ಬೆಂಗಳೂರು
ಕೇಂದ್ರ ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್‌ಎಎಲ್)ನ ಸಿಬ್ಬಂದಿಯ ವೇತನ ಪರಿಷ್ಕರಣೆಯಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ ಎಂದು ಹೆಚ್‌ಎಎಲ್‌ನ ಆರ್ಥಿಕ ನಿರ್ದೇಶಕ ಸಿ.ಬಿ. ಅನಂತಕೃಷ್ಣನ್ ಅವರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ನಿಯಮಾನುಸಾರ ಸಿಬ್ಬಂದಿಯ ವೇತನ ಪರಿಷ್ಕರಣೆ ಆಗಿರುವ ಹಿನ್ನೆಲೆ ವೇತನಕ್ಕೆ ಸರಿಸಮನಾಗಿ ಅಥವಾ ಅದಕ್ಕಿಂತಲೂ ಹೆಚ್ಚು ಸೌಲಭ್ಯಗಳನ್ನು ಕೇಳುವುದರ ಹಿಂದೆ ಯಾವುದೇ ಸಮರ್ಥನೆ ಹಾಗೂ ತರ್ಕ ಇಲ್ಲ ಎಂದು ತಿಳಿಸಿದ್ದಾರೆ.ವೇತನ ಪರಿಷ್ಕರಣೆ ಸಂಬಂಧ ಹೆಚ್‌ಎಎಲ್ ಸಂಸ್ಥೆಯ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಮುಷ್ಕರ ಕೈಗೊಂಡಿರುವ ಬೆನ್ನಲ್ಲೇ ನಗರದಲ್ಲಿಂದು ಹೆಚ್‌ಎಎಲ್ ಪ್ರಧಾನ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ವೇತನ ಪರಿಷ್ಕರಣೆ ಕಾನೂನಾತ್ಮಕವಾಗಿ ಮಾಡಲಾಗಿದೆ ಎಂದು ಹೇಳಿದರು.
ಒಮ್ಮೆ ವೇತನ ಪರಿಷ್ಕರಣೆ ಆದರೆ ಅದು ಹತ್ತು ವರ್ಷಗಳವರಗೆ ಮುಂದುವರೆಯುತ್ತೆ, ಇದು ನಿಯಮವೂ ಆಗಿದೆ. ನಾವು ನೀಡಿರುವ ಪರಿಷ್ಕೃತ ವೇತನ ಸಂಸ್ಥೆಯ ಅಭಿವೃದ್ಧಿಗೆ ಸರಿಸಮಾನವಾಗಿದೆ.ಆದರೆ, ಹಿರಿಯ ಅಧಿಕಾರಿಗಳಿಗೆ ನೀಡಿರುವಷ್ಟೇ ವೇತನ ಸೌಕರ್ಯಗಳನ್ನು ತಮಗೂ ಕೊಡಬೇಕು ಎಂದು ಮುಷ್ಕರನಿರತ ನೌಕರರು ಒತ್ತಾಯಿಸಿದ್ದಾರೆ ಎಂದರು.
ಯಾವುದೇ ಕಾರಣಕ್ಕೂ ನಾವು ತಾರತಮ್ಯ ಮಾಡಿಲ್ಲ. ವ್ಯಾಪಾರದ ಪರಿಸ್ಥಿತಿ ಹಿಂದಿಗಿಂತ ಭಿನ್ನವಾಗಿದೆ. ವೇತನ ಹೆಚ್ಚಳ ಮಾಡಿದರೆ ಆಗ ನೌಕರರ ಕೆಲಸಗಳನ್ನು ಕೂಡಾ ಹೆಚ್ಚಿಸಬೇಕಾದ ಅನಿವಾರ್ಯತೆ ಉಂಟಾಗಲಿದೆ ಎಂದ ಅವರು, ಈಗಾಗಲೇ ಚಾಲನೆಯಲ್ಲಿದ್ದರೂ ಹಾಗೂ ಮುಷ್ಕರಕ್ಕೆ ಬದಲಾಗಿ ಕಾರ್ಯ ಸಾಧು ಒಪ್ಪಂದವೊಂದಕ್ಕೆ ಮುಂದಾಗಲು ಕಾರ್ಮಿಕ ಪ್ರಾಧಿಕಾರಗಳ ಸಲಹೆಯನ್ನು ಧಿಕ್ಕರಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾರ್ವಜನಿಕ ಬಳಕೆಯ ಸೇವೆಗಳು ವಿಭಾಗದಲ್ಲಿ ರಕ್ಷಣಾ ಸಂಸ್ಥೆ ಎಂದು ವಿಂಗಡಿಸಲ್ಪಟ್ಟಿರುವ ಸಂಸ್ಥೆಗೆ ಎಚ್‌ಎಎಲ್ ಕಾರ್ಮಿಕ ಸಂಘಟನೆಗಳು ಅಗೌರವ ತೋರಿವೆ. ಅಲ್ಲದೆ, ಅಸ್ಥಿರತೆಯನ್ನು ಕಾರ್ಮಿಕ ಸಂಘಟನೆಗಳಿಗೆ ಅನೇಕ ಬಾರಿ ವಿವರಿಸಲಾಗಿದೆ.
ಈ ವಿಚಾರವನ್ನು ಬಗೆಹರಿಸಿಕೊಳ್ಳಲು ಹೆಚ್‌ಎಎಲ್ ಆಡಳಿತವು ಯಾವುದೇ ಪ್ರಯತ್ನದಿಂದ ಹಿಂದೆ ಬಿದ್ದಿಲ್ಲ. ಈ ಕುರಿತು ೧೧ ಸರಣಿ ಸಭೆಗಳು ನಡೆದಿದ್ದು, ಇತ್ತೀಚಿನ ಸಭೆಗಳು ೨೦೧೯ರ ಅ.೧೨ ಮತ್ತು ೧೩ಕ್ಕೆ ಜರುಗಿವೆ. ನೌಕರ ವರ್ಗದ ಬಹುತೇಕರು ಸಂಸ್ಥೆಯ ವಾದವನ್ನು ಸ್ವಾಗತಿಸುತ್ತಾರೆ ಹಾಗೂ ಒಪ್ಪುತ್ತಾರೆ ಎಂಬ ನಂಬಿಕೆ ಇದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಎಚ್‌ಆರ್ ನಿರ್ದೇಶಕ ವಿ.ಎಂ. ಚಮೋಲ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








