ಬಳ್ಳಾರಿ:
ಕೇಂದ್ರ, ರಾಜ್ಯ ಸರ್ಕಾರಗಳು ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್, ಬೀಜ ಕಾಯ್ದೆ, ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಮತ್ತು ರೈತರ ಐಕ್ಯ ಹೋರಾಟ ಸಮಿತಿ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಬಳ್ಳಾರಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ತುಂಗಭದ್ರ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಸಿಪಿಎಂ, ಜನವಾದಿ ಮಹಿಳಾ ಸಂಘಟನೆ, ಎಸ್‍ಯುಸಿಐ, ಕಾಂಗ್ರೆಸ್ ಪಕ್ಷ, ದಲಿತ ಸಂಘರ್ಷ ಸಮಿತಿ, ಹಮಾಲಿ ಸಂಘಟನೆ, ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ, ಎಐವೈಎಫ್, ಕರ್ನಾಟಕ ರಕ್ಷಣಾ ವೇದಿಕೆ, ಜನಸೈನ್ಯ ಸಂಘಟನೆ, ಜಯಕರ್ನಾಟಕ ಸಂಘಟನೆ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಬಂದ್‍ನಲ್ಲಿ ಭಾಗವಹಿಸಿ, ರಸ್ತೆತಡೆ, ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಬಂದ್ ಹಿನ್ನೆಲೆಯಲ್ಲಿ ಭಾನುವಾರವೇ ರೈತ, ಕನ್ನಡ, ಕಾರ್ಮಿಕ ಸಂಘಟನೆಗಳ ಮುಖಂಡರು ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿನ ವಾಣಿಜ್ಯ ಮಳಿಗೆಗಳು ಸ್ವಯಂಪ್ರೇರಣೆಯಿಂದಲೇ ಬಂದ್ ಆಗಿದ್ದವು. ಬೆಳಗ್ಗೆ 6 ಗಂಟೆಗೆ ಸಂಚಾರ ಆರಂಭಿಸಿದ್ದ ಸಾರಿಗೆ ಬಸ್‍ಗಳು, ನಗರದ ಪ್ರಮುಖ ವೃತ್ತಗಳು ಬಂದ್ ಆಗಿದ್ದರಿಂದ 7 ಗಂಟೆ ಸುಮಾರಿಗೆ ಸ್ಥಗಿತಗೊಳಿಸಲಾಯಿತು. ಬಳಿಕ ಮಧ್ಯಾಹ್ನ 3 ಗಂಟೆಯ ನಂತರ ಬಸ್‍ಗಳು ಪುನಃ ಸಂಚಾರವನ್ನು ಆರಂಭಿಸಿದವು. ಬೇರೆ ಕಡೆಯಿಂದ ಬಂದ ಬಸ್‍ಗಳು, ಬಸ್ ನಿಲ್ದಾಣ ಪ್ರವೇಶ ಮಾಡದೇ ಹೊರಗಡೆಯಿಂದಲೇ ತಮ್ಮ ಊರುಗಳಿಗೆ ತೆರಳಿದವು.
ಖಾಸಗಿ ಮತ್ತು ಆಂಧ್ರಪ್ರದೇಶದ ಸಾರಿಗೆ ಬಸ್‍ಗಳು ಮತ್ತು ಲಾರಿ, ಕಾರು, ಜೀಪುಗಳ ಓಡಾಟ ಎಂದಿನಂತೆ ಚಾಲನೆಯಲ್ಲಿತ್ತು. ಇನ್ನು ಪ್ರಯಾಣಿಕ ಆಟೋಗಳು ಕಡಿಮೆ ಪ್ರಮಾಣದಲ್ಲಿ ಎಂದಿನಂತೆ ಚಾಲನೆ ಪಡೆದುಕೊಂಡಿದ್ದವು. ರಸ್ತೆಬದಿಯ ತರಕಾರಿ, ಹಣ್ಣು, ಬೀಡಿ ಅಂಗಡಿ, ಟೀ ಅಂಗಡಿಗಳನ್ನು ತೆರೆದಿದ್ದವು. ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ತೆದಿದ್ದವು. ಎಪಿಎಂಸಿ ಆವರಣದಲ್ಲಿನ ತರಕಾರಿ ಮಾರುಕಟ್ಟೆ ಬೆಳಗ್ಗೆ 9-10 ಗಂಟೆವರೆಗೆ ನಡೆದು ನಂತರ ಬಂದ್ ಮಾಡಲಾಯಿತು. ಎಪಿಎಂಸಿ ಸಂಪೂರ್ಣ ಬಂದ್ ಆಗಿತ್ತು. ಚಿತ್ರಮಂದಿರ, ಶಾಲಾ, ಕಾಲೇಜುಗಳು ಎಂದಿನಂತೆ ಬಂದ್ ಆಗಿದ್ದವು. ಬ್ಯಾಂಕ್, ಅರೆ ಸರ್ಕಾರಿ, ಸರ್ಕಾರಿ ಕಚೇರಿಗಳು ತೆರೆದಿದ್ದವು. ಬೀದಿ ಬದಿಯಲ್ಲಿ ಹಣ್ಣು, ಹೂ, ತರಕಾರಿಗಳ ಮಾರಾಟ, ಬಂಡಿ ಮತ್ತು ಸಣ್ಣ ಹೊಟೇಲ್‍ಗಳಲ್ಲಿ ಉಪಹಾರದ ಮಾರಾಟ ದಿನ ನಿತ್ಯದಂತೆ ಚಾಲನೆಯಲ್ಲಿದ್ದವು. ಸಾರ್ವಜನಿಕ ಸಂಚಾರ ಎಂದಿನಂತೆ ಕಂಡುಬಂತು.
ಬಂದ್ ಹಿನ್ನೆಲೆಯಲ್ಲಿ ಸೋಮವಾರ ಬೆಳಗಿನಜಾವ ಹೊಸಪೇಟೆ ರಸ್ತೆಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ನೇತೃತ್ವದಲ್ಲಿ ಕಾರ್ಯಕರ್ತರು ಟೈಯರ್‍ಗೆ ಬೆಂಕಿ ಹಚ್ಚಿ ಬಸ್, ಲಾರಿಗಳನ್ನು ತಡೆಯುವ ಮೂಲಕ ಬಂದ್‍ಗೆ ಚಾಲನೆ ನೀಡಿದರು. ಯಾವುದೇ ಸಾರಿಗೆ ಬಸ್, ಲಾರಿ ಇತರೆ ವಾಹನಗಳನ್ನು ಕೆಲಹೊತ್ತು ನಗರದೊಳಗೆ ಬರದಂತೆ ತಡೆದರು. ಬಳಿಕ ನಗರದ ಹೃದಯ ಭಾಗದಲ್ಲಿನ ಗಡಗಿ ಚನ್ನಪ್ಪ ವೃತ್ತದಲ್ಲಿ ಮತ್ತೊಂದು ಕನ್ನಡಪರ ಸಂಘಟನೆಯು ಟೈಯರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ರಾಜ್ಯ ಸರ್ಕಾರಗಳ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ನಂತರ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಎಲ್ಲ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಜಮಾಯಿಸಿ ಬಂದ್ ನಡೆಸಿದರು. ರೈತ ಸಂಘ, ಕರವೇ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ನಗರದ ವಿವಿಧ ರಸ್ತೆಗಳಲ್ಲಿ ಬೈಕ್‍ರ್ಯಾಲಿ ನಡೆಸಿದರೆ, ಡಿಎಸ್‍ಎಸ್, ಸಿಪಿಎಂಸಿ, ಎಐವೈಎಫ್, ಎಐಡಿಎಸ್‍ಒ, ಎಐಎಂಎಸ್‍ಎಸ್ ಸಂಘಟನೆಗಳ ಕಾರ್ಯಕರ್ತರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕೊಳಗಲ್ಲು ಮತ್ತು ಚಾಗನೂರು ಸಿರಿವಾರ ಭೂ ರಕ್ಷಣಾ ಹೋರಾಟ ಸಮಿತಿಯವರು ಎತ್ತುಬಂಡಿಗಳ ಮೂಲಕ ಆಗಮಿಸಿ ಬಂದ್‍ಗೆ ಬೆಂಬಲಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಮಹ್ಮದ್ ರಫೀಕ್ ನೇತೃತ್ವದಲ್ಲಿ ಕಾರ್ಯಕರ್ತರು ವಿಮ್ಸ್ ಬಳಿಯ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಅಲ್ಲಿಂದ ಎತ್ತುಬಂಡಿಗಳ ಮೂಲಕ ಗಡಗಿ ಚನ್ನಪ್ಪ ವೃತ್ತಕ್ಕೆ ಆಗಮಿಸಿ ಬಂದ್‍ಗೆ ಬೆಂಬಲಿಸಿದರು.
ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಕಾರ್ಮಿಕ ಮುಖಂಡರಾದ ಕೆ.ಸೋಮಶೇಖರ್, ಯು.ಬಸವರಾಜ್, ರೈತರ ಮುಖಂಡರಾದ ವಿ.ಎಸ್.ಶಿವಶಂಕರ್, ದರೂರು ಪುರುಷೋತ್ತಮಗೌಡರು ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಮಾತನಾಡಿದರು. ಕೇಂದ್ರ, ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಮಸೂದೆಯನ್ನು ಜಾರಿ ಮಾಡಲಾಗಿದೆ. ಇದು ರೈತ ಹಾಗೂ ಜನವಿರೋಧಿ ಮಸೂದೆಗಳಾಗಿವೆ. ಇದರಿಂದ ಪಡಿತರ ವ್ಯವಸ್ಥೆ ಸರ್ವ ನಾಶವಾಗುತ್ತದೆ. ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗುತ್ತದೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೇ, ಆರು ಕಾಸು ಮೂರು ಕಾಸಿಗೆ ಕಂಪನಿಗಳಿಗೆ ತಮ್ಮ ಭೂಮಿಯನ್ನು ಮಾರಾಟ ಮಾಡಿಕೊಂಡು ಈ ದೇಶದ ಬೆನ್ನೆಲುಬಾಗಿರುವ ರೈತರನ್ನು ಬೀದಿಗೆ ತಂದು ನಿಲ್ಲಿಸುವ ಮಸೂದೆಗಳಾಗಿವೆ. ಅದಕ್ಕಾಗಿ ಈ ಮಸೂದೆಗಳನ್ನು ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಬಳಿಕ ಮಧ್ಯಾಹ್ನದ ಹೊತ್ತಿಗೆ ಜಿಲ್ಲಾಡತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಮೂಲಕ ಬಂದ್‍ನ್ನು ಅಂತ್ಯಗೊಳಿಸಲಾಯಿತು. ಬಂದ್‍ನಲ್ಲಿ ಕಾಂಗ್ರೆಸ್‍ನ ಜಿಪಂ ಸದಸ್ಯರಾದ ಎ.ಮಾನಯ್ಯ, ಅಲ್ಲಂ ಪ್ರಶಾಂತ್, ಮಾಜಿ ಉಪಮೇಯರ್ ಬೆಣಕಲ್ ಬಸವರಾಜ್, ಮುಖಂಡರಾದ ಕಲ್ಲುಕಂಬ ಪಂಪಾಪತಿ, ಬಿ.ಕೆ.ಕೆರೆಕೋಡಪ್ಪ, ಬಿ.ರಾಂಪ್ರಸಾದ್, ಎಲ್.ಮಾರೆಣ್ಣ, ಅಸುಂಡಿ ನಾಗರಾಜಗೌಡ, ವೆಂಕಟೇಶ್ ಹೆಗಡೆ, ಜೆ.ಎಸ್.ಆಂಜನೇಯಲು, ಎಂ.ಶ್ರೀಧರ್, ಅಸುಂಡಿ ಹೊನ್ನೂರಪ್ಪ, ರೈತಪರ ಸಂಘಟನೆಯ ಗಂಗಾವತಿ ವೀರೇಶ್, ಸಂಗನಕಲ್ಲು ಕೃಷ್ಣಾ, ಗಂಗಾ ಧಾರವಾಡಕರ್, ಕರವೇ ಪಿ.ಜಗನ್ನಾಥ್, ಅಂಗಡಿ ಶಂಕರ್, ಜಿ.ತಿಪ್ಪಾರೆಡ್ಡಿ, ಶಿವಕುಮಾರ್, ಆತ್ಮಾನಂದರೆಡ್ಡಿ, ಎಐವೈಎಫ್‍ನ ಸಂಗನಕಲ್ಲು ಕಟ್ಟೆಬಸಪ್ಪ, ಬಸವರಾಜ, ಡಿಎಸ್‍ಎಸ್ ಸಂಘಟನೆಯ ಎಚ್.ಹುಸೇನಪ್ಪ, ಕರ್ಚೇಡು ಶ್ರೀನಿವಾಸ್, ಜಿ.ಸುರೇಶ್ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಪದಾಧಿಕಾರಿಗಳು ಇದ್ದರು.
ಎತ್ತಿನ ಬಂಡಿ ಜಾಥಾ:
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಚಾಗನೂರು-ಸಿರಿವಾರ ನೀರಾವರಿ ಭೂ ರಕ್ಷಣಾ ಹೋರಾಟ ಸಮಿತಿ ಕಾರ್ಯಕರ್ತರು ತಾಲೂಕಿನ ಗೋಡೆಹಾಳ್ ಕ್ರಾಸ್‍ನಿಂದ 9 ಎತ್ತಿನ ಬಂಡಿಗಳ ಜಾಥಾ ಮೂಲಕ ನಗರಕ್ಕೆ ಆಗಮಿಸಿದರು. ಎತ್ತಿನ ಬಂಡಿಗಳನ್ನು ತಡೆದ ಪೊಲೀಸರು ಗಡಗಿ ಚನ್ನಪ್ಪ ವೃತ್ತಕ್ಕೆ ತರದಂತೆ ಆಕ್ಷೇಪಿಸಿದರು. ಇದಕ್ಕೆ ಅಸಮಾಧಾನ ಗೊಂಡ ರೈತ ಮುಖಂಡ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ನಗರ ಡಿವೈಎಸ್‍ಪಿ ಅವರಿಂದ ಅನುಮತಿ ಪಡೆದು ವೃತ್ತಕ್ಕೆ ಬಂದರು. ತಾಲೂಕಿನ ಚಾಗನೂರು, ಬೂದಿಹಾಳ್, ಗೋಡೆಹಾಳ್, ಅಸುಂಡಿ ಗ್ರಾಮದ ರೈತರು 9 ಎತ್ತಿನ ಬಂಡಿಗಳ ಆಗಮಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
