಶ್ನೆ. ಇದರೊಂದಿಗೆ ಬದುಕಬೇಕಾದ ರೈತರಿಗೆ ನಮ್ಮ ಪ್ರತಿನಿಧಿಗಳು ಹೋರಾಡಬೇಕಾಗಿದೆ. ಆದ್ದರಿಂದಲೇ ಡಿ. 17 ರಿಂದ ಗೆಲ್ಲುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.
ಸೋಮವಾರ 10 ಘಂಟೆಗೆ ಮಹಾತ್ಮಾಗಾಂಧಿ ವೃತ್ತದಲ್ಲಿ ರೈತರು ಸೇರಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ, ಅಲ್ಲಿಂದ ತಹಶೀಲ್ದಾರ ಕಛೇರಿ ವರೆಗೆ ಮೆರವಣಿಗೆಯಲ್ಲಿ ತೆರಳಿ ಅಲ್ಲಿಯೇ ನಮ್ಮ ಹೋರಾಟ ಗೆಲ್ಲುವವರೆಗೆ ಧರಣಿ ನಡೆಸಲಾಗುತ್ತದೆ. ಹಾನಗಲ್ಲ ತಾಲೂಕಿನ ದಕ್ಷಿಣ ಭಾಗಕ್ಕೆ ನೀರಾವರಿಗಾಗಿ ಹೋರಾಡಿ ಯಶಸ್ವಿಯಾದ ಸಿಂಧೂರ ಸಿದ್ದಪ್ಪನವರ ಸ್ಪೂರ್ತಿ ಈಗ ನಮ್ಮದಾಗಬೇಕಾಗಿದೆ. ಹಾನಗಲ್ಲ ತಾಲೂಕಿನ ಸಹಸ್ರ ಸಹಸ್ರ ಸಂಖ್ಯೆಯ ರೈತರು ಈ ಹೋರಾಟದಲ್ಲಿ ಕೈ ಜೋಡಿಸಿ ಸರಕಾರವನ್ನು ಎಚ್ಚರಿಸಬೇಕಾಗಿದೆ ಎಂದರು.
ಈ ಹೋರಾಟಕ್ಕಾಗಿ ನ್ಯಾಯವಾದಿಗಳ ಸಂಘ, ವಿದ್ಯಾರ್ಥಿ ಸಂಘಟನೆ, ಯುವಜನ ಸಂಘಟನೆ, ಕಾರ್ಮಿಕ ಸಂಘಟನೆ, ಸಾಮಾಜಿಕ ಸಂಘಟನೆ, ಮಹಿಳಾ ಸಂಘಟನೆಗಳು ಬೆಂಬಲಿಸಲು ವಿನಂತಿಸಲಾಗಿದೆ. ಕೃಷಿ ಕ್ಷೇತ್ರವಾಗಿರುವ ಹಾನಗಲ್ಲ ಪಟ್ಟಣದ ವ್ಯಾಪಾರಸ್ಥರೂ ಕೂಡ ಈ ಹೋರಾಟಕ್ಕೆ ಬೆಂಬಲಿಸಿ ಅನ್ನದಾತನ ಸಹಾಯಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದ ಅವರು, ಈ ಪಟ್ಟಣದ ಎಲ್ಲ ವ್ಯಾಪಾರದಲ್ಲಿ ರೈತರದ್ದೆ ಸಿಂಹ ಪಾಲಿದೆ. ಆದ್ದರಿಂದ ಎಲ್ಲರೂ ಇದನ್ನು ಬೆಂಬಲಿಸಬೇಕು. ಇದು ಕೇವಲ ರೈತರ ಪ್ರಶ್ನೆ ಮಾತ್ರವಲ್ಲ. ಈ ನೀರಾವರಿ ಯೋಜನೆಗಳನ್ನು ಜಾರಿ ಮಾಡದಿದ್ದರೆ ಕುಡಿಯುವ ನೀರಿಗೂ ಕಂಟಕ ಬರುತ್ತದೆ. ತಾಲೂಕಿನಲ್ಲಿ ಹರಿಯುತ್ತಿರುವ ಎರಡು ನದಿಗಳನ್ನು ಹಿಡಿದು ನಿಲ್ಲಿಸಿ ಭೂತಾಯಿಗೆ ಕೊಡೋಣ ಅನ್ನ ಪಡೆಯೋಣ ಈ ಯೋಜನೆ ಮೂಲಕ 105 ಕೆರೆಗಳನ್ನು ತುಂಬಿಸಿ ಬದುಕನ್ನು ಹಸನ ಮಾಡಿಕೊಳ್ಳೋಣ. ಎಲ್ಲರೂ ಬೆಂಬಲಿಸಿ ಎಂದು ಮನವಿ ಮಡಿದರು.
ಹಾನಗಲ್ಲ ತಾಲೂಕಿನ ರೈತರ ಮತಗಳಿಂದ ಆಯ್ಕೆಯಾಗಿ ರೈತರ ಹಿತ ಕಾಯಬೇಕಾದ ಗ್ರಾಪಂ, ತಾಪಂ, ಜಿಪಂ ಹಾಗೂ ವಿವಿಧ ಸಹಕಾರ ಸಂಘಗಳ ಪ್ರತಿನಿಧಿಗಳು ಈ ಹೋರಾಟದಲ್ಲಿ ಪಾಲ್ಗೊಂಡು ನಿಮ್ಮ ರೈತರ ಹಿತವನ್ನು ಬೆಂಬಲಿಸಿರಿ ಎಂದ ಅವರು, ಬೆಳೆವಿಮೆ ತಾರತಮ್ಯ, ಸಾಲಮನ್ನಾ ಸಮಸ್ಯೆ, ಸಾಲಮನ್ನಾಕ್ಕಾಗಿ ಅನಗತ್ಯವಾದ 52 ಶರತ್ತುಗಳನ್ನು ಹಿಂಪಡೆಯುವುದು, ಹೊಸ ಬೆಳೆಸಾಲ ಇಲ್ಲದಿರುವುದು ಹೀಗೆ ಸಮಸ್ಯೆಗಳ ಸುಳಿಯಲ್ಲಿರುವ ರೈತನನ್ನು ಬೆಂಬಲಿಸಿ ಹೋರಾಟ ಯಶಸ್ವಿಗೊಳಿಸಲು ಸಹಕರಿಸಿ ಎಂದು ಸಾರ್ವಜನಿಕರನ್ನು ವಿನಂತಿಸಿದರು.
ಈ ಹೋರಾಟದ ನೇತೃತ್ವವನ್ನು ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚೆಳ್ಳೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಉತ್ತರ ಕರ್ನಾಟಕ ಹೋರಾಟ ವೇದಿಕೆ, ತಾಲೂಕಾ ರೈತ ಸಂಘ ಹಾಗೂ ಹಸಿರು ಸೇನೆ ವಹಿಸುವವು ಎಂದರು. ಈ ಸಂದರ್ಬದಲ್ಲಿ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ,
ತಾಲೂಕು ಗೌರವಾಧ್ಯಕ್ಷ ಮಲ್ಲೇಶಪ್ಪ ಪರಪ್ಪನವರ, ನಗರಾಧ್ಯಕ್ಷ ಮಹಲಿಂಗಪ್ಪ ಅಕ್ಕಿವಳ್ಳಿ, ನ್ಯಾಯವಾದಿ ವಿನಾಯಕ ಕುರುಬರ, ಸಿ ಸಿ ಪಾಟೀಲ ಈ ಸಂದರ್ಭದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ