ತುಮಕೂರು : ಪಾಲಿಕೆಗೆ ಆರ್ಥಿಕ ಸಂಕಷ್ಟ: ಅಭಿವೃದ್ಧಿ ಕಾರ್ಯ ಕುಂಠಿತ

ತುಮಕೂರು

    ವಿಧಾನ ಪರಿಷತ್ ಚುನಾವಣೆ ನೀತಿಸಂಹಿತೆ ಜಾರಿ, ಕೊರೊನಾ ಹಾವಳಿ, ಅನುದಾನದ ಕೊರತೆ ನಡುವೆ ತುಮಕೂರು ನಗರಪಾಲಿಕೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಕೆಲ ವಾರ್ಡ್‍ಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಾಗೂ 14 ಮತ್ತು 15ನೇ ಹಣಕಾಸಿನ ಯೋಜನೆಯ ಬಾಕಿ ಕೆಲಸಗಳು ಮಾತ್ರವೇ ಮುಂದುವರೆದಿವೆ.ಮುಖ್ಯವಾಗಿ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿದ್ದ 125 ಕೋಟಿ ರೂ. ವಿಶೇಷ ಅನುದಾನ ವಾಪಸ್ ಹೋಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂಬುದು ಸದಸ್ಯರ ಅಭಿಪ್ರಾಯ.

    ಈಗ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದು, ನಗರ ಪಾಲಿಕೆಯ ಮೇಯರ್, ಉಪಮೇಯರ್ ಅವರ ಕಾರುಗಳನ್ನು ಸರ್ಕಾರ ವಾಪಸ್ ಪಡೆದಿದೆ. ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಹೀಗಾಗಿ, ಇವರು ಪಾಲಿಕೆ ಕಚೇರಿಗೆ ಬರುವುದೇ ಅಪರೂಪವಾಗಿದೆ. ಬಂದರೂ ಎಲ್ಲಿ ಕುಳಿತುಕೊಳ್ಳುವುದು ಎಂದು ಪ್ರಶ್ನೆ ಮಾಡುತ್ತಾರೆ.

    ಇದೇ ಕಾರಣಕ್ಕೆ ಸದಸ್ಯರ ಪಾಲಿಕೆ ಭೇಟಿಯೂ ಕಮ್ಮಿಯಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಅನೇಕ ಸದಸ್ಯರು ಪಾಲಿಕೆ ಕಚೇರಿ ಕಡೆ ತಲೆಹಾಕಿಲ್ಲ. ಕೊರೊನಾ ಕಾರಣದಿಂದ ನಗರಪಾಲಿಕೆ ಕಚೇರಿಗೆ ಸಾರ್ವಜನಿಕರ ಅನಗತ್ಯ ಪ್ರವೇಶ ನಿರ್ಬಂಧಿಸುವ ಸಲುವಾಗಿ ಕಚೇರಿಯ ಪಶ್ಚಿಮ ಭಾಗದ ಬಾಗಿಲು ಬಂದ್ ಮಾಡಲಾಗಿದೆ. ಮುಖ್ಯ ದ್ವಾರದಲ್ಲಿ ಪ್ರತಿಯೊಬ್ಬರನ್ನು ಸ್ಯಾನಿಟೈಸರ್ ಮಾಡಿ, ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ ಪ್ರವೇಶ ನೀಡಲಾಗುತ್ತದೆ. ಹೀಗಾಗಿ ಕಚೇರಿ ಆವರಣದಲ್ಲಿ ಮೊದಲು ಇದ್ದಂತೆ ಸಾರ್ವಜನಿಕರ ಓಡಾಟ ವಿರಳವಾಗಿದೆ.

    ಅದಕ್ಕಿಂತ ಮುಖ್ಯವಾಗಿ ನಗರ ಪಾಲಿಕೆಯಲ್ಲಿ ಆದಾಯವೂ ಇಲ್ಲ, ಅಭಿವೃದ್ಧಿಯೂ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಕೊರೊನಾ ಕಾಟದಲ್ಲಿ ಜನ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಕಟ್ಟುನಿಟ್ಟಿನಿಂದ ಕಂದಾಯ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ. ಸಂಗ್ರಹವಾಗುವ ಕಂದಾಯ ಪಾಲಿಕೆ ಸಿಬ್ಬಂದಿಗೆ ಸಂಬಳ ಕೊಡಲೂ ಸಾಕಾಗುತ್ತಿಲ್ಲ ಎನ್ನುವ ಸ್ಥಿತಿ. ಹೀಗಿರುವಾಗ ಪಾಲಿಕೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣವೆಲ್ಲಿ ಎನ್ನುವಂತಾಗಿದೆ. ಹೀಗಾಗಿ ಒಂದರ್ಥದಲ್ಲಿ, ಸದಸ್ಯರಿಗೂ, ಅಧಿಕಾರಿಗಳಿಗೂ ಕೆಲಸವಿಲ್ಲದಂತಾಗಿದೆ. ಉಳಿದಂತೆ ಕುಡಿಯುವ ನೀರು ಸ್ವಚ್ಚತೆ, ಒಳಚರಂಡಿ ನಿರ್ವಹಣೆಯಂತಹ ನಿಯಮಿತ ಕೆಲಸಗಳು ಮುಂದುವರೆದಿವೆ.

    ಪಾಲಿಕೆ ಹಣ ನಂಬಿದ್ದರೆ ರಾಜಿನಾಮೆ ನಿಡಬೇಕಾಗುತ್ತಿತ್ತು.ನಗರ ಪಾಲಿಕೆ ಅನುದಾನ ನಂಬಿಕೊಂಡು, ವಾರ್ಡಿನಲ್ಲಿ ಕಾಮಗಾರಿ ಮಾಡಿಸುತ್ತೇನೆ ಎಂದುಕೊಂಡಿದ್ದರೆ ನಾನು ಸದಸ್ಯತ್ವಕ್ಕೆ ರಾಜಿನಾಮೆ ನೀಡಬೇಕಾಗುತಿತ್ತು, ವಾರ್ಡಿನಲ್ಲಿ ಸಣ್ಣ ರಸ್ತೆ, ಚರಂಡಿ ಕೆಲಸÀ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಶಾಸಕರ ಸಹಕಾರದಿಂದ ವಿವಿಧ ಯೋಜನೆಗಳ ಅನುದಾನ ಪಡೆದು ಹಲವು ಕಾಮಗಾರಿ ಕೈಗೊಳ್ಳಲು ಸಾಧ್ಯವಾಯಿತು. ಇಲ್ಲಿ 4.5 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ, 90 ಲಕ್ಷ ರೂ. ರಸ್ತೆ, ಚರಂಡಿ ಕಾಮಗಾರಿ ಮಾಡಲು ಅವಕಾಶವಾಯಿತು ಎಂದು 32ನೇ ವಾರ್ಡ್ ಪಾಲಿಕೆ ಸದಸ್ಯ ಬಿ.ಜಿ.ಕೃಷ್ಣಪ್ಪ ಹೇಳಿದರು.

     ನಗರ ಪಾಲಿಕೆಯಿಂದ ವಾಪಸ್ಸಾಗಿರುವ 125 ಕೋಟಿ ರೂ. ವಿಶೇಷ ಅನುದಾನ ಮರಳಿ ಬಂದರೆ ಇನ್ನಷ್ಟು ಕೆಲಸ ಮಾಡಬಹುದು. ಕ್ಯಾತ್ಸಂದ್ರದ ಕೆ.ಎನ್.ರಾಜಣ್ಣನವರ ಮನೆ ಬಳಿಯಿಂದ ಶೆಟ್ಟಿಹಳ್ಳಿ ಅಂಡರ್ ಪಾಸ್‍ವರೆಗೆ ರೈಲ್ವೇ ಟ್ರಾಕ್ ಪಕ್ಕದಲ್ಲಿ ಹಾದು ಹೋಗುವ ರಸ್ತೆ ಅಭಿವೃದ್ಧಿ ಆಗಬೇಕು ಎಂಬುದು ತಮ್ಮ ಪ್ರಯತ್ನ. ಈ ರಸ್ತೆಯಾದರೆ ಬಿ.ಹೆಚ್.ರಸ್ತೆ, ಎಸ್‍ಐಟಿ ಮುಖ್ಯ ರಸ್ತೆಯಲ್ಲಿ ಸಂಚಾರ ಒತ್ತಡ ನಿಯಂತ್ರಣವಾಗುತ್ತದೆ ಎಂದರು.ತಮ್ಮ ವಾರ್ಡಿನ ಗೂಬೆ ಹಳ್ಳ ಜಾಗದಲ್ಲಿ ಅಮಾನಿಕೆರೆ ಪಾರ್ಕ್ ಮಾದರಿಯಲ್ಲಿ ಸುಸಜ್ಜಿತ ಉದ್ಯಾನವನ ನಿರ್ಮಾಣ ಮಾಡಬೇಕು ಎಂಬುದು ತಮ್ಮ ಕನಸು, ಸ್ಮಾರ್ಟ್‍ಸಿಟಿಯಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಬಿ.ಜಿ.ಕೃಷ್ಣಪ್ಪ ಮನವಿ ಮಾಡಿದರು.

ಶಾಸಕರ ಅನುದಾನವಿಲ್ಲ

   ನಗರ ಪಾಲಿಕೆಯಲ್ಲಿ 14, 15ನೇ ಹಣಕಾಸು ಯೋಜನೆ ಅನುದಾನ ಬಿಟ್ಟರೆ ಬೇರೆ ಹಣ ಇಲ್ಲ. ಶಾಸಕರ ಅನುದಾನವನ್ನು ಬಿಜೆಪಿ ಸದಸ್ಯರಿರುವ ವಾರ್ಡ್‍ಗಳಿಗೇ ನೀಡಲಾಗಿದೆ. ಕಾಂಗ್ರೆಸ್, ಜೆಡಿಎಸ್ ಸದಸ್ಯರಿರುವ ವಾರ್ಡ್‍ಗಳನ್ನು ನಿರ್ಲಕ್ಷಿಸಲಾಗಿದೆ. ತಮ್ಮ ವಾರ್ಡಿಗೆ ಶಾಸಕರ ಅನುದಾನದಿಂದ ಒಂದು ರೂಪಾಯಿ ನೀಡಿಲ್ಲ ಎಂದು 7ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಜೆ.ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

       ಸರ್ಕಾರಕ್ಕೆ ವಾಪಸ್ ಹೋಗಿರುವ 125 ಕೋಟಿ ರೂ.ಗಳನ್ನು ವಾಪಸ್ ತರಿಸಲು ಶಾಸಕರು ಪ್ರಯತ್ನ ಮಾಡಬೇಕು, ಬಂದ ನಂತರ ಶಾಸಕರ ಅನುದಾನ ಸಿಗದ, ಹಿಂದುಳಿದ, ಸ್ಲಂಗಳು ಹೆಚ್ಚಾಗಿರುವ ವಾರ್ಡ್‍ಗಳಲ್ಲಿ ಕಾಮಗಾರಿ ಕೈಗೊಳ್ಳಲು ಹೆಚ್ಚಿನ ಹಣ ನೀಡಬೇಕು ಎಂದು ಒತ್ತಾಯಿಸಿದರು.

ವಾರ್ಷಿಕ ಯೋಜನೆಗಳ ಅನುದಾನ ಬಿಟ್ಟರೆ ಬೇರೆ ಇಲ್ಲ.

      ವಾರ್ಷಿಕ ಹಣಕಾಸಿನ ಯೋಜನೆ ಹಣ ಹೊರತಾಗಿ, ತಾವು ಹೋರಾಟ ಮಾಡಿ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಒಂದು ಸಿಮೆಂಟ್ ರಸ್ತೆ ಮಾಡಿಸಿರುವುದು ಬಿಟ್ಟರೆ ಶಾಸಕರ ಅನುದಾನ ನಮ್ಮ ವಾರ್ಡಿಗೆ ನೀಡಿಲ್ಲ. ನಗರಪಾಲಿಕೆಯ ಆರ್ಥಿಕ ಪರಿಸ್ಥಿತಿ ಹೀನಾಯವಾಗಿದೆ. ಕಂದಾಯ ಸಂಗ್ರಹ ಮಾಡಲಾಗದೆ, ಆದಾಯ ಇಲ್ಲದಂತಾಗಿದೆ ಎಂದು ಮಂಜುನಾಥ್ ಹೇಳಿದರು.

ಅನುದಾನ ಮರಳಿ ಬರುವ ವಿಶ್ವಾಸ

     125 ಕೋಟಿ ರೂ.ಗಳ ವಿಶೇಷ ಅನುದಾನ ಬಾರದೆ ನಗರ ಪಾಲಿಕೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸುವುದು ಕಷ್ಟ. 14, 15ನೇ ಹಣಕಾಸು ಯೋಜನೆಯ ಅನುದಾನದಡಿ ವಾರ್ಡ್‍ಗಳಲ್ಲಿ 15-20 ಲಕ್ಷ ರೂ.ಗಳ ಕಾಮಗಾರಿಗಳು ನಡೆಯುತ್ತಿವೆ. ಇದರ ಹೊರತಾಗಿ ಇನ್ನಾವುದೇ ಆದಾಯವಿಲ್ಲ, ಕಂದಾಯ ಸಂಗ್ರಹಣೆ ಸಾಧ್ಯವಾಗುತ್ತಿಲ್ಲ ಎಂದು 26ನೇ ವಾರ್ಡ್ ಸದಸ್ಯ ಹೆಚ್.ಮಲ್ಲಿಕಾರ್ಜುನಯ್ಯ ಹೇಳಿದರು.

      125 ಕೋಟಿ ರೂ. ಅನುದಾನವನ್ನು ವಾಪಸ್ ತರುವ ಬಗ್ಗೆ ಶಾಸಕರು ಭರವಸೆ ನೀಡಿದ್ದಾರೆ. ಆ ಹಣ ಬಂದರೆ ಪ್ರತಿ ವಾರ್ಡ್‍ಗೆ ಕನಿಷ್ಟ ಎರಡು ಕೋಟಿ ರೂ.ಗಳನ್ನು ವಿವಿಧ ಕಾಮಗಾರಿಗಳಿಗಾಗಿ ಹಂಚಿಕೆ ಮಾಡಬಹುದು ಎಂದು ಹೇಳಿದರು.

ಪಾಲಿಕೆಯ ಆರ್ಥಿಕ ಸ್ಥಿತಿ ಹೀನಾಯ

     ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ 125 ಕೋಟಿ ರೂ. ಕುರಿತು ತಾವು ಜಿಲ್ಲಾ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಹಣ ವಾಪಸ್ ಹೋಗಿಲ್ಲ, ಹೋಲ್ಡ್ ಮಾಡಲಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿ ಇರುವ ಕಾರಣ ಅದರ ಬಗ್ಗೆ ಗಮನ ನೀಡಲಾಗಿಲ್ಲ ಎಂದು ಸಚಿವರು ಹೇಳಿದರು. ಈ ಅನುದಾನದ ಬಗ್ಗೆ ಪಾಲಿಕೆಗೆ ಈವರೆಗೂ ಯಾವುದೇ ಮಾಹಿತಿ ಇಲ್ಲ ಎಂದು ಮೇಯರ್ ಫರೀದಾ ಬೇಗಂ ಹೇಳಿದರು.
ನಗರ ಪಾಲಿಕೆಯ ಆರ್ಥಿಕ ಪರಿಸ್ಥಿತಿ ಹೀನಾಯವಾಗಿದೆ.

     15ನೇ ಹಣಕಾಸು ಯೋಜನೆಯ 15 ಕೋಟಿ ರೂ.ಗಳಲ್ಲಿ ಇಲಾಖೆ ನಿರ್ದೇಶನದಂತೆ ಶೇಕಡ 62ರಷು ಕುಡಿಯುವ ನೀರು, ಸ್ವಚ್ಚತೆ, ಯುಜಿಡಿ ನಿರ್ವಹಣೆಗೆ ಬಳಸಬೇಕು, ಅದರಲ್ಲಿ ಉಳಿದ 4 ಕೋಟಿ ರೂ.ಗಳಲ್ಲಿ ವಿವಿಧ ಕಾಮಗಾರಿಗಳಿಗಾಗಿ ಎಲ್ಲಾ ವಾರ್ಡ್‍ಗಳಿಗೂ ಹಂಚಿಕೆ ಮಾಡಲಾಗಿದೆ. ಕೆಲವು ಸದಸ್ಯರು ಆರೋಪ ಮಾಡುವಂತೆ ಪಿಡಬ್ಲೂಡಿಯ ಅನುದಾನ ಸ್ಲಂಗಳಿಗೆ ಹಂಚಿಕೆಯಾಗಿಲ್ಲ. ಮುಂದಿನ ದಿನಗಳಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಆದ್ಯತೆ ನೀಡಬೇಕು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link