ಚಿತ್ರದುರ್ಗ:
ಮೈತ್ರಿ ಸರ್ಕಾರದಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿರುವ ಕಡೆ ಜೆಡಿಎಸ್.ನವರು ಓಟು ಮಾಡಲು ತಯಾರಿಲ್ಲ. ಈ ಒಳಜಗಳದಿಂದ ಬಿಜೆಪಿ.ಗೆ ಅನುಕೂಲವಾಗಿ 22 ಸೀಟುಗಳನ್ನು ಗೆಲ್ಲುವುದರಿಂದ ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಬಿಜೆಪಿ.ರಾಜ್ಯ ಹಿಂದುಳಿದ ಮೋರ್ಚ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ ಭವಿಷ್ಯ ನುಡಿದರು.
ಬಿಜೆಪಿ.ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾಲ್ಕುವರೆ ವರ್ಷಗಳ ಕಾಲ ದೇಶವನ್ನಾಳಿದ ಪ್ರಧಾನಿ ಮೋದಿರವರು ಜನಮೆಚ್ಚುವಂತೆ ಸ್ವಚ್ಚ ಹಾಗೂ ಪಾರದರ್ಶಕ ಆಡಳಿತ ನೀಡಿದ್ದಾರೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಕಾರ್ಯಕರ್ತರು ಹಾಗೂ ಮತದಾರರು ಪ್ರತಿಷ್ಟೆಯನ್ನಾಗಿ ತೆಗೆದುಕೊಳ್ಳಬೇಕು ಎಂದು ವಿನಂತಿಸಿದರು.
ಮುಂದುವರೆದ ಬೇರೆ ದೇಶಗಳಂತೆ ಭಾರತವನ್ನು ಬಲಿಷ್ಟ ದೇಶವನ್ನಾಗಿ ಮಾಡಲು ಹೊರಟಿರುವ ನರೇಂದ್ರಮೋದಿರವರು ಭಯೋತ್ಪಾದನೆಯನ್ನು ದೇಶದಿಂದ ನಿರ್ಮೂಲನೆಗೊಳಿಸಲು ತೆಗೆದುಕೊಂಡ ದಿಟ್ಟ ಕ್ರಮವನ್ನು ವಿಶ್ವವೇ ಮೆಚ್ಚಿಕೊಂಡಿದೆ. ಭಾರತದ ಆರ್ಥಿಕ ಭದ್ರತೆ ಅಭಿವೃದ್ದಿ ನೋಡಿ ಪ್ರಜೆಗಳು ತಲೆದೂಗಿದ್ದಾರೆ.2014 ರ ಲೋಕಸಭಾ ಚುನಾವಣಾ ಪೂರ್ವದಲ್ಲಿ ಮೋದಿರವರು ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ದೇಶ ಕಾಯುವ ಸೈನಿಕರಿಗೆ ಉತ್ತೇಜನ ನೀಡಲು ಹೊಸ ಶಸ್ತ್ರಾಸ್ತ್ರಗಳನ್ನು ಖರೀಧಿಸಿದ್ದಾರೆ. 2014 ರಲ್ಲಿ ಹದಗೆಟ್ಟಿದ್ದ ಭಾರತದ ಆರ್ಥಿಕ ಪರಿಸ್ಥಿತಿ ಈಗ ಸುಧಾರಣೆಯಾಗಿದೆ ಎಂದು ಮೋದಿರವರ ಸಾಧನೆಗಳನ್ನು ಗುಣಗಾನ ಮಾಡಿದರು.
ನರೇಂದ್ರಮೋದಿ ದೇಶದ ಪ್ರಧಾನಿಯಾದ ಮೇಲೆ ಬೋಗಸ್ ಕಂಪನಿಗಳು ಬಂದ್ ಆದವು. ಯು.ಪಿ.ಎ.ಸರ್ಕಾರದಲ್ಲಿ 3 ಕೋಟಿ 79 ಲಕ್ಷ ತೆರಿಗೆದಾರರಿದ್ದರು. ಈಗ ಆರು ಕೋಟಿ 84 ಲಕ್ಷ ತೆರಿಗೆದಾರರು ಬೆಳಕಿಗೆ ಬಂದಿದ್ದಾರೆ. ಇದರಿಂದ ದೇಶದ ಬೊಕ್ಕಸಕ್ಕೆ ಆದಾಯವಲ್ಲವೇನು ಎಂದು ಎದುರಾಳಿ ಪಕ್ಷಗಳಿಗೆ ತರಾಟೆ ತೆಗೆದುಕೊಂಡರು.
ಪ್ರಧಾನಿ ಮೋದಿರವರು ಪ್ರತಿಯೊಬ್ಬ ಬಡವನು ಜನ್‍ಧನ್ ಖಾತೆ ತೆರೆಯಬೇಕೆಂಬ ಯೋಜನೆ ಜಾರಿಗೆ ತಂದಿದ್ದರಿಂದ ಯಾವುದೇ ದಾಖಲೆಯಿಲ್ಲದೆ ನೇರವಾಗಿ ಸರ್ಕಾರದ ಸೌಲಭ್ಯಗಳನ್ನು ಲಪಟಾಯಿಸುತ್ತಿದ್ದ ಬೋಗಸ್ ಫಲಾನುಭವಿಗಳು ಬಾಲ ಮುದುರಿಕೊಂಡಿದ್ದಾರೆ. ಜನ್‍ಧನ್ ಯೋಜನೆಯಡಿ ದೇಶದಲ್ಲಿ 31 ಕೋಟಿ 52 ಲಕ್ಷ ಬಡವರು ಬ್ಯಾಂಕಿನಲ್ಲಿ ಖಾತೆಗಳನ್ನು ತೆರೆದಿದ್ದಾರೆ.
ರಾಜ್ಯದಲ್ಲಿ 1 ಕೋಟಿ24 ಲಕ್ಷ ಮಂದಿ ಬಡವರು ಜನ್‍ಧನ್ ಖಾತೆಗಳನ್ನು ತೆರೆದಿದ್ದಾರೆ. ದೇಶದಲ್ಲಿ ಮೂರು ಲಕ್ಷ ಬೋಗಸ್ ಕಂಪನಿಗಳು ಮುಚ್ಚಿರುವುದರಿಂದ ಸರ್ಕಾರದ ಸಬ್ಸಿಡಿ ತೆಗೆದುಕೊಳ್ಳುವವರು, ತೆರಿಗೆ ವಂಚಿಸುವವರಿಗೆ ಕಡಿವಾಣ ಹಾಕಿದಂತಾಗಿದೆ. ಮೋದಿರವರು ಗಣಿ ಹರಾಜಿನಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದರಿಂದ ಅಕ್ರಮವಾಗಿ ಅದಿರು ಸಾಗಾಣಿಕೆಯಾಗುವುದು ನಿಂತು 3 ಲಕ್ಷ 94 ಸಾವಿರ ಕೋಟಿ ರೂ.ಸರ್ಕಾರಕ್ಕೆ ಹೆಚ್ಚಿನ ಆದಾಯ ಬಂದಿದೆ. ಇವುಗಳೆಲ್ಲಾ ಮೋದಿರವರ ಸಾಧನೆಯಲ್ಲವೇನು ಎಂದು ವಿರೋಧಿಗಳನ್ನು ಪ್ರಶ್ನಿಸಿದರು.
ಐದು ವರ್ಷದಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಧಾನಿ ಮೋದಿರವರು ಮೂರು ಲಕ್ಷ ಹದಿನೆಂಟು ಸಾವಿರದ 954 ಕೋಟಿ ರೂ.ಗಳನ್ನು ವಿವಿಧ ಅಭಿವೃದ್ದಿ ಕೆಲಸಗಳಿಗೆ ನೀಡಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಘೋಷಣೆ ಮಾಡಿದ್ದ ಮೋದಿರವರು 2018 ರಲ್ಲಿ ಉದ್ಯೋಗ ಕೈಗೊಳ್ಳುವವರಿಗೆ 3 ಲಕ್ಷ 45 ಸಾವಿರ ಕೋಟಿ ರೂ.ಗಳನ್ನು ಕೊಟ್ಟಿದ್ದಾರೆ. ಆಯುಷ್ಮಾನ್ ಭಾರತ ಆಯೋಗ್ಯ ಯೋಜನೆಯಡಿಯಲ್ಲಿ ದೇಶದ ಐವತ್ತು ಕೋಟಿ ಬಡವರಿಗೆ ಪ್ರಯೋಜನವಾಗಿದೆ.
ಉಜ್ವಲ ಯೋಜನೆ, ಫಸಲ್ ಭೀಮ, ಮುದ್ರಾ ಬ್ಯಾಂಕ್, ಹೀಗೆ ಜನಮೆಚ್ಚುವ ನೂರಾರು ಯೋಜನೆಗಳನ್ನು ಜಾರಿಗೆ ತಂದಿರುವ ಮೋದಿರವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.37 ರಷ್ಟಿರುವ ಹಿಂದುಳಿದವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಹತ್ತರ ಪಾತ್ರ ವಹಿಸಲಿರುವುದರಿಂದ ಮೋದಿ ಎರಡನೆ ಬಾರಿಗೆ ಪ್ರಧಾನಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ನಾನು ಸಹಕಾರ ಸಚಿವನಾಗಿದ್ದಾಗ 41 ಸಾವಿರ ಸಂಸ್ಥೆಗಳಿಗೆ ಎರಡು ಮೀಸಲಾತಿಯನ್ನು ಕೊಟ್ಟಿದ್ದೇನೆ. ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಕಲ್ಪಿಸಿದೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಕ್ತಿ ಕೊಟ್ಟವರು ಮೋದಿ. ಎಸ್.ಸಿ./ಎಸ್.ಟಿ., ಹಿಂದುಳಿದವರ ಪರವಾಗಿರುವ ಬಿಜೆಪಿ.ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು. ಪ್ರಾಂತೀಯ ನಾಯಕರೆಲ್ಲಾ ಸೇರಿ ಘಟಬಂಧನ್ ಮಾಡಿಕೊಂಡಿದ್ದಾರೆ.
ದೇಶದ ಆಯಾ ರಾಜ್ಯದ ನಾಯಕರುಗಳು ಸೇರಿ ಕುಟುಂಬ ರಾಜಕಾರಣ ಮಾಡುವುದು ಘಟಬಂಧನ್ ಉದ್ದೇಶ. ರಾಷ್ಟ್ರದ ಅಭಿವೃದ್ದಿ ಅವರಿಗೆ ಬೇಕಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಇನ್ನಿತರೆ ನಾಯಕರುಗಳ ವಿರುದ್ದ ಕಿಡಿ ಕಾರಿದರು.
ಬಿಜೆಪಿ. ಹಿಂದುಳಿದ ವರ್ಗಗಳ ಮೋರ್ಚ ಜಿಲ್ಲಾಧ್ಯಕ್ಷ ಸಂಪತ್, ಪ್ರಧಾನ ಕಾರ್ಯದರ್ಶಿ ಪ್ರವೀಣ್, ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
