ಬೆಂಗಳೂರು
ಕೊರೋನಾ ಸೋಂಕು ನಿಯಂತ್ರಣ ಉದ್ದೇಶದಿಂದ ರಾಜ್ಯ ಸರ್ಕಾರ ವೆಂಟಿಲೇಟರ್ ಸೇರಿ ಹಲವು ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಭಾರೀ ಅಕ್ರಮಗಳನ್ನು ನಡೆಸಿದ್ದು, ಇದರ ವಿರುದ್ಧ ಜನಜಾಗೃತಿ ಮೂಡಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ಕೆಪಿಸಿಸಿ ಹಿರಿಯ ನಾಯಕರ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಖಂಡ್ರೆ, ಕೊರೋನಾ ಸೋಂಕು ನಿಯಂತ್ರಿಸಲಾಗದ ಮಂತ್ರಿಗಳು ದಿನಕ್ಕೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆರ್ಥಿಕ ಸಂಕಷ್ಟ, ಆರೋಗ್ಯ ಸಂಕಷ್ಟ ಎರಡೂ ಎದುರಾಗಿದೆ. ಪ್ರತಿಪಕ್ಷವಾಗಿ ವೈಫಲ್ಯದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಿ,ಜನಜಾಗೃತಿ ಮೂಡಿಸಲಿದೆ ಎಂದರು.
ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಲೇ ಇದೆ. ಇಲ್ಲಿಯವರೆಗೆ ನಾಲ್ಕು ತಿಂಗಳಾದರೂ ಯಾವುದೇ ಸೂಕ್ತ ಕ್ರಮಕೈಗೊಂಡಿಲ್ಲ. ಇನ್ನೂ 70 ಸಾವಿರ ಗಂಟಲು ದ್ರವ ಪರೀಕ್ಷೆ ಫಲಿತಾಂಶ ಬರಬೇಕಿದೆ. ಸೋಂಕು ನಿಯಂತ್ರಿಸಲು ಸರ್ಕಾರ ಸಂಪೂರ್ಣ ವೈಫಲ್ಯವಾಗಿದ್ದು, ಮೆಡಿಕಲ್ ಕಿಟ್ ಖರೀದಿಯಲ್ಲಿ ಭಾರೀ ಅಕ್ರಮವೆಸಗಿದೆ ಎಂದು ದೂರಿದರು.
ಮತ್ತೋರ್ವ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ತಮಿಳುನಾಡು ಸರ್ಕಾರ 4.80 ಲಕ್ಷ ರೂ.ಗೆ ವೆಂಟಿಲೇಟರ್ ಖರೀದಿ ಮಾಡಿದೆ. ಆದರೆ ನಮ್ಮ ಸರ್ಕಾರ 18 ಲಕ್ಷ ರೂ ನೀಡಿದೆ. ಇದರಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟವಾಗಿದೆ ಎಂದರು.ಬಿಬಿಎಂಪಿ ಆಯುಕ್ತರನ್ನು ವರ್ಗಾವಣೆ ಮಾಡಿ ಅಕ್ರಮ ಅವ್ಯವಹಾರವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕು. ನಗರದಲ್ಲಿ ಸೋಂಕಿತರಿಗೆ ಹಾಸಿಗೆಗಳ ಕೊರತೆ ಕೂಡ ಹೆಚ್ಚಾಗಿದೆ. ಇದನ್ನು ನಿವಾರಿಸುವ ಕೆಲಸ ಮಾಡಬೇಕು. ಸರ್ಕಾರ ಎಲ್ಲದರಲ್ಲೂ ಅವ್ಯವಹಾರವನ್ನೇ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಕೊರೋನಾ ಅಕ್ರಮಗಳ ಬಗ್ಗೆ ನಾವು ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಮೊದಲು ಉತ್ತರ ಕೊಡಬೇಕು. ವೈದ್ಯಕೀಯ ಕಿಟ್ ಖರೀದಿ ಅವ್ಯವಹಾರದ ಬಗ್ಗೆ ಲೆಕ್ಕ ಕೊಡಬೇಕು. ಕೊರೋನಾದಲ್ಲಿ ಸರ್ಕಾರ ಮಾಡಿರುವ ಕರ್ಮಕಾಂಡ ಬಯಲಾಗುತ್ತಿದ್ದು,ರಾಜ್ಯದ ಜನರಿಗೆ ಎಲ್ಲವೂ ಈಗ ಅರ್ಥವಾಗುತ್ತಿದೆ ಎಂದರು.
ಬಿಬಿಎಂಪಿಯ ಹಿಂದಿನ ಆಯುಕ್ತರು ಜನರ ಬಳಿ ಹೋಗಿ ಸೋಂಕಿನ ಕುರಿತು ಮನವರಿಕೆ ಮಾಡಿಕೊಡುತ್ತಿದ್ದರು. ಆದರೆ ಅಂತಹ ಅಧಿಕಾರಿಯನ್ನು ಏಕಾಏಕಿ ವರ್ಗಾವಣೆಮಾಡಲಾಗಿದೆ. ಆದರೆ ವರ್ಗಾವಣೆ ವಿಚಾರದಲ್ಲಿ ತಾವು ಹೆಚ್ಚೇನು ಮಾತನಾಡುವುದಿಲ್ಲ ಎಂದರು.
ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಸೋಂಕು ತೀವ್ರವಾಗಿರುವ ಈ ಸಂದರ್ಭದಲ್ಲಿ ರಾಜಕೀಯ ಟೀಕೆಟಿಪ್ಪಣಿ ಮಾಡುವುದಿಲ್ಲ. ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಆರೋಪ ಕೇಳಿಬರುತ್ತಿವೆ. ಹೈಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆಯಾಗಿದೆ. ಕಿಟ್ ಖರೀದಿಯಲ್ಲಿ ಅವ್ಯವಹಾರವಾಗಿದ್ದು, ಈ ಬಗ್ಗೆ ತನಿಖೆಗೆ ಸದನ ಸಮಿತಿ ರಚನೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
