ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೇಮಕ : ಮುಖಂಡರ ವಿರೋಧ

ತುರುವೇಕೆರೆ

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ತಾಲ್ಲೂಕಿನ ಸಂಪಿಗೆ ಶ್ರೀಧರ್‍ರನ್ನು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದನ್ನು ತಾಲ್ಲೂಕು ಬಿಜೆಪಿ ಹಿರಿಯ ಮುಖಂಡರುಗಳು ವಿರೋಧ ವ್ಯಕ್ತಪಡಿಸಿದ್ದಾರೆ.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ರಾಜ್ಯ ಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಅರಳಿಕೆರೆ ಶಿವಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಸಂಪಿಗೆ ಶ್ರೀಧರ್ ಅವರು ಬಿಜೆಪಿ ಪಕ್ಷÀದಲ್ಲಿದ್ದಾಗ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಥಯಾತ್ರೆಯಲ್ಲಿ ತಾಲ್ಲೂಕಿಗೆ ಆಗಮಿಸಿದ್ದ ಸಂದರ್ಭದಲ್ಲಿ ಬಾಣಸಂದ್ರ ಗ್ರಾಮದಲ್ಲಿ ಸಂಪಿಗೆ ಶ್ರೀಧರ್ ಹಾಗೂ ಇತರರು ತಡೆದು ಕಾರಿನ ಗ್ಲಾಸ್ ಒಡೆದು ಹಲ್ಲೆಗೆ ಮುಂದಾಗಿದ್ದರು.

    ರಥಯಾತ್ರೆಯ ವಾಹನಕ್ಕೆ ತೆಂಗಿನ ಕಾಯಿಯಿಂದ ಹೊಡೆದು ಅಂದು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್.ಯಡಿಯೂರಪ್ಪನವರಿಗೆ ಅಗೌರವ ತಂದಿದ್ದು, ರಾಜ್ಯಮಟ್ಟದ ಸುದ್ದಿಯಾಗಲು ಕಾರಣರಾಗಿದ್ದರು. ಇವರ ವಿರುದ್ದ ತಾಲ್ಲೂಕು ಬಿಜೆಪಿ ಘಟಕ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದರು. ಅಂದಿನಿಂದ ಪಕ್ಷದ ಸಂಘಟನೆಯಿಂದ ದೂರ ಉಳಿದಿದ್ದ ಇವರನ್ನು ದಿಢೀರನೆ ಬಿಜೆಪಿ ಪಕ್ಷದವರೆಂದು ಹೇಳಿಕೊಂಡು ಜಿಲ್ಲಾ ಮಟ್ಟದ ಹುದ್ದೆಯನ್ನು ಗಿಟ್ಟಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಇಂತಹವರಿಂದ ಪಕ್ಷದಲ್ಲಿ ಒಗ್ಗಟ್ಟು ಒಡೆಯಲು ಅನುವು ಮಾಡಿಕೊಟ್ಟಂತಾಗುತ್ತದೆ. ಕೂಡಲೆ ಪಕ್ಷದ ಬೆಳವಣಿಗೆ ಹಿತದೃಷ್ಟಿಯಿಂದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕಿತ್ತು ಹಾಕಬೇಕೆಂದು ಮುಖಂಡರುಗಳು ಒಕ್ಕೊರಲಿನಿಂದ ಆಗ್ರಹಿಸಿದರು.

    ಡೊಂಕಿಹಳ್ಳಿ ಹುಚ್ಚೇಗೌಡ ಮಾತನಾಡಿ, ನಾವು ಕಡಲೆಪುರಿ ತಿಂದು ಪಕ್ಷ ಕಟ್ಟಿದವರು ಹಾಗೂ ತಾಲ್ಲೂಕಿನಲ್ಲಿ ಪಕ್ಷವನ್ನು ಮೊದಲ ಬಾರಿ ಅಧಿಕಾರಕ್ಕೆ ತಂದವರು. ಆದರೆ ಅಂದಿನ ದಿನಗಳಲ್ಲೂ ಪಕ್ಷದಲ್ಲಿ ಸಂಪಿಗೆ ಶ್ರೀಧರ್ ಹುದ್ದೆಯನ್ನು ಪಡೆದು ಪಕ್ಷದಿಂದ ಬಂದ ಫಂಡ್ ಅನ್ನು ತನ್ನ ಸ್ವಂತಕ್ಕೆ ಬಳಸಿಕೊಂಡ ಉದಾಹರಣೆಗಳಿವೆ. ಇಂತಹವರಿಂದ ಪಕ್ಷಕ್ಕೆ ಯಾವುದೆ ಲಾಭವಿಲ್ಲ. ಕೂಡಲೆ ಇವರನ್ನು ಪಕ್ಷದಿಂದ ಹೊರ ಹಾಕಬೇಕೆಂದು ಮನವಿ ಮಾಡಿದರು.

    ಎ.ಪಿ.ಎಂ.ಸಿ. ನಾಮ ನಿರ್ದೇಶಿತ ಸದಸ್ಯ ಹರಿಕಾರನಹಳ್ಳಿ ಪ್ರಸಾದ್ ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಾ ಬಂದವರಿಗೇ ಪಕ್ಷದಲ್ಲಿ ಸ್ಥಾನ ಮಾನ ಕೊಡುವುದರಿಂದ ಪಕ್ಷದ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ, ಈ ವ್ಯಕ್ತಿ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಇಂತಹ ವ್ಯಕ್ತಿಯಿಂದ ತಾಲ್ಲೂಕಿನಲ್ಲಿ ಪಕ್ಷ ಒಡೆಯುವ ಕೆಲಸವನ್ನು ಮಾತ್ರ ನಿರೀಕ್ಷಿಸಬಹುದು. ಆದ್ದರಿಂದ ಕೂಡಲೆ ಈತನನ್ನು ಪಕ್ಷದ ಪದವಿಯಿಂದ ವಜಾಮಾಡಬೇಕು ಎಂದು ಜಿಲ್ಲಾಧ್ಯಕ್ಷರನ್ನು ಒತ್ತಾಯಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಲಾಟರಿಶಿವಣ್ಣ, ಬಡಗರಹಳ್ಳಿ ರಾಮೇಗೌಡ, ಸಿದ್ದಲಿಂಗಪ್ಪ, ಜಯಣ್ಣ, ಮುಗಳೂರು ಮಂಜಣ್ಣ, ಅಮ್ಮಸಂದ್ರ ಪಟೇಲ್‍ನರಸೇಗೌಡ, ಸೂಳೆಕೆರೆ ಸಿದ್ದಲಿಂಗಸ್ವಾಮಿ, ಗೋಪಿ, ಸೋಮೇನಹಳ್ಳಿ ಜಗದೀಶ್, ರಾಜು ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap