ಸೌಹಾರ್ಧತೆಯಿಂದ ಹಬ್ಬ ಆಚರಿಸಿ, ಭಾವೈಕ್ಯತೆ ಮೆರೆಯಿರಿ : ರಶ್ಮಿ.ಯು 

ಕುಣಿಗಲ್ :

     ಶಾಂತಿ, ಸೌಹಾರ್ಧತೆಯಿಂದ ಯುಗಾದಿ ಮತ್ತು ರಂಜಾನ್ ಹಬ್ಬ ಆಚರಣೆ ಮಾಡುವ ಮೂಲಕ ಭಾವೈಕ್ಯತೆ ಮೆರೆಯಬೇಕೆಂದು ತಹಶೀಲ್ದಾರ್ ರಶ್ಮಿ.ಯು ತಿಳಿಸಿದರು.

   ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ರಂಜಾನ್ ಹಾಗೂ ಯುಗಾದಿ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

   ಹಿಂದೂಗಳಿಗೆ ಯುಗಾದಿ ಹಾಗೂ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಹಬ್ಬಗಳು ಪವಿತ್ರ ಹಬ್ಬಗಳಾಗಿವೆ. ಎರಡೂ ಹಬ್ಬಗಳು ಈ ಭಾರಿ ಒಟ್ಟಿಗೆ ಬಂದಿರುತ್ತವೆ, ಈ ಹಬ್ಬಗಳನ್ನು ಸಂಭ್ರಮ, ಸಡಗರದಿಂದ ಆಚರಿಸಬೇಕು. ಕಿಡಿಗೇಡಿಗಳು ಹರಡುವ ವದಂತಿಗಳಿಗೆ ಕಿವಿಗೊಡದೇ ಶಾಂತಿಯುತವಾಗಿ ಎಲ್ಲರೂ ಹಬ್ಬವನ್ನು ಸಂತೋಷದಿಂದ ಆಚರಿಸಬೇಕು ಎಂದರು.

  ಕುಣಿಗಲ್ ಠಾಣೆಯ ಇನ್ಸ್ ಸ್ಪೆಕ್ಟರ್ ಎಸ್.ಬಿ.ನವೀನ್‌ಗೌಡ ಮಾತನಾಡಿ ಹಬ್ಬಗಳ ಆಚರಣೆ ನೆಪದಲ್ಲಿ ಕಾನೂನು ಬಾಹಿರ ಕೃತ್ಯ ಎಸಗಿ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು, ಎಲ್ಲ ಧರ್ಮೀಯರು ಕೋಮು ಸೌಹಾರ್ದತೆಯಿಂದ ಬದುಕಿದರೆ ಶಾಂತಿಯ ತೋಟವಾಗುತ್ತದೆ. ಯಾವುದೇ ಕಾರಣಕ್ಕೂ ಭಾವೋದ್ವೇಗಕೊಳಗಾಗಿ ಕಾನೂನು ಕೈಗೆತ್ತಿಕೊಳ್ಳಬಾರದು. ಪ್ರತಿಯೊಂದು ಸಮಸ್ಯೆಗೂ ಕಾನೂನಿನಲ್ಲಿ ಪರಿಹಾರವಿದೆ. ಸಹೋದರತ್ವ ಭಾವದಿಂದ ಹಬ್ಬಗಳನ್ನು ಆಚರಣೆ ಮಾಡಿ ಇತರರಿಗೆ ಮಾದರಿಯಾಗಬೇಕು ಎಂದು ಕರೆ ನೀಡಿದರು

  ಭಾವೈಕ್ಯತೆಗೆ ಮೂಡಿಸಿದ ಪೊಲೀಸ್ ಇಲಾಖೆ : ಪುರಸಭಾ ಮಾಜಿ ಅಧ್ಯಕ್ಷ ರೆಹಮಾನ್ ಷರೀಪ್ ಮಾತನಾಡಿ ಕಳೆದ ಗಣಪತಿ ಹಬ್ಬ ಮತ್ತು ಈದ್ ಮಿಲಾದ್ ಕಡೆ ದಿನದಂದು ಎರಡು ಧರ್ಮಿಯರು ಸೌಹಾರ್ಧತೆಯಿಂದ ಸಹೋದರತ್ವದಲ್ಲಿ ಆಚರಿಸಿದರು, ಇದಕ್ಕೆ ಪೊಲೀಸ್ ಠಾಣೆಯ ಇನ್ಸ್ ಸ್ಪೆಕ್ಟರ್ ಎಸ್.ಪಿ.ನವೀನ್‌ಗೌಡ ಅವರ ಸಹಕಾರ ಅತಿಮುಖ್ಯವಾಗಿತ್ತು, ಗಣಪತಿ ಮೆರವಣಿಯಲ್ಲಿ ಬಂದ ಹಿಂದುಗಳಿಗೆ ಮುಸ್ಲಿಂ ಭಾಂದವರು, ತಂಪು ಪಾನಿಯಾನ ನೀಡಿದರೇ, ಈದ್ ಮಿಲಾದ್ ಮೆರವಣಿಗೆ ವೇಳೆಯಲ್ಲಿ ಹಿಂದುಗಳು ಮುಸ್ಲಿಂ ಭಾಂದವರಿಗೆ ಸಿಹಿತಿಂಡಿ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ತಾಲೂಕಿನಲ್ಲಿ ಹಿಂದು ಮುಸ್ಲಿಂ ಭಾಂದವರು ಸಹೋದರತ್ವದಿಂದ ಇದ್ದೇವೆ ಎಂದು ಹೇಳಿದರು.    

ಈ ವೇಳೆ ಪುರಸಭಾ ಮಾಜಿ ಉಪಾಧ್ಯಕ್ಷ ಅಬ್ದುಲ್ ಅಮೀದ್, ಮಾಜಿ ಸದಸ್ಯ ಯೂಸಪ್, ಭಜರಂಗ ದಳದ ತಾಲೂಕು ಅಧ್ಯಕ್ಷ ಗಿರೀಶ್, ಗ್ರಾ.ಪಂ ಸದಸ್ಯ ರಾಜಾಹುಲಿ ಇದ್ದರು.