ದಾವಣಗೆರೆ:
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿರುವ ಕಾರಣಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಜಿಲ್ಲಾ ಲೋಕಸಭಾ ಉಸ್ತುವಾರಿ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ ಆರೋಪ ಮಾಡುತ್ತಿರುವುದನ್ನು ಹಾಗೂ ಅಧಿಕಾರಿಗಳ ವರ್ತನೆಯನ್ನು ಗಮನಿಸಿದರೆ, ಮೇಲ್ನೋಟಕ್ಕೆ ನಿಯಮ ಉಲ್ಲಂಘನೆ ಆಗಿರುವುದು ಸಾಬೀತಾಗುತ್ತಿದೆ ಎಂದು ಹೇಳಿದರು.
ಮಂಡ್ಯ ಕ್ಷೇತ್ರದಲ್ಲಿರುವ ಚುನಾವಣಾ ಅಧಿಕಾರಿಗಳ ಮೇಲೆ ರಾಜ್ಯ ಸರ್ಕಾರದ ಒತ್ತಡವಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಗನೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಅಧಿಕಾರಿಗಳು ಭಯದಿಂದ ಕೆಲಸ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ನಿಕ್ಷಪಕ್ಷಪಾತವಾಗಿ ಚುನಾವಣೆ ನಡೆಯಬೇಕು ಎಂದರೆ ಈಗಿರುವ ಜಿಲ್ಲಾಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು. ಹೊರಗಿನಿಂದ ನಿಷ್ಠಾವಂತ ಅಧಿಕಾರಿಯನ್ನು ಉಸ್ತುವಾರಿ ಯಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ನಾಮಪತ್ರ ಸಲ್ಲಿಕೆಯಲ್ಲಿಯ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಅರಬರೆಯಾಗಿ ನೀಡಿದ್ದಾರೆ. ಆರೋಪ ಮಾಡಿದ ಅಭ್ಯರ್ಥಿ ಸುಮಲತಾ ಅಂಬರೀಷ್‍ಗೆ ಜಿಲ್ಲಾಧಿಕಾರಿ ಬೆದರಿಕೆಯ ನೋಟೀಸ್ ನೀಡುತ್ತಾರೆ. ಇದೆಲ್ಲವನ್ನು ಗಮನಿಸಿದರೆ ಆಡಳಿತ ಯಂತ್ರ ನಿಕ್ಷಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಗಂಭೀರವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಸತ್ಯ ಹೇಳುವವರು ಇದ್ದರೆ ಅದು ದೇವೇಗೌಡ ಮತ್ತು ಅವರ ಮಕ್ಕಳು. ಬಾಕಿ ಉಳಿದವರು ಎಲ್ಲಾ ಸುಳ್ಳು ಹೇಳುತ್ತಾರೆ. ಒಂದು ಹೆಣ್ಣು ಮಗಳಿಗೆ ಇಡೀ ಸಮ್ಮಿಶ್ರ ಸರ್ಕಾರ ಹೆದರಿದೆ. ಹೆಣ್ಣು ಮಗಳ ಪ್ರವೇಶದಿಂದ ಇಷ್ಟು ಆತಂಕದಿಂದ ಕೆಲಸ ಮಾಡುತ್ತಿದ್ದಾರೆ. ಇದನ್ನು ನೋಡಿದ್ರೆ ಆಡಳಿತ ಯಂತ್ರವನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ ಎನ್ನುವುದಕ್ಕೆ ಸಂದೇಹವಿಲ್ಲ ಎಂದರು.