ತಿಪಟೂರು :
ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ ತತ್ವಗಳಲ್ಲಿ ಯಾವುದೇ ಭಿನ್ನವಿಲ್ಲ ಎಂದು ಗುರುಕುಲ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಹರಿಪ್ರಸಾದ್ ತಿಳಿಸಿದರು.
ನಗರದಲ್ಲಿ ತಾಲ್ಲೂಕು ನಿವೃತ್ತ ನೌಕರರ ಸಂಘದಿಂದ ನಡೆದ ಬಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ಹೊಸ ಕಾಲದ ಬಸವಣ್ಣ ಅವರಂತೆ ಕಾಣುತ್ತಾರೆ. ಬಸವಣ್ಣ ಅವರ ವಿಚಾರಗಳಲ್ಲಿ ಹಲವು ಅಂಬೇಡ್ಕರ್ ವಾದದಲ್ಲಿ ಅಡಗಿವೆ. ಜಾಗತಿಕ ಶ್ರೇಷ್ಠ ಬಸವಣ್ಣ ಅವರ ವಿಚಾರಗಳು ಅಂಬೇಡ್ಕರ್ ಸಿದ್ಧಾಂತಗಳಿಗೆ ಸ್ಫೂರ್ತಿಯಾಗಿರಬಹುದು. ಕೆಲವರ ಹುನ್ನಾರದಿಂದ ಉಂಟಾಗಿದ್ದ ತಾರತಮ್ಯ ಮತ್ತು ತಾಂಡವವಾಡುತ್ತಿದ್ದ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಈ ಇಬ್ಬರೂ ಹೋರಾಡಿದ್ದಾರೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸಮಾಜ ಮತ್ತು ನಾಡು ಕಟ್ಟಲು ಉನ್ನತ ವಿಚಾರಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಸಾಹಿತಿ ಟಿ.ಎಸ್. ನಾಗರಾಜಶೆಟ್ಟಿ ಮಾತನಾಡಿ, ಅಸ್ಪಶ್ಯತೆ ಮತ್ತು ಅಸಮಾನತೆ ಹೋಗಲಾಡಿಸಲು ಇಬ್ಬರೂ ಮಹನೀಯರು ಅಪಾರ ಕೊಡುಗೆ ನೀಡಿದ್ದಾರೆ. ಸಮಾನತೆಯೇ ಸ್ವಸ್ಥ ಮತ್ತು ಸೌಖ್ಯ ಸಮಾಜದ ಲಕ್ಷಣ. ಮಹಿಳಾ ಸ್ವಾತಂತ್ರ್ಯಕ್ಕೂ ಕೂಡ ಇಬ್ಬರೂ ಶ್ರಮಿಸಿದ್ದಾರೆ. ಬಸವಣ್ಣ ಕಾಯಕ, ದಾಸೋಹದ ಪರಿಕಲ್ಪನೆ ಕೊಟ್ಟರೆ ಅಂಬೇಡ್ಕರ್ ಶಿಕ್ಷಣ, ಸಂಘಟನೆ, ಹೋರಾಟ ಸೂತ್ರವನ್ನು ನೀಡಿದ್ದಾರೆ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಿ.ಟಿ. ಶಂಕರೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೆ. ಬಾಲಕೃಷ್ಣ, ನಿವೃತ್ತ ನೌಕರರ ಸಹಕಾರ ಸಂಘದ ಅಧ್ಯಕ್ಷ ಮಹದೇವಯ್ಯ, ಬಸವರಾಜು, ಮಲ್ಲಪ್ಪಾಚಾರ್, ಡಿ. ಮರುಳಪ್ಪ, ಎಚ್.ಡಿ. ಪರುಷರಾಮ್ ನಾಯಕ್, ಸಿ.ಎಸ್. ಶಂಕರಲಿಂಗಪ್ಪ, ಬಿ. ಮಂಜುನಾಥ್, ಲಿಂಗಪ್ಪ ಮತ್ತಿತರರಿದ್ದರು.