ಮಲ ಸುರಿದುಕೊಂಡು ಪ್ರತಿಭಟಿಸುವ ಎಚ್ಚರಿಕೆ

ದಾವಣಗೆರೆ

        ಕೇಂದ್ರ ಸರ್ಕಾರದ 2013ರ ಕಾಯ್ದೆಯ ಪ್ರಕಾರ ತಮಗೆ ಇನ್ನೊಂದು ವಾರದಲ್ಲಿ ಸೌಲಭ್ಯಗಳನ್ನು ಒದಗಿಸಿ ನ್ಯಾಯ ಕಲ್ಪಿಸದಿದ್ದರೆ, ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸುವುದಾಗಿ ಮ್ಯಾನ್‍ಹೊಲ್ ಸ್ಕ್ಯಾವೆಂಜರ್, ಸಫಾಯಿ ಕರ್ಮಚಾರಿಗಳು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

          ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಜನ ಸ್ಪಂದನ ಸಭೆಯಲ್ಲಿ ಅಖಿಲ ಕರ್ನಾಟಕ ಮ್ಯಾನುವೆಲ್ ಸ್ಕ್ಯಾವೆಂಜರ್ ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕೆ.ಎನ್.ಹುಚ್ಚೆಂಗಪ್ಪ, ಎನ್.ವಾಸುದೇವ ಮತ್ತಿತರರು ಅರ್ಜಿ ಸಲ್ಲಿಸಿ, ಪಾಲಿಕೆ ವತಿಯಿಂದ 156 ಮ್ಯಾನ್ಯುವಲ್ ಸ್ಕ್ಯಾವೆಂಜರ್‍ಗಳ ಕುಟುಂಬಗಳಿಗೆ ಗುರುತಿನ ಚೀಟಿ ನೀಡಿ ಎರಡು ವರ್ಷ ಕಳೆದರೂ ಸಹ ಕೇಂದ್ರ ಸರ್ಕಾರದ 2013ರ ಕಾಯ್ದೆಯ ಪ್ರಕಾರ ಯಾವುದೇ ಸೌಲಭ್ಯ ಕಲ್ಪಿಸಿಲ್ಲ.

          ಆದ್ದರಿಂದ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಹಾಗೂ ಬದುಕು ನಡೆಸುವುದು ದುಸ್ತರವಾಗಿದೆ ಎಂದು ಆರೋಪಿಸಿದರು.
ಜಿಲ್ಲಾಡಳಿತವು ತಕ್ಷಣವೇ ನಮಗೆ ಕೇಂದ್ರ ಸರ್ಕಾರದ 2013ರ ಕಾಯ್ದೆಯ ಪ್ರಕಾರ ಸೌಲಭ್ಯ ಕಲ್ಪಿಸಬೇಕು. 156 ಜನ ಸಫಾಯಿ ಕರ್ಮಚಾರಿಗಳ ದಾಖಲೆಯನ್ನು ಕೇಂದ್ರ ಸರ್ಕಾರದ ಸಫಾಯಿ ಕರ್ಮಚಾರಿ ನಿಗಮಕ್ಕೆ ಸಲ್ಲಿಸಬೇಕು. ಸಫಾಯಿ ಕರ್ಮಚಾರಿಗಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಪ್ರತ್ಯೇಕ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿದರು.

          ಇದಕ್ಕೆ ಪ್ರತಿಕ್ರಯಿಸಿದ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಕಳೆದ ಎರಡು ವಾರದಿಂದ ಇದಕ್ಕೆ ಸಂಬಂಧಿಸಿ ಅರ್ಜಿಯನ್ನು ನೀಡಲಾಗುತ್ತಿದೆ. ಆದರೆ, ಈ ಪ್ರಕ್ರಿಯೆ ಕೈಗೊಳ್ಳಲು ಸ್ವಲ್ಪ ಸಮಾಯಾವಕಾಶ ಬೇಕಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು ಇನ್ನೊಂದು ವಾರದಲ್ಲಿ ನಮ್ಮ ಸಮಸ್ಯೆ ಬಗೆಹರಿಸಿ ನ್ಯಾಯ ಕಲ್ಪಿಸದಿದ್ದರೆ, ಮೈಯ ಮೇಲೆ ಮಲ ಸುರಿದುಕೊಂಡು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

         ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಅರ್ಜಿ ಸಲ್ಲಿಸಿ, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 2009-10 ರಿಂದ 2014-15 ರವರಗೆ ಲೆಕ್ಕ ಪರಿಶೋಧನಾ ವರದಿಯಲ್ಲಿ ಸುಮಾರು 212 ಕೋಟಿ ರೂ. ವಸೂಲಾತಿಯನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕೆಂದು ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಬೇಕೆಂದು ಸೂಚಿಸಿದರು.

         ಸ್ತ್ರೀಶಕ್ತಿ ಗುಂಪುಗಳಿಗೆ ಮನೆ ನೀಡಲು ಜಿಲ್ಲಾಡಳಿತ ಭವನದಲ್ಲಿ ಅರ್ಜಿ ನೀಡಲಾಗುತ್ತಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಜನಸ್ಪಂದನ ಸಭೆಗೆ ಆಗಮಿಸಿದ್ದ ಸ್ತ್ರೀಶಕ್ತಿ ಗುಂಪುಗಳ ಸದಸ್ಯೆಯರು ಮನೆಗಾಗಿ ಅರ್ಜಿ ಸಲ್ಲಿಸಿದರು.ಈ ಅಪರ ಜಿಲ್ಲಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಯಾರು ಈ ರೀತಿಯ ಮಾಹಿತಿ ನೀಡಿದ್ದಾರೆ, ಆ ತರಹದ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

        2018ರ ಆಗಸ್ಟ್‍ನಿಂದ ಮಂಜೂರಾದ ವೃದ್ಧಾಪ್ಯ ವೇತನ ಕೊಡಿಸುವಂತೆ ಕೋರಿ ದಾವಣಗೆರೆ ತಾಲೂಕಿನ ಗೋಪನಾಳ್ ಗ್ರಾಮದ ನಿವಾಸಿಗಳಾದ ಎ.ಎಂ ಸಾವಿತ್ರಮ್ಮ ಮತ್ತು ಶಿವಲಿಂಗಮ್ಮ ಎಂಬುವವರು ಮನವಿ ಸಲ್ಲಿಸಿದರು. ಅತ್ತಿಗೆರೆ ಗ್ರಾಮದ ವಿಮಲಾಕ್ಷಮ್ಮ, ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಪಹಣಿ ವಿಸ್ತೀರ್ಣದ ತೊಂದರೆಯನ್ನು ಸರಿಪಡಿಸಿಲ್ಲ. ಶೀಘ್ರ ಸರಿಪಡಿಸಬೇಕೆಂದು ಮನವಿ ಮಾಡಿದರು.

        ದಾವಣಗೆರೆ ಜಯನಗರ ಬಿ ಬ್ಲಾಕ್ ನಿವಾಸಿ ರೇಖಾ ದೀಕ್ಷಿತ್ ಅರ್ಜಿ ಸಲ್ಲಿಸಿ, ತಂದೆ ತಾಯಿ ಮರಣ ಹೊಂದಿರುವುದರಿಂದ ಜಂಟಿ ಹೆಸರಿಗೆ ಖಾತೆ ವರ್ಗಾವಣೆ ಪಹಣಿ ನೀಡುವಂತೆ ಮನವಿ ಮಾಡಿದರು. ತಾಲೂಕಿನ ಗೋಪನಾಳ್ ಗ್ರಾಮದ ವಿಕಲಚೇತನ ಬಿ.ಎಂ ಬಸವರಾಜಪ್ಪ ಮಾತನಾಡಿ, ಅಂಗವಿಕಲರ ತ್ರಿಚಕ್ರ ಚಾಲಿತ ವಾಹನ ನೀಡುವಂತೆ ಮನವಿ ಮಾಡಿದರು.ಹಳೇಬಾತಿಯ ಗುಡ್ಡದ ಕ್ಯಾಂಪ್‍ನ ವಿಕಲಚೇತನ ಬಿ.ಎಸ್ ಪ್ರಭು ಅರ್ಜಿಸಲ್ಲಿಸಿ ನಾನು ದೈಹಿಕ ಅಂಗವಿಕಲನಾಗಿದ್ದು, ಇದರ ಜೊತೆಗೆ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದು ಅಂಗಡಿಗೆ ಬೇಕಾದ ಸಾಮಗ್ರಿಗಳನ್ನು ತರಲು ಆಗುತ್ತಿಲ್ಲ. ದಯವಿಟ್ಟು ಸ್ವಯಂ ಚಾಲಿತ ವಾಹನ ನೀಡುವಂತೆ ಒತ್ತಾಯಿಸಿದರು.

         ದಾವಣಗೆರೆಯ ಬೆಂಕಿನಗರ ನಿವಾಸಿ ಲೋಕಿಕೆರೆ ಹನುಮಂತಪ್ಪ ಅರ್ಜಿ ಸಲ್ಲಿಸಿ, ಸಿದ್ಧಾರೂಢರ ಮಠದಲ್ಲಿ ಭಜನೆ ಪ್ರವಚನ ಮಾಡಲಿಕ್ಕೆ ಎಲ್ಲಿಯಾದರೂ 15*15 ಅಡಿ ಜಾಗ ನೀಡುವಂತೆ ಮನವಿ ಮಾಡಿದರು. ಸಭೆಯಲ್ಲಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇವಣ್ಣ, ಡಿಹೆಚ್‍ಓ ಡಾ. ತ್ರಿಪುಲಾಂಭ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್, ವಿಕಲಚೇತನಾಧಿಕಾರಿ ಶಶಿಧರ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link