ಹೊಸಪೇಟೆ :
ತಾಲೂಕಿನ ಬೈಲುವದ್ದಿಗೇರಿ ಗ್ರಾ.ಪಂ.ವ್ಯಾಪ್ತಿಯ ಕಾಕುಬಾಳು ಗ್ರಾಮದಲ್ಲಿ 2 ಶುದ್ದ ಕುಡಿಯುವ ನೀರಿನ ಘಟಕಗಳಿದ್ದರೂ ಪದೇ ಪದೇ ಕೆಟ್ಟು ನಿಲ್ಲುತ್ತಿರುವುದರಿಂದ ನಿರುಪಯುಕ್ತವಾಗಿವೆ. ಹೀಗಾಗಿ ಜನ ಶುದ್ದ ಕುಡಿಯುವ ನೀರಿಗೆ ಪರದಾಡುವಂತಾಗಿದೆ.
ಬೇಸಿಗೆ ಆರಂಭದಿಂದಲೂ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ. ಇಂಥ ವೇಳೆಯಲ್ಲೇ ಪದೇ ಪದೇ 2 ಶುದ್ದ ನೀರಿನ ಘಟಕಗಳು ಕೆಟ್ಟು ನಿಲ್ಲುತ್ತಿರುವುದರಿಂದ ಜನರಿಗೆ ಸಂಕಷ್ಟ ಎದುರಾಗಿದೆ. ಮೊದಲೇ ಬೋರ್‍ವೆಲ್‍ನ ನೀರು ಕುಡಿಯಲು ಯೋಗ್ಯವಿಲ್ಲ. ಈ ನೀರನ್ನು ಕುಡಿದು ಹಿಂದೆ ವಾಂತಿ ಬೇಧಿಯಾದಂಥಹ ಪ್ರಕರಣಗಳು ನಮ್ಮ ಕಣ್ಣ ಮುಂದೇನೆ ಇವೆ. ಬೋರ್‍ವೆಲ್ ನೀರು ಕುಡಿಯೋದನ್ನು ಬಿಟ್ಟು ಜನ ಶುದ್ದ ಕುಡಿಯುವ ನೀರಿಗೆ ಹೊಂದಿಕೊಂಡಿದ್ದಾರೆ.
ಈಗ ಬೋರ್‍ವೆಲ್ ನೀರು ಕುಡಿಯಲು ಆಗದೇ ಪಕ್ಕದ ಬೈಲುವದ್ದಿಗೇರಿ, ಜೋಗ, ಹಾಗು ಗುಂಡ್ಲುವದ್ದಿಗೇರಿ ಗ್ರಾಮಗಳ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಮೊರೆ ಹೋಗುತ್ತಿದ್ದಾರೆ. ಈ ಕುರಿತು ಗ್ರಾ.ಪಂ.ಸಿಬ್ಬಂದಿ, ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ತಕ್ಷಣ ಘಟಕ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಸಂಕಷ್ಟ ಎದುರಿಸುವ ಜನರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಇಲ್ಲಿನ ಜನರ ಆಶಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
