ಕೊರೊನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ : ಡಾ.ಬಿ.ಆರ್.ಚಂದ್ರಿಕಾ

ತುಮಕೂರು
 
    ಪ್ರಪಂಚವನ್ನು ಬೆಚ್ಚಿ ಬೀಳಿಸಿದ್ದ ಕೊರೊನಾ ವೈರಸ್ ಪೀಡಿತ ಪ್ರಕರಣಗಳು ತುಮಕೂರಿನಲ್ಲಿ ದಾಖಲಾಗಿಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ ತಿಳಿಸಿದರು.
 
    ನಗರದ ಶ್ರೀದೇವಿ ಆಸ್ಪತ್ರೆಗೆ ಭೇಟಿ ನೀಡಿ ಕೊರೋನಾ ಸೋಂಕಿತರಿಗಾಗಿ ಮುಂಜಾಗ್ರತಾ ಕ್ರಮವಾಗಿ ತೆರೆಯಲಾದ ವಿಶೇಷ ಐಸೋಲೇಟೆಡ್ ಕೊಠಡಿ ಹಾಗೂ ಚಿಕಿತ್ಸೆ ನೀಡಲು ಮಾಡಿಕೊಂಡ ಸಿದ್ಧತೆಗಳನ್ನು ಪರಿವೀಕ್ಷಣೆ ಮಾಡಿದ ಬಳಿಕ ಮಾತನಾಡಿದರು.
   ತುಮಕೂರು ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪೀಡಿತರ ಪ್ರಕರಣ ದಾಖಲಾಗಿಲ್ಲ. ತುಮಕೂರು ಜಿಲ್ಲೆ ಸುರಕ್ಷಿತವಾಗಿದೆ. ಒಂದುವೇಳೆ ಪತ್ತೆಯಾದಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಇತರೆ ದೇಶಗಳಿಂದ ಭಾರತಕ್ಕೆ ಬರುವವರನ್ನು ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿಯೆ ತಪಾಸಣೆ ಮಾಡಲಾಗುತ್ತಿದೆ. ಒಂದು ವೇಳೆ ಯಾರಿಗಾದರೂ ವೈರಸ್ ಬಗ್ಗೆ ಸಂಶಯಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದರು. 
   ಕಳೆದ ಎರಡ್ಮೂರು ದಿನಗಳಿಂದಲೂ ಪ್ರತಿಯೊಂದು ಮಾಹಿತಿಯನ್ನು ಪತ್ರಿಕೆಗಳ ಮೂಲಕ ತಿಳಿಸಲಾಗುತ್ತಿದೆ. ವಿದೇಶಗಳಿಂದ ಭಾರತಕ್ಕೆ ಬರುವವರನ್ನು ತಪಾಸಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ತಪಾಸಣೆ ಮಾಡಿದವರಲ್ಲಿಯೂ ಯಾವುದೇ ವೈರಸ್ ಪತ್ತೆಯಾಗಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ರಾಜ್ಯದಿಂದ ಪ್ರತಿಯೊಂದು ಮಾಹಿತಿ ಡಿಎಚ್‍ಓಗಳಿಗೆ ತಿಳಿಯುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಡಿಎಚ್‍ಓ ಕಚೇರಿಯಲ್ಲಿಯೆ ಸಹಾಯವಾಣಿಯನ್ನು ತೆರೆಯಲಾಗಿದೆ ಎಂದರು.
ಮಾಸ್ಕ್ ದರ ಹೆಚ್ಚಳ :
 
     ಮಾರುಕಟ್ಟೆಯಲ್ಲಿ ಮಾಸ್ಕ್‍ಗಳ ಬೆಲೆಯನ್ನು ಸಿಕ್ಕಾಪಟ್ಟೆ ಹೆಚ್ಚಳ ಮಾಡಿದ್ದುದರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಚಂದ್ರಿಕಾ ಮಾಸ್ಕ್ ಹಾಕಿಕೊಂಡ ತಕ್ಷಣ ವೈರಸ್ ತಡೆಗಟ್ಟಬಹುದು ಎಂದು ಹೇಳಲಾಗುವುದಿಲ್ಲ. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕಾದ ಅವಶ್ಯಕತೆಯೂ ಇಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ದುಪ್ಪಟ್ಟಿನ ಬೆಲೆಗೆ ಮಾಸ್ಕ್‍ಗಳನ್ನು ಮಾರಾಟ ಮಾಡುತ್ತಿರುವ ಮಾಹಿತಿ ದೊರೆತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
    ಚಿಕ್ಕ ಮಕ್ಕಳು, ಹಿರಿಯರು, ಗೃಹಿಣಿಯರು ಹೆಚ್ಚಾಗಿ ಜಾಗೃತರಾಗಬೇಕಿದೆ. ಜೊತೆಗೆ ಕ್ಯಾನ್ಸರ್, ಮಧುಮೇಹ, ಟಿಬಿಯಂತಹ ಕಾಯಿಲೆಯಿದ್ದವರು ಸೂಕ್ತ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಜಿಲ್ಲಾಸ್ಪತ್ರೆಯಲ್ಲಿ ಇದಕ್ಕಾಗಿಯೆ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‍ನ್ನು ತೆರೆಯಲಾಗಿದೆ. ಆರೋಗ್ಯಾಧಿಕಾರಿಗಳನ್ನು ಅಥವಾ ಜಿಲ್ಲಾಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು ಒಳ್ಳೆಯದು. ಯಾವುದೇ ಕೆಲಸ ಮಾಡುವ ಮುನ್ನ ಕೈತೊಳೆದುಕೊಳ್ಳಬೇಕು. ಕೆಮ್ಮು ನೆಗಡಿ ಇದ್ದವರು ಟಿಶ್ಯು ಪೇಪರ್ ಅಥವಾ ಹ್ಯಾಂಡ್‍ಕರ್ಚಿಫ್ ಅನ್ನು ಬಳಸಬೇಕು. ಅದನ್ನು ಶುಭ್ರವಾಗಿ ಸ್ವಚ್ಛ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
    ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶ್ರೀದೇವಿ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ರಮಣ್ ಹುಲಿನಾಯ್ಕರ್ ಮಾತನಾಡಿ, ಡಿಎಚ್‍ಓ ರವರು ನೀಡಿದ ಮಾರ್ಗದರ್ಶನದ ಪ್ರಕಾರ ಆಸ್ಪತ್ರೆಯಲ್ಲಿ 25 ಬೆಡ್‍ಗಳಿರುವ ವಿಶೇಷ ವಾರ್ಡನ್ನು ತೆರೆಯಲಾಗಿದೆ. ಇದರಲ್ಲಿ 45ರವರೆಗೆ ಬೆಡ್‍ಗಳನ್ನು ಅಳವಡಿಸಬಹುದಾಗಿದೆ. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಯಾವುದೇ ಪ್ರಕರಣ ದಾಖಲಾದರೂ ಅದನ್ನು ಎದುರಿಸಲು ಸನ್ನದ್ದರಾಗಿದ್ದೇವೆ ಎಂದರು.
   ಇಂದು ನಗರದಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗಿ ಪ್ರಚಾರ ಆಗುತ್ತಿರುವುದರಿಂದ ಜನರು ಆತಂಕ ಬೀಳುತ್ತಿದ್ದಾರೆ. ಈ ಬಗ್ಗೆ ಯಾವುದೇ ಗೊಂದಲಗಳಿದ್ದರೂ ನೇರವಾಗಿ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳು ಮಾಹಿತಿ ನೀಡುತ್ತಾರೆ. ಈ ಬಗ್ಗೆ ಮಾಧ್ಯಮಗಳು ಕೂಡ ಸರಿಯಾದ ಮಾಹಿತಿ ಇಲ್ಲದೆ, ಸುದ್ದಿಗಳನ್ನು ವರದಿ ಮಾಡಬಾರದು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಡಾ.ಶಾಲಿನಿ, ಡಾ.ರೇಖಾ. ಡಾ.ಕೇಶವರಾಜ್ ಮತ್ತಿತರರು ಉಪಸ್ಥಿತರಿದ್ದರು.
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap