ಬಳ್ಳಾರಿ :
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಧಿಸಲಾಗಿರುವ ಲಾಕ್‍ಡೌನ್‍ನಿಂಧ ಕೋವಿಡ್ ಸೋಂಕು ನಿಯಂತ್ರಣದಲ್ಲಾಗಿರುವ ಬದಲಾವಣೆಯನ್ನು ಪರಿಶೀಲಿಸಿ ಬಳ್ಳಾರಿ ಜಿಲ್ಲೆಯಲ್ಲೂ ಲಾಕ್‍ಡೌನ್ ಜಾರಿಗೊಳಿಸಲು ನಿರ್ಣಯ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‍ಸಿಂಗ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೋವಿಡ್ ಸ್ಥಿತಿಗತಿ ಮತ್ತು ಸೋಂಕು ಪ್ರಮಾಣ ಹರಡುವಿಕೆಗೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರ ಲಾಕ್‍ಡೌನ್ ಮಾಡುವ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು.
ಜಿಲ್ಲೆಯಲ್ಲಿ ಲಾಕ್‍ಡೌನ್ ವಿಧಿಸಿದರೆ ಕೋವಿಡ್ ಸೋಂಕು ನಿಯಂತ್ರಣವಾಗಲಿದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಹುಬ್ಬಳ್ಳಿ-ಧಾರವಾಡ, ಬೆಂಗಳೂರು ನಗರ ಸೇರಿ ವಿವಿಧ ಜಿಲ್ಲೆಗಳಲ್ಲಿ ಒಂದು ವಾರದ ಕಾಲ ಲಾಕ್‍ಡೌನ್ ವಿಧಿಸಲಾಗಿದ್ದು, ಅಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದನ್ನು ಪರಿಶೀಲಿಸಿ ಜಿಲ್ಲೆಯಲ್ಲಿ ಲಾಕ್‍ಡೌನ್ ವಿಧಿಸಲು ನಿರ್ಣಯ ಕೈಗೊಳ್ಳಲಾಗುವುದು. ಅಲ್ಲಿವರೆಗೆ ಜಿಲ್ಲೆಯಲ್ಲಿ ಯಾವುದೇ ಲಾಕ್‍ಡೌನ್ ವಿಧಿಸುವುದಿಲ್ಲ ಎಂದು ತಿಳಿಸಿದರು.
ಕೋವಿಡ್ ಸೋಂಕು ವಿಶ್ವಕ್ಕೆ ಮಾರಕವಾಗಿ ಕಾಡುತ್ತಿದೆ. ಸೋಂಕು ನಿಯಂತ್ರಣಕ್ಕಾಗಿ ನಿಖರವಾಗಿ ನಿರ್ಣಯ ಕೈಗೊಳ್ಳಲು ಅಧಿಕಾರಿಗಳು, ತಜ್ಞರು, ಜನಪ್ರತಿನಿಧಿಗಳಿಗೂ ಧೈರ್ಯ ಬರುತ್ತಿಲ್ಲ. ಈ ಹಿಂದೆ ದೇಶಾದ್ಯಂತ ವಿಧಿಸಿದ್ದ ಲಾಕ್‍ಡೌನ್‍ನಿಂದಾಗಿ ಕೂಲಿ ಕಾರ್ಮಿಕರು, ಆಟೋ, ಇತರೆ ವಾಹನಗಳ ಚಾಲಕರು, ಬೀದಿಬದಿ ವ್ಯಾಪಾರಿಗಳು ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದೀಗ ಮತ್ತೊಮ್ಮೆ ಲಾಕ್‍ಡೌನ್ ವಿಧಿಸಿದರೆ ಮತ್ತೊಮ್ಮೆ ಸಮಸ್ಯೆ ಎದುರಿಸಬೇಕಾಗಲಿದ್ದು, ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಮೇಲಾಗಿ ಜಿಲ್ಲೆಯಲ್ಲೂ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಧಾನ್ಯಗಳನ್ನು ಕೇವಲ ಶೇ.35 ರಷ್ಟು ಮಾತ್ರ ವಿತರಿಸಲಾಗಿದ್ದು, ಇನ್ನು ಶೇ.65 ರಷ್ಟು ಧಾನ್ಯಗಳನ್ನು ವಿತರಿಸಬೇಕಾಗಿದೆ. ಈ ಎಲ್ಲ ಕಾರಣಗಳಿಂದ ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಲಾಕ್‍ಡೌನ್ ವಿಧಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಜಿಂದಾಲ್ ಸಂಸ್ಥೆಗೆ 10 ಸಾವಿರ ರ್ಯಾಪಿಡ್ ಆಂಟಿಜೆನ್ ಕಿಟ್‍ಗಳನ್ನು ಖರೀದಿಸುವಂತೆ ಸೂಚನೆ ನೀಡಲಾಗಿದೆ. ಇದರಲ್ಲಿ ಜಿಂದಾಲ್‍ಗೆ 5 ಸಾವಿರ, ಜಿಲ್ಲಾಡಳಿತಕ್ಕೆ 5 ಸಾವಿರ ಕಿಟ್‍ಗಳನ್ನು ನೀಡಲಾಗುವುದು. ಸದ್ಯ ಜಿಲ್ಲೆಯಲ್ಲಿ 1200ಕ್ಕೂ ಹೆಚ್ಚು ರ್ಯಾಪಿಡ್ ಆಂಟಿಜೆನ್ ಕಿಟ್‍ಗಳನ್ನು ಬಳಕೆ ಮಾಡಲಾಗಿದೆ. ಕೇವಲ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಮಾತ್ರ ಈ ಕಿಟ್‍ಗಳನ್ನು ಬಳಕೆ ಮಾಡಲಾಗುತ್ತದೆ ಎಂದ ಸಚಿವ ಆನಂದ್‍ಸಿಂಗ್, ಜಿಂದಾಲ್‍ನಲ್ಲಿ ಸದ್ಯ 609 ಮತ್ತು ಪ್ರಥಮ, ಸೆಕೆಂಡರಿ ಸೇರಿ ಒಟ್ಟು 643 ಸೋಂಕಿತರು ಇದ್ದಾರೆ. 1274 ಪ್ರಾಥಮಿಕ, 342 ಸೆಕೆಂಡರಿ ಸಂಪರ್ಕಿತರು ಇದ್ದಾರೆ ಎಂದು ವಿವರಿಸಿದರು.
21ಕ್ಕೆ ಟ್ರೋಮಾ ಕೇರ್ ಸೆಂಟರ್ ಉದ್ಘಾಟನೆ
ಇದೇವೇಳೆ ನೆರೆಯ ಆಂಧ್ರದಿಂದ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಇನ್ನಷ್ಟು ಕಠಿಣವಾಗಿ ಕ್ರಮಕೈಗೊಂಡು ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂದು ಎಸ್‍ಪಿ ಸಿ.ಕೆ.ಬಾಬಾ ಅವರಿಗೆ ಕೋರಿದರು. ಇನ್ನು ನಗರದ ಟಿಬಿ ಸ್ಯಾನಿಟೋರಿಯಂ ಆವರಣದಲ್ಲಿರುವ ಟ್ರೋಮಾ ಕೇರ್ ಸೆಂಟರ್ ಸಿದ್ಧಗೊಂಡಿದ್ದು, ಇದೇ ಜುಲೈ 21 ರಂದು ವೈದ್ಯಕೀಯ ಸಚಿವ ಡಾ. ಸುಧಾಕರ್ ಅವರು ಉದ್ಘಾಟಿಸಲಿದ್ದಾರೆ. ಇದಕ್ಕೆ ಸಿಎಂ ಯಡಿಯೂರಪ್ಪರನ್ನೇ ಆಹ್ವಾನಿಸಬೇಕು ಎಂದುಕೊಳ್ಳಲಾಗಿದ್ದು, ಆದರೆ, ಜಿಲ್ಲಾಡಳಿತದ ಸಲಹೆ ಮೇರೆಗೆ ಡಾ. ಸುಧಾಕರ್ ಅವರನ್ನು ಆಹ್ವಾನಿಸಲಾಗಿದೆ. ಇದರಿಂದ 197 ಐಸಿಯು ಬೆಡ್‍ಗಳು ಲಭಿಸಲಿದ್ದು, ಕೋವಿಡ್ ನಿರ್ವಹಣೆಗೆ ಬೆಡ್‍ಗಳ ಕೊರತೆ ಇಲ್ಲದಂತಾಗಲಿದೆ ಎಂದವರು ವಿವರಿಸಿದರು. ಈ ವೇಳೆ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಡಿಸಿ ಎಸ್.ಎಸ್.ನಕುಲ್, ಜಿಪಂ ಸಿಇಒ ಕೆ.ನಿತೀಶ್, ಎಸ್‍ಪಿ ಸಿ.ಕೆ.ಬಾಬಾ, ಡಿಎಚ್‍ಒ ಎಚ್.ಎಲ್.ಜನಾರ್ದನ್, ಡಾ. ಎನ್.ಬಸಾರೆಡ್ಡಿ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ