ರಾಜೇಶ್ ಗೌಡ ಬಿಜೆಪಿ ಸೇರ್ಪಡೆ ಹಿಂದೆ ಎಚ್ಡಿಕೆ ಪಾತ್ರ!

 ಒಗ್ಗಟ್ಟು ಪ್ರದರ್ಶಿಸಿದ ಕೈ ನಾಯಕರು

ತುಮಕೂರು:

    ಶಿರಾ ಉಪಚುನಾವಣೆ ಪ್ರಚಾರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಪೆದ್ದನಂತೆ ಹೇಳಿಕೆ ನೀಡಿದ್ದು, ಮಾಜಿ ಮುಖ್ಯಮಂತ್ರಿ ಆಗಿ ತಮ್ಮ ಸ್ಥಾನದ ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.

    ನಗರ ಹೊರವಲಯದ ಸತ್ಯಮಂಗಲದ ಬಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆಗೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿ ಅವರು ಬಿಜೆಪಿ ಸೇರ್ಪಡೆಯಾದ ರಾಜೇಶ್‍ಗೌಡನಿಗೂ ನನ್ನ ಮಗನಿಗೂ ಇದ್ದ ವೃತ್ತಿ ಸ್ನೇಹ ಸಂಬಂಧವನ್ನೇ ತಿರುಚಿ ನಾನೇ ಅವರನ್ನು ಬಿಜೆಪಿಗೆ ಸೇರಿಸಿದೆ ಎಂದು ತಪ್ಪು ಅರ್ಥ ಬರುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ವೈದ್ಯನಾದ ನನ್ನ ಮಗನ ಜತೆ ರೇಡಿಯಾಲಜಿಸ್ಟ್ ಆದ ರಾಜೇಶ್‍ಗೌಡ ನಡುವೆ ವೃತ್ತಿ ಆಧಾರಿತ ಸ್ನೇಹವಿದ್ದುದು ನಿಜ. ಹಾಗಂತ ಆತ ನನಗೆ ಸ್ನೇಹಿತನೇ.

    ರಾಜಕೀಯಕ್ಕೂ ಸ್ನೇಹಕ್ಕೂ ಎಲ್ಲಿಯ ಸಂಬಂಧ. ಈ ರೀತಿ ತಳುಕು ಹಾಕುವುದು ಸರಿಯಲ್ಲ. ಆಗಿದ್ದರೆ ನಾನು ಕುಮಾರಸ್ವಾಮಿ ಅವರನ್ನು ಕೇಳ ಬಯಸುತ್ತೇನೆ. ರಾಜೇಶ್‍ಗೌಡನ ತಂದೆ ಸಿ.ಪಿ.ಮೂಡ್ಲಗಿರಿಯಪ್ಪ ಅವರು ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪರ ಇದ್ದವರು. ಈ ಹಿನ್ನೆಲೆಯಲ್ಲಿ ಎಚ್ಡಿಕೆ ಅವರೇ ಏಕೆ ತಂದೆಯ ಮೂಲಕ ಮಗನನ್ನು ಬಿಜೆಪಿಗೆ ಸೇರಿಸಿರಬಾರದು ಎಂದು ಪ್ರಶ್ನಿಸಿದರು.

ವೈಮನಸ್ಯ ಇಲ್ಲ, ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ

    ಕಾಂಗ್ರೆಸ್ ಮುಖಂಡರಲ್ಲಿ ಯಾವುದೇ ವೈಮನಸ್ಯ ಇಲ್ಲ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ ಎಂದ ಸಿದ್ದರಾಮಯ್ಯ ಅವರು ಚುನಾವಣೆ ಪ್ರಚಾರದಲ್ಲಿ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ವೆಂಕಟರಮಣಪ್ಪ, ಎಸ್.ಪಿ.ಮುದ್ದಹನುಮೇಗೌಡ, ಸಾಲಿಂಗಯ್ಯ, ಷಫಿ ಅಹಮದ್, ಕಾರ್ಯಾಧ್ಯಕ್ಷ ಸಾಸಲು ಸತೀಶ್ ಹೀಗೆ ಎಲ್ಲ ನಾಯಕರು ಒಗ್ಗೂಡಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಪ್ರಚಾರ ನಡೆಸುತ್ತಿದ್ದು, ಶಿರಾ ಹಾಗೂ ರಾಜರಾಜೇಶ್ವರಿ ನಗರ ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಸಾಧಿಸುವುದು ನಿಶ್ಚಿತ. ಶಿರಾದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಡುವೆ ತ್ರಿಕೋನಸ್ಪರ್ಧೆ ಇದ್ದು, ನಾನು ಸಹ ಮುಂದಿನ ದಿನಗಳಲ್ಲಿ ಶಿರಾ ಕ್ಷೇತ್ರದಲ್ಲಿ ನಾಲ್ಕು ದಿನಗಳ ಕಾಲ ಪ್ರಚಾರ ಕೈಗೊಳ್ಳುತ್ತೇನೆ ಎಂದರು.

    ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳು ಜನಮಾನಸದಿಂದ ದೂರವಾಗಿಲ್ಲ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಪಪ್ರಚಾರದಿಂದ ಜಯಚಂದ್ರಗೆ ಸೋಲಾಯಿತೆ ವಿನಃ ಬೇರ್ಯಾವ ಅಭಿವೃದ್ಧಿ ಹಿನ್ನಡೆಯ ಪ್ರಶ್ನೆಯಿಲ್ಲ. ಕಾಂಗ್ರೆಸ್ ಸರಕಾರದಲ್ಲಿ ಕೊಟ್ಟ ಅನ್ನಭಾಗ್ಯ, ಕ್ಷೀರಭಾಗ್ಯ, ನೀರಾವರಿ, ರಸ್ತೆ ಮೂಲಸೌಕರ್ಯ ಕಾರ್ಯಕ್ರಮಗಳೇ ಇನ್ನೂ ಚಾಲ್ತಿಯಲ್ಲಿವೆ ಹೊರತು ಬಿಜೆಪಿ ಸರಕಾರ, ಜೆಡಿಎಸ್‍ನಿಂದ ಒಂದು ಹೊಸ ಕಾರ್ಯಕ್ರಮ ಕೊಡಲು ಸಾಧ್ಯವಾಗಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap