ಸಾವನ್ನು ಸಂಭ್ರಮಿಸುವ ವಿಕೃತ ಜನ ಸಮಾಜದಲ್ಲಿದ್ದಾರೆ : ಎನ್.ಸಂತೋಷ್ ಹೆಗ್ಡೆ

ಬೆಂಗಳೂರು

         ಭ್ರಷ್ಟಾಚಾರ ಹಾಗೂ ತಪ್ಪು ಕೆಲಸಗಳಿಗೆ ಅಡ್ಡಗಾಲು ಹಾಕುತ್ತಿದ್ದ ದಕ್ಷ ಅಧಿಕಾರಿಗಳು ನಿಧನಹೊಂದಿದರೆ, ಅವರ ಸಾವನ್ನು ಸಂಭ್ರಮಿಸುವ ವಿಕೃತ ಜನರು ಸಮಾಜದಲ್ಲಿದ್ದಾರೆ ಎಂದು ಮಾಜಿ ಲೋಕಾಯುಕ್ತ ನ್ಯಾ. ಎನ್.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

       ಬಂಟರ ಸಂಘದಿಂದ ನಗರದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಭವನದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಇತ್ತೀಚೆಗೆ ನಿಧನರಾದ ಐಪಿಎಸ್ ಅಧಿಕಾರಿ ಡಾ.ಮಧುಕರ ಶೆಟ್ಟಿ ಅವರ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿ, ಮಧುಕರ್ ಶೆಟ್ಟಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ. ಭ್ರಷ್ಟ ರಾಜಕಾರಣಿಗಳಿಗೆ ಸಿಂಹಸ್ವಪ್ನರಾಗಿದ್ದರು. ಚಿಕ್ಕಮಗಳೂರಿನಲ್ಲಿ ಎಸ್ ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಪ್ರಭಾವಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದ ಹರಿಜನರ ಜಮೀನುಗಳನ್ನು ತೆರವುಗೊಳಿಸಿದ್ದರು. ಭ್ರಷ್ಟತೆಯ ವಿರುದ್ಧ ಸಮರ ಸಾರಿದ ಅವರು ಸಚಿವರನ್ನು ಕೂಡ ಜೈಲಿಗಟ್ಟಿದ್ದರು ಎಂದು ಅವರ ಸಾಹಸವನ್ನು ಬಣ್ಣಿಸಿದರು.

       ರಾಜ್ಯಪಾಲರ ಕಚೇರಿಗೆ ಅವರನ್ನು ವರ್ಗಾವಣೆ ಮಾಡಿದಾಗ ಮಧುಕರ್, ವ್ಯವಸ್ಥೆಯ ಕುರಿತು ನನ್ನ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅನೇಕ ಅಧಿಕಾರಿಗಳು ಮಧುಕರ ಅವರ ಪ್ರಾಮಾಣಿಕತೆ ಬಗ್ಗೆ ನನ್ನ ಬಳಿ ಹೇಳಿದಾಗ, ನಾನೇ ಸ್ವತಃ ಅವರಿಗೆ ಕರೆ ಮಾಡಿ ಲೋಕಾಯುಕ್ತ ಇಲಾಖೆಗೆ ಬರಲು ಆಹ್ವಾನ ನೀಡಿದ್ದೆ. ಅವರು ತಮ್ಮ ತಂದೆ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಮಾರ್ಗದರ್ಶನದಂತೆ ಪ್ರಾಮಾಣಿಕ ನಡೆಯನ್ನೇ ರೂಪಿಸಿಕೊಂಡಿದ್ದರು. ನರಹಂತಕ ವೀರಪ್ಪನ್ ಕಾರ್ಯಾಚರಣೆಯಲ್ಲಿ ಎಸ್‍ಐಟಿಯ ವಿಶೇಷ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಅವರಿಗೆ ಯಾವುದೇ ಪ್ರಶಸ್ತಿ, ಹೊಗಳಿಕೆಗಳ ಆಕಾಂಕ್ಷೆಯಿರಲಿಲ್ಲ. ಆದರೆ, ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಒಬ್ಬ ದಕ್ಷ ಅಧಿಕಾರಿಯನ್ನು ಒಂದೆರಡು ತಿಂಗಳಲ್ಲಿಯೇ ಬೇರೆ ಕಡೆ ವರ್ಗಾವಣೆ ಮಾಡಲಾಗುತ್ತದೆ ಎಂದು ವಿಷಾದಿಸಿದರು.

        ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಮಾತನಾಡಿ, ಮಧುಕರ್ ಅವರು ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರು ನಮ್ಮೊಂದಿಗಿಲ್ಲ, ಆದರೆ ಅವರ ಕಾರ್ಯ ನಮ್ಮೊಂದಿಗಿದೆ. ವ್ಯಕ್ತಿಯೋರ್ವ ಸತ್ತಾಗ ಅವರ ಆಸ್ತಿಯನ್ನು ಹೆಂಡತಿ, ಮಕ್ಕಳು ಹಂಚಿಕೊಳ್ಳುತ್ತಾರೆ. ಆದರೆ ಉತ್ತಮ ಕೆಲಸ ಮಾಡಿದಾಗ ಒಳ್ಳೆಯತನ ಎಂಬುದು ಜಗತ್ತಿನ ಪಾಲಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

       ವಡ್ಡರ್ಸೇ ರಘುರಾಮ್ ಶೆಟ್ಟಿ ಅವರನ್ನು ಒಮ್ಮೆ ಭೇಟಿ ಮಾಡಿದಾಗ, ನೀವು ಪ್ರಾಮಾಣಿಕ ಬರಹದ ಜೊತೆಗೆ ಉತ್ತಮ ವ್ಯಕ್ತಿಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದೀರಿ ಎಂದು ಹೇಳಿದ್ದೆ ಎಂಬ ಮಾತನ್ನು ಸ್ಮರಿಸಿಕೊಂಡರು.

        ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ ಮಾತನಾಡಿ, ಚಿಕ್ಕಮಗಳೂರಿನಲ್ಲಿ ನಕ್ಸಲ್ ಉಪಟಳ ಹೆಚ್ಚಾಗಿತ್ತು. ನಕ್ಸಲ್ ರ ಜೊತೆ ಮಧುಕರ್ ನಂಟು ಹೊಂದಿದ್ದಾರೆ ಎಂಬ ಮಾಹಿತಿ ಮುಖ್ಯಮಂತ್ರಿಗಳಿಗೆ ರವಾನೆಯಾಗಿತ್ತು. ಈ ಕುರಿತು ಮಧುಕರ್ ಅವರೊಂದಿಗೆ ಮಾತನಾಡುವಂತೆ ಮುಖ್ಯಮಂತ್ರಿಗಳು ನನಗೆ ಸೂಚಿಸಿದ್ದರು. ನಾನು ಅವರೊಂದಿಗೆ ಮಾತನಾಡಿದಾಗ, ನಕ್ಸಲರ ಮನಸ್ಸು ಪರಿವರ್ತನೆ ಮಾಡುತ್ತಿದ್ದೇನೆ. ಅವರಿಗೆ ಬೆಂಬಲ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರು ಯಾವ ಪರಿಸ್ಥಿತಿಯಲ್ಲಿ ನಕ್ಸಲ್ ವಾದವನ್ನು ಒಪ್ಪಿಕೊಳ್ಳುತ್ತಾರೆ ಎಂಬುದರ ಕುರಿತು ಪುಸ್ತಕವನ್ನೂ ಬರೆದಿದ್ದರು. ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು ಎಂದು ಸ್ಮರಿಸಿದರು.

       ಬೆಂಗಳೂರು ನಗರ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಎಸ್.ಗಿರೀಶ್ ಮಾತನಾಡಿ, ಮಧುಕರ್ ಅವರು ಪ್ರಚಾರ ಪ್ರಿಯಕರಾಗಿರಲಿಲ್ಲ. ಅತ್ಯಂತ ಸರಳ, ಪ್ರಾಮಾಣಿಕವಾಗಿ ಬದುಕು ಸಾಗಿಸಿದವರು. ಸುದ್ದಿ ಮಾಡುವುದಕ್ಕಾಗಿ ಪತ್ರಕರ್ತರಿಗೆ ಭಾವ ಚಿತ್ರ ತೆಗೆಯಲು ಕೂಡ ಅವಕಾಶ ನೀಡುತ್ತಿರಲಿಲ್ಲ. ದುಡ್ಡಿಗೆ ಪ್ರಶಸ್ತಿಗಳಿಗೆ ಅವರು ಬೆಲೆಕೊಡಲಿಲ್ಲ. ಅವರ ಪ್ರಾಮಾಣಿಕತೆಯ ಬಗ್ಗೆ ಯುವ ಪೀಳಿಗೆಗೆ ತಿಳಿಸಲು ಅವರ ಕುರಿತು ಸಂಶೋಧನಾ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

        ನಾನು ಅವರ ಎದುರಿಗೆ ಕುಳಿತು ಮಾತನಾಡುತ್ತಿದ್ದಾಗ ಸ್ವಾತಂತ್ರ್ಯ ಹೋರಾಟಗಾರನ ಹತ್ತಿರ ಮಾತನಾಡುತ್ತಿದ್ದೇನೆ ಎಂಬ ಭಾವನೆ ವ್ಯಕ್ತವಾಗುತ್ತಿತ್ತು. ಅವರೊಬ್ಬರ ಮಾನವತಾವಾದಿಯಾಗಿದ್ದರು. ಪುಸ್ತಕದ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ಬದುಕಿದವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಂಟರ ಸಂಘದ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ ಹಾಗೂ ಗೌರವ ಕಾರ್ಯದರ್ಶಿ ಮಧುಕರ ಎಂ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap