ನಗರದ ಅರ್ಧ ಭಾಗದಲ್ಲಿ ನೀರಿಗೆ ಸಂಕಷ್ಟ

ತುಮಕೂರು

       ಬೇಸಿಗೆಯ ಧಗೆ ದಿನೇ ದಿನೇ ಹೆಚ್ಚುತ್ತಿರುವಂತೆಯೇ ತುಮಕೂರು ನಗರದ ಅರ್ಧ ಭಾಗದಷ್ಟು ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗತೊಡಗಿದೆ.

       ಅತ್ತ ಬುಗುಡನಹಳ್ಳಿಯಲ್ಲಿರುವ `ಹೇಮಾವತಿ ಜಲಸಂಗ್ರಹಾಗಾರ’ದ ನೀರು ದಿನೇ ದಿನೇ ಗಣನೀಯವಾಗಿ ಕ್ಷೀಣಿಸುತ್ತಿದೆ. ಇತ್ತ ತುಮಕೂರು ನಗರಾದ್ಯಂತ ತುಮಕೂರು ಮಹಾನಗರ ಪಾಲಿಕೆ (ಟಿ.ಎಂ.ಪಿ.) ವತಿಯಿಂದ ಕೊರೆಸಿರುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತದ ಪರಿಣಾಮವಾಗಿ ನೀರು ಬತ್ತುತ್ತಿದೆ.

         ಇದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸಮಸ್ಯೆ ಸೃಷ್ಟಿಯಾಗುತ್ತಿದೆ. ಒಟ್ಟು 35 ವಾರ್ಡ್‍ಗಳನ್ನು ಹೊಂದಿರುವ ತುಮಕೂರು ನಗರದಲ್ಲಿ ಪ್ರಸ್ತುತ (ಮಾರ್ಚ್ 21 ರ ಲೆಕ್ಕಾಚಾರದಂತೆ) 15 ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ. ಅಂದರೆ ನಗರದ ಅರ್ಧಭಾಗದಲ್ಲಿ ಈಗ ಸಮಸ್ಯೆ ಕಾಣತೊಡಗಿದೆ. ಈ 15 ವಾರ್ಡ್‍ಗಳ ಪೈಕಿ 9 ವಾರ್ಡ್‍ಗಳಲ್ಲಂತೂ ಅತಿ ಹೆಚ್ಚಿನ ಸಮಸ್ಯೆ ಉಂಟಾಗಿ ನೀರಿನ ಸಂಕಷ್ಟ ಎದುರಾಗಿದೆ ಎಂಬುದು ಈ ತಕ್ಷಣದ ಲೆಕ್ಕಾಚಾರ.

ಎಲ್ಲೆಲ್ಲಿ ಸಮಸ್ಯೆ?

       ವಾರ್ಡ್ ಸಂಖ್ಯೆ 1 (ಮರಳೇನಹಳ್ಳಿ), 2 (ಅಂತರಸನಹಳ್ಳಿ), 4 (ಚಿಕ್ಕಪೇಟೆ), 5 (ಶ್ರೀರಾಮನಗರ), 11 (ಮೇಳೇಕೋಟೆ), 17 (ಶಾಂತಿನಗರ), 19 (ಕೋತಿತೋಪು), 21 (ಕುವೆಂಪು ನಗರ), 23 (ಸತ್ಯಮಂಗಲ), 28 (ಸದಾಶಿವನಗರ), 29 (ಮರಳೂರು ದಿಣ್ಣೆ), 30 (ವಿಜಯನಗರ), 31 (ಶೆಟ್ಟಿಹಳ್ಳಿ), 34 (ಕ್ಯಾತಸಂದ್ರ ಜನತಾ ಕಾಲೋನಿ), 35 (ದೇವರಾಯಪಟ್ಟಣ) ಈ ಹದಿನೈದು ವಾರ್ಡ್‍ಗಳ ವಿವಿಧ ಬಡಾವಣೆಗಳಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಗುರುತಿಸಲಾಗಿದೆ.
ಈ 15 ವಾರ್ಡ್‍ಗಳ ಪೈಕಿ ವಾರ್ಡ್ ಸಂಖ್ಯೆ 4, 5, 11, 23. 28, 30, 31, 34 ಮತ್ತು 35 -ಈ ಒಂಭತ್ತು ವಾರ್ಡ್‍ಗಳಲ್ಲಿ ತೀವ್ರ ಪ್ರಮಾಣದ ನೀರಿನ ಸಂಕಷ್ಟ ಉಂಟಾಗಿದೆಯೆಂದು ಪಾಲಿಕೆಯು ಗುರುತಿಸಿದೆ.

ಟ್ಯಾಂಕರ್‍ಗಳಲ್ಲಿ ನೀರು

       ಪ್ರಸ್ತುತ ನಗರದ 11 ನೇ ವಾರ್ಡ್‍ನ ರಾಜೀವ್‍ಗಾಂಧಿ ನಗರ ಮತ್ತಿತರ ಕಡೆಗಳಲ್ಲಿ, 23 ನೇ ವಾರ್ಡ್ ವ್ಯಾಪ್ತಿಯ ಜ್ಯೋತಿಪುರ, ಸತ್ಯಮಂಗಲ ಮೊದಲಾದೆಡೆ, 28 ನೇ ವಾರ್ಡ್‍ನ ಮರಳೂರು ದಿಣ್ಣೆ, ಪ್ರಗತಿ ಬಡಾವಣೆ ಮತ್ತಿತರ ಸ್ಥಳಗಳಲ್ಲಿ ಕೊಳವೆ ಬಾವಿಗಳ ನೀರೂ ಅಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮಹಾನಗರ ಪಾಲಿಕೆಯು ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರನ್ನು ಪೂರೈಸುವ ಕಾರ್ಯವನ್ನು ಈಗಾಗಲೇ ಆರಂಭಿಸಿದೆಯೆಂದು ಮೂಲಗಳು ಹೇಳುತ್ತಿವೆ.

3 ರಿಂದ 4 ದಿನಗಳಿಗೊಮ್ಮೆ ನೀರು ಪೂರೈಕೆ

         ಬುಗುಡನಹಳ್ಳಿಯ `ಹೇಮಾವತಿ ಜಲಸಂಗ್ರಹಾಗಾರ’ದ ಹೇಮಾವತಿ ನೀರು ಮತ್ತು ಪಾಲಿಕೆ ಸುಪರ್ದಿನ ಕೊಳವೆ ಬಾವಿಗಳಿಂದ ಲಭಿಸುತ್ತಿರುವ ನೀರನ್ನು ಬಳಸಿಕೊಂಡು ಪ್ರಸ್ತುತ ತುಮಕೂರು ನಗರದಲ್ಲಿ ಸರಾಸರಿ 3 ರಿಂದ 4 ದಿನಗಳಿಗೊಮ್ಮೆ ಕುಡಿಯುವ ನೀರನ್ನು ಸಾರ್ವಜನಿಕರಿಗೆ ನಲ್ಲಿ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂಬುದು ಪಾಲಿಕೆಯಲ್ಲಿ ಲಭಿಸುವ ಮಾಹಿತಿ.

      ಹೇಮಾವತಿ ನೀರನ್ನು ಇದೇ ಪ್ರಮಾಣದಲ್ಲಿ ಬಳಸಿಕೊಂಡರೆ ಬರುವ ಜೂನ್ ತಿಂಗಳವರೆಗೂ ಉಪಯೋಗಿಸಬಹುದು. ಇನ್ನು ಅಂತರ್ಜಲ ಕುಸಿತದ ಪರಿಣಾಮವಾಗಿ ಪಾಲಿಕೆ ಸುಪರ್ದಿನ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣವು ದಿನ-ದಿನವೂ ವ್ಯತ್ಯಯವಾಗುತ್ತಿದೆ. ಮಹಾನಗರ ಪಾಲಿಕೆ ಸುಪರ್ದಿನಲ್ಲಿ ಒಟ್ಟು 720 ಕೊಳವೆಬಾವಿಗಳಿವೆಯಾದರೂ, ಇವುಗಳಲ್ಲಿ ಈಗ ಚಾಲನೆಯಲ್ಲಿರುವುದು 608 ಕೊಳವೆಬಾವಿಗಳು ಮಾತ್ರ.

      ಇವುಗಳಲ್ಲಿ ಸರಾಸರಿ ಒಂದು ಇಂಚು, ಒಂದೂವರೆ ಇಂಚು ಹಾಗೂ ಬೆರಳೆಣಿಕೆಯ ಕೊಳವೆ ಬಾವಿಗಳಲ್ಲಿ ಗರಿಷ್ಟ ಎರಡು ಇಂಚುಗಳಷ್ಟು ಮಾತ್ರ ನೀರಿನ ಲಭ್ಯತೆಯಿದೆ. ಬೇಸಿಗೆಯ ತಾಪಮಾನ ಏರಿದಂತೆ ಈ ಕೊಳವೆಬಾವಿಗಳಲ್ಲೂ ದಿಢೀರನೆ ನೀರಿನ ಕೊರತೆಯುಂಟಾಗಿ ನೀರು ಲಭಿಸದಂತಾಗುತ್ತಿದೆ. ಇನ್ನು ಕೊಳವೆ ಬಾವಿಗಳಿಗೆ ಅಳವಡಿಸಲಾಗಿರುವ ಪಂಪು-ಮೋಟಾರ್‍ಗಳು ದಿಢೀರನೆ ಕೆಟ್ಟುಹೋಗುತ್ತಿದ್ದು, ದುರಸ್ತಿಗೊಳ್ಳುವುದು ವಿಳಂಬವಾಗುವುದರಿಂದಲೂ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಇದರ ದುಷ್ಪರಿಣಾಮವು ಕುಡಿಯುವ ನೀರು ಪೂರೈಕೆ ಮೇಲೆ ಬೀರುತ್ತಿದೆ” ಎಂದು ತುಮಕೂರು ನಗರ ಈಗ ಎದುರಿಸುತ್ತಿರುವ ನೀರಿನ ಸಮಸ್ಯೆಯ ಪರಿಸ್ಥಿತಿಯನ್ನು ಬಣ್ಣಿಸಲಾಗುತ್ತಿದೆ.

ನೀರನ್ನು ಮಿತವಾಗಿ ಬಳಸಿ

      ತುಮಕೂರು ನಗರ ಈ ಬೇಸಿಗೆಯಲ್ಲಿ ಎಂದಿನಂತೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವುದರಿಂದ ಸಾರ್ವಜನಿಕರು ನೀರನ್ನು ಪೋಲು ಮಾಡದೆ ಹಿತ-ಮಿತವಾಗಿ ಬಳಸಬೇಕು” ಎಂಬುದು ಜಾಗೃತ ನಾಗರಿಕರ ಮನವಿ.“ನಮ್ಮದೇ ನಗರದ ಎಷ್ಟೋ ಕಡೆ ಜನರು ನೀರಿಗಾಗಿ ಅನುಭವಿಸುತ್ತಿರುವ ತೊಂದರೆ ಹೇಳತೀರದು. ಒಂದೆರಡು ಬಿಂದಿಗೆ ನೀರಿಗಾಗಿ ಪಡುವ ಕಷ್ಟವನ್ನು ಗಮನಿಸಬೇಕು. ಆಗ ನೀರಿನ ಬೆಲೆ ಅರ್ಥವಾಗುತ್ತದೆ. ಆದ್ದರಿಂದ ನೀರನ್ನು ಎಚ್ಚರಿಕೆಯಿಂದ ಉಪಯೋಗಿಸಬೇಕು” ಎನ್ನುತ್ತಿದ್ದಾರೆ.

       ವಾಹನ ತೊಳೆಯಲು, ಮನೆ ಆವರಣದ ಗಿಡಗಳಿಗೆ ನೀರು ಹಾಕಲು, ಮನೆ ಮುಂದೆ ಧೂಳು ನಿಯಂತ್ರಿಸಲು ಯದ್ವಾತದ್ವಾ ನೀರನ್ನು ಉಪಯೋಗಿಸುತ್ತಿರುವ ಉದಾಹರಣೆಗಳಿವೆ. ಹಾಗೆ ಮಾಡದೆ ನೀರನ್ನು ಹಿತ-ಮಿತವಾಗಿ ಬಳಸಬೇಕು. ನೀರನ್ನು ಸಾಧ್ಯವಾದಷ್ಟು ಉಳಿಸುವ ಮೂಲಕ ಇನ್ನೊಬ್ಬರಿಗೆ ಕುಡಿಯುವ ನೀರು ಸಿಗಲು ಅವಕಾಶವಾಗುವಂತೆ ಮಾಡಬೇಕು” ಎಂದು ಜಾಗೃತ ನಾಗರಿಕರು ಹೇಳುತ್ತಿದ್ದಾರೆ.

ಪಾಲಿಕೆ ಸಭೆ ಚರ್ಚಿಸಿತೇ?

        ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇದೇ ಮಾರ್ಚ್ 6 ರಂದು ನಡೆದಿತ್ತು. ಆ ಸಭೆಯಲ್ಲಿ ಬೇಸಿಗೆ ಕಾಲದಲ್ಲಿ ತುಮಕೂರು ನಗರದಲ್ಲಿ ಸಾಮಾನ್ಯವಾಗಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಕ್ಕಾಗಿ ಕೈಗೊಳ್ಳುವ ಕ್ರಮಗಳ ಬಗ್ಗೆ ಎಷ್ಟು ಜನ ಕಾರ್ಪೋರೇಟರ್‍ಗಳು ಚರ್ಚಿಸಿದರು? ಏನೇನು ನಿರ್ಣಯ ಕೈಗೊಂಡರು?” ಎಂದು ತೆರಿಗೆದಾರ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap