ತಿಪಟೂರು
ವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ
ತಾಲ್ಲೂಕಿನಲ್ಲಿ ಮೇ ಅಂತ್ಯದಲ್ಲಿ ಮತ್ತು ಜೂನ್ ಮೊದಲ ವಾರದಲ್ಲಿ ಉತ್ತಮ ಮಳೆಯಾಗಿದ್ದು, ರೈತನ ಮೊಗದಲ್ಲಿ ಆಶಾ ಭಾವನೆಯನ್ನು ಮೂಡಿಸಿದೆ. ಇನ್ನು ಸ್ವಲ್ಪ ಮಳೆಯಾದರೆ ತಾನು ಬಿತ್ತಿರುವ ಮುಂಗಾರಿನ ಬೆಳೆ ಕೈ ಸೇರುವ ನಿರೀಕೆÉ್ಷಯಲ್ಲಿ ಮುಗಿಲು ನೋಡುತ್ತಾ, ಬೆಳೆಯ ರಕ್ಷಣೆಯಲ್ಲಿ ತೊಡಗಿದ್ದಾನೆ.
ಕಳೆದ ತಿಂಗಳು ತಾಲ್ಲೂಕಿನಾದ್ಯಂತ ನಿರೀಕ್ಷೆಗಿಂತ ಹೆಚ್ಚಿನ ಮಳೆ ಸುರಿದಿತ್ತು. ಅದರಲ್ಲೂ ಹೊನ್ನವಳ್ಳಿ, ನೊಣವಿನಕೆರೆ ಹಾಗೂ ಕಸಬಾ ಹೋಬಳಿಯಲ್ಲಿ ಅತಿ ಹೆಚ್ಚು ಮಳೆಯಾಗಿತ್ತು. ಇದರಿಂದಾಗಿ ಕೆರೆ-ಕಟ್ಟೆಗಳು ತಕ್ಕ ಮಟ್ಟಿಗೆ ತಳದಲ್ಲಿ ನೀರು ಕಂಡಿದ್ದವು. ಮೇ ತಿಂಗಳಲ್ಲಿ 150.30 ಎಂ.ಎಂ ವಾಡಿಕೆ ಮಳೆ ಇದ್ದು, ಅದಕ್ಕೆ ಪ್ರತಿಯಾಗಿ 145 ಎಂ.ಎಂ ಮಳೆಯಾಗಿತ್ತು. ಮೇ ತಿಂಗಳು ಕೊನೆಗೊಂಡಂತೆ ತಿಪಟೂರಿನಲ್ಲಿ 6226 ಹೆಕ್ಟೇರ್‍ನಲ್ಲಿ ದ್ವಿದಳ ಧಾನ್ಯಗಳು ಹಾಗೂ 175 ಹೆಕ್ಟೇರ್‍ನಲ್ಲಿ ಎಣ್ಣೆಕಾಳು ಸೇರಿದಂತೆ 6500 ಹೆಕ್ಟೇರ್‍ನಲ್ಲಿ ಬಿತ್ತನೆ ಮಾಡಲಾಗಿದೆ.
ಜೂನ್ 15 ರವರೆಗೂ ವಾಡಿಕೆಯಂತೆ 44.50 ಎಂ.ಎಂ ಮಳೆ ಬರ ಬೇಕಾಗಿತ್ತು. ಆದರೆ ಜೂನ್ 15 ಕ್ಕೆ ಕೊನೆಗೊಂಡಂತೆ 25.50ಎಂ.ಎಂ ಮಳೆಯಾಗಿದ್ದು, ಶೇಕಡ 42.70 ಮಳೆ ಕೊರತೆ ಯಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಬೆಳಗಳಿಗೆ ಈ ಸಮಯದಲ್ಲಿ ಮಳೆ ಅವಶ್ಯಕತೆ ಹೆಚ್ಚಾಗಿರುತ್ತದೆ. ಈಗ ಹೆಸರು, ಅಲಸಂದೆ, ತರಣಿ ಕಾಳು ಹೂವಾಗಿ, ಕಾಳು ಕಟ್ಟುವ ಹಂತದಲ್ಲಿದೆ. ಇನ್ನು ಒಂದು ಬಾರಿ ಸೂಕ್ತವಾದ ಮಳೆಯಾದರೆ ಉತ್ತಮ ಬೆಳೆ ಕೈ ಸೇರುತ್ತದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಮೇ ತಿಂಗಳು ಮಳೆ ಕೊರತೆಯಾಗಿರುವ ಕಾರಣ ಸಹಜವಾಗಿಯೇ ಕೃಷಿ ಚಟುವಟಿಕೆಗೆ ಹಿನ್ನಡೆ ಆಗಿದೆ. ಲಾಕ್‍ಡೌನ್ ಕಾರಣಕ್ಕೆ ಕೃಷಿಕರು ಈಗಾಗಲೇ ಸಾಕಷ್ಟು ನಷ್ಟÀ್ಟ ಅನುಭವಿಸಿದ್ದಾರೆ. ಇದರ ಜೊತೆಗೆ ಮಳೆ ಇಲ್ಲದೆ ಜಮೀನು ಉಳುಮೆ ಮಾಡಲಾಗದೆ ಕೈ ಚೆಲ್ಲುವ ಪರಿಸ್ಥಿತಿ ಇತ್ತು. ಆದರೆ ಕೊನೆ ಹಂತದಲ್ಲಾದರೂ ಕೃಪೆ ತೋರಿದ ವರುಣನಿಂದ ಸಿಕ್ಕ ಅಲ್ಪ ಸಮಯದಲ್ಲೇ ಲಾಕ್‍ಡೌನ್‍ಗಾಗಿ ಮನೆಗೆ ಬಂದಿದ್ದ ಮಕ್ಕಳು ಮರಿಗಳೊಂದಿಗೆ ಶೀಘ್ರವಾಗಿ ಹೊಲವನ್ನು ಹದ ಮಾಡಿಕೊಂಡು ಬಿತ್ತನೆ ಕಾರ್ಯಮಾಡಿದ್ದಾರೆ. ಕಡೆ ಗಳಿಗೆಯಲ್ಲಿ ಬಿತ್ತನೆ ಕಾರ್ಯ ಮಾಡಿದ್ದರಿಂದ ರಾಗಿ ಬೆಳೆಗೆ ಸ್ವಲ್ಪ ತೊಂದರೆಯಾಗಬಹುದು. ಆದರೆ ತಾವು ಹಾಕಿರುವ ಬಂಡವಾಳಕ್ಕೆ ಯಾವುದೇ ಮೋಸವಾಗದಂತೆ ತಮ್ಮನ್ನು ಮಳೆರಾಯ ಕಾಪಾಡುತ್ತಾನೆಂಬ ನಂಬಿಕೆಯಿಂದ ಅನ್ನದಾತರು ಮಳೆಗಾಗಿ ಕಾಯುವ ಚಕ್ರವಾಕ ಪಕ್ಷಿಯಂತೆ ಮುಗಿಲನ್ನೆ ದಿಟ್ಟಿಸುತ್ತಾ ಮಳೆಯನ್ನು ಕಾಯುವುದರೊಂದಿಗೆ ಇರುವ ಅಲ್ಪ ಬೆಳೆಯನ್ನು ಕಾಯುತ್ತಾ ಕುಳಿತಿದ್ದಾರೆ.
ತಿಪಟೂರಿನಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ದ್ವಿದಳ ಧಾನ್ಯ ಹಾಗೂ ಎಣ್ಣೆ ಕಾಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗುತ್ತದೆ. ಈ ಬಾರಿ 5650 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು, ಪ್ರಾರಂಭದಲ್ಲಿ ಬಂದ ಉತ್ತಮ ಮಳೆಯಿಂದ 6226 ಹೆಕ್ಟೇರ್‍ನಲ್ಲಿ ದ್ವಿದಳ ಧಾನ್ಯ ಬೆಳೆಯಲಾಗಿದೆ. ಮುಂಗಾರು ಪೂರ್ವದಲ್ಲಿ ತೊಗರಿ, ಅಲಸಂದೆ ಮೊದಲಾದ ಧಾನ್ಯಗಳ ಬಿತ್ತನೆಯ ವಾಡಿಕೆ ಇದೆ. ಹೀಗಾಗಿ ಇಲ್ಲಿಯೂ 600 ಹೆಕ್ಟೇರ್‍ಗೆ ಪ್ರತಿಯಾಗಿ ಕೇವಲ 175 ಹೆಕ್ಟೇರ್‍ನಲ್ಲಿ ರೈತರು ಎಣ್ಣೆಕಾಳು ಬಿತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ