ತುರುವೇಕೆರೆ
ಮಾಜಿ ಮುಖ್ಯಮಂತ್ರಿ ಬಿಎಸ್‍ವೈ ತಮ್ಮ ಅನುಭವಕ್ಕೆ ಶೋಭೆ ತರುವ ಮಟ್ಟದ ರಾಜಕೀಯ ಮಾಡಲಿ, ಅದನ್ನು ಬಿಟ್ಟು ಆತುರದ ರಾಜಕಾರಣಕ್ಕೆ ಮುಂದಾಗುತ್ತಿರುವುದು ತರವಲ್ಲ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರವನ್ನು ಕೆಡುವಲು ಮುಂದಾಗಿ ತಾನೇ ಪೇಚಿಗೆ ಸಿಲುಕಿದ್ದಾರೆ. ಸುಖಾ ಸುಮ್ಮನೇ ಹೇಳಿಕೆ ನೀಡುವುದನ್ನು ಬಿಟ್ಟು ಗೌರವಯುತವಾಗಿ ನೆಡೆದುಕೊಳ್ಳುವುದು ಸೂಕ್ತ ಎಂದು ಬಿ.ಎಸ್. ವೈ ಗೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸಲಹೆ ನೀಡಿದರು.
ಶಾಸಕ ಮಸಾಲಜಯರಾಮ್ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಪ್ರಗತಿಯಲ್ಲಿರುವ ನನ್ನ ಅವಧಿಯ ಹಳೇ ಕಾಮಗಾರಿಗಳ ಸ್ಥಳದಲ್ಲಿ ಹಾಜರಾಗಿ ಪುಕ್ಕಟ್ಟೆ ಪ್ರಚಾರಕ್ಕೆ ಮುಂದಾಗುತ್ತಿರುವುದು ಹಾಸ್ಯಾಸ್ಪದವಾಗಿದೆ. ಸರ್ಕಾರದಿಂದ ಇದುವರೆವಿಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಆದರೆ ಶಾಸಕ ಮಸಾಲಜಯರಾಮ್ ಈ ಹಿಂದಿನ ಅವಧಿಯಲ್ಲಿ ನಾನೇ ಭೂಮಿ ಪೂಜೆ ನೆರವೇರಿಸಿ ಕಾಮಕಾರಿಗೆ ಚಾಲನೆ ನೀಡಿದ್ದ ಸ್ಥಳಗಳಲ್ಲಿ ಮರು ಭೂಮಿ ಪೂಜೆ ಮಾಡುತ್ತಾ ಪುಕ್ಕಟ್ಟೆ ಪ್ರಚಾರಕ್ಕೆ ಮುಂದಾಗುವ ಶಾಸಕ ಮಸಾಲಜಯರಾಮ್ ರವರಿಗೆ ಕಾಮಗಾರಿ ಯಾರ ಅವಧಿಯಲ್ಲಿ ಮಂಜೂರಾತಿ ಪಡೆದಿತ್ತು ಎಂಬುದನ್ನು ಮೊದಲು ಅರಿಯಲಿ ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಹಾಗೂ ಸಚಿವರಾದ ಡಿ.ಕೆ.ಶಿವಕುಮಾರ್ ನನ್ನ ಬಳಿ ಮಾತನಾಡಿದ್ದರು ಎಂದು ಶಾಸಕ ಮಸಾಲಜಯರಾಮ್ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವರ ಬಳಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಲಭ್ಯವಾಗಿದ್ದು ಈ ರೀತಿ ಮಾತನಾಡುವ ಬದಲು ಮಾತನಾಡಿದ್ದರ ಬಗ್ಗೆ ನಿಮ್ಮ ಬಳಿ ಸಿ.ಡಿ, ಇದ್ದರೆ ಪ್ರದರ್ಶಿಸಿ ಎಂದು ಸವಾಲು ಹಾಕಿದರಲ್ಲದೆ ಶಾಸಕರ ಕೆಲವು ಹಿಂಬಾಲಕರು ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದು ಅಂತಹವರನ್ನು ಹದ್ದುಬಸ್ತಿನಲ್ಲಿಟ್ಟುಕೊಂಡರೆ ಒಳ್ಳೆಯದು ಎಂದು ಎಚ್ಚರಿಸಿದರು.
ಈ ಹಿಂದಿನ ಅವಧಿಯಲ್ಲಿ ಕ್ಷೇತ್ರದ ಎಲ್ಲಾ ಕೆರೆ-ಕಟ್ಟೆಗಳಿಗೆ ಹೋರಾಟ ನೆಡೆಸಿ ಹೇಮೆಯನ್ನು ಹರಿಸಲಾಗಿತ್ತು. ಈ ಬಾರಿ 50 ಕ್ಕೂ ಹೆಚ್ಚು ದಿನಗಳು ಹೇಮಾವತಿ ನೀರು ನಮ್ಮ ತಾಲ್ಲೂಕಿನ ಮುಖಾಂತರವೇ ಹರಿದರೂ ಕೆರೆ ಕಟ್ಟೆಗಳನ್ನು ತುಂಬಿಸಲು ಶಾಸಕ ಮಸಾಲ ಜಯರಾಮ್ ವಿಫಲವಾಗಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಕೆರೆಗಳಿಗೆ ಶಾಸಕರು ನೀರು ಹರಿಸಲು ವಿಫಲವಾಗಿರುವ ಹಿನ್ನಲೆಯಲ್ಲಿ ಜನ ಜಾನುವಾರುಗಳು ಜೀವಜಲಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ದೂರಿದರು.
ತಾಲ್ಲೂಕಿನ ಅಭಿವೃದ್ದಿ ಕುರಿತಂತೆ ಅನೇಕ ಸಮಸ್ಯೆಗಳ ಬಗ್ಗೆ ಇದೇ 18 ರಂದು ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಒಬ್ಬೇನಾಗಸಂದ್ರ ಸೋಮಶೇಖರ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಮುಂಗಿಕುಪ್ಪೆ ಬಸವರಾಜು, ಶಿವರಾಮು, ನಾಗರಾಜು, ರಾಘು ಸೇರಿದಂತೆ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
