ದಾವಣಗೆರೆ :
ಗ್ರಾಮೀಣ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನಗಳ ಅಧಿಕ ಬಳಕೆಯಿಂದ ಮಾರಾಣಂತಿಕ ಕಾಯಿಲೆಗಳಿಂದ ಜನರು ಬಳುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳನ್ನು ನಿಯಂತ್ರಿಸುವುದು ಅತ್ಯವಶ್ಯವಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸರ್ವೇಕ್ಷಣಾಧಿಕಾರಿಗಳಾದ ಡಾ. ಗಂಗಾಧರ್ ತಿಳಿಸಿದರು.
ನಗರದ ಜಿಲ್ಲಾ ಸಾರ್ವಜನಿಕ ಚಿಗಟೇರಿ ಆಸ್ಪತ್ರೆಯ ಆವರಣದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ, ಕೊಟ್ಪಾ-2003ರ ಕಾಯ್ದೆ ಅನುಷ್ಠಾನಗೊಳಿಸಲು ಹೋಟೆಲ್, ಬಾರ್ ಮಾಲೀಕರ ಸಂಘದ ಸದಸ್ಯರುಗಳಿಗೆ ಮತ್ತು ವಿವಿಧ ಪಾಲುದಾರಿತ ಸಂಸ್ಥೆ ಸದಸ್ಯರುಗಳಿಗೆ ಒಂದು ದಿನದ ಜಾಗೃತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂಬಾಕು ಉತ್ಪನ್ನಗಳಲ್ಲಿ ಆರು ಸಾವಿರದಷ್ಟು ಕೆಮಿಕಲ್ ಅಂಶಗಳಿರುತ್ತವೆ. ಇದರಲ್ಲಿ ಅರವತ್ತು ಕೆಮಿಕಲ್ ಅಂಶಗಳು ಕ್ಯಾನ್ಸರ್‍ಗೆ ಕಾರಣವಾಗುತ್ತವೆ ಎಂದ ಅವರು, ದೇಶದಲ್ಲಿ ಶೇ. 25 ರಷ್ಟು ಹೆಣ್ಣು ಮಕ್ಕಳು ತಮ್ಮ ಹದಿನೈದು ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿಯೇ ತಂಬಾಕು ಸೇವನೆ ಮಾಡುತ್ತಿದ್ದಾರೆ. ಇದರಿಂದ ಹಲವಾರು ಕಾಯಿಲೆಗಳು ತುತ್ತಾಗುತ್ತಿದ್ದಾರೆ ಎಂದರು.
ತಂಬಾಕು ಉತ್ಪನ್ನಗಳ ಬಳಕೆಯಿಂದ ನಮ್ಮ ದೇಹದಲ್ಲಿನ ರೋಗ ನಿಯಂತ್ರಣ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ನಮ್ಮ ದೇಹದ ಅಂಗಾಂಗಗಳಿಗೂ ಹಾನಿಯುಂಟಾಗುತ್ತದೆ. ಸಾರ್ವಜನಿಕರಿರುವ ಸ್ಥಳಗಳಲ್ಲಿ ತಂಬಾಕು ಸೇವನೆಯಿಂದ ಸೇವಿಸದ ಇತರರಿಗೂ ಕಾಯಿಲೆಗಳು ಬರುತ್ತವೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ಜನರು ಮರಣಹೊಂದುತ್ತಿದ್ದಾರೆ. ಆರು ಲಕ್ಷಕ್ಕೂ ಅಧಿಕ ಜನರು ಮಾರಾಣಾಂತಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ ಎಂದರು.
ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಚನ್ನಪ್ಪ ಮಾತನಾಡಿ, ಸಾರ್ವಜನಿಕರಿರುವ ಸ್ಥಳಗಳಲ್ಲಿ ತಂಬಾಕು ಬಳಸಬಾರದು. ತಂಬಾಕು ಸೇವನೆಯ ಅಪಾಯಗಳು ಮತ್ತು ನಿಯಂತ್ರಣ ಕ್ರಮಗಳು ಹಾಗೂ ಕೊಟ್ಪಾ ಕಾಯ್ದೆಯ ಬಗ್ಗೆ ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ಅಧಿಕಾರಿಗಳು ತಿಳಿಸಿಕೊಡಲಿದ್ದಾರೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಇತತರಿಗೂ ಮಾಹಿತಿ ನೀಡುವ ಮೂಲಕ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ತಂಬಾಕು ನಿಯಂತಣ್ರ ಘಟಕದ ವಿಭಾಗೀಯ ಸಂಯೋಜಕ ಮಹಾಂತೆಶ್ ಉಳ್ಳಗಡ್ಡಿ, ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ, ಆರೋಗ್ಯ ಮೆಲ್ವಿಚಾರಕ ರಾಚಪ್ಪ ಕುಪಸ್ತ, ದೇವರಾಜ್ ಕೆ.ಪಿ ಸೇರಿದಂತೆ ಹೋಟೆಲ್, ಬಾರ್ ಮಾಲೀಕರ ಸಂಘದ ಸದಸ್ಯರು ಭಾಗವಹಿಸಿದ್ದರು.