ಹುಳಿಯಾರು
ಟ್ರಂಪ್ ಭಾರತಕ್ಕೆ ಬಂದಾಗ ಹಾಲು ಮತ್ತು ಹಾಲಿನ ಉತ್ಪನ್ನಗಳ ಒಪ್ಪಂದ ಮಾಡಿಕೊಳ್ಳುವುದು ಬೇಡ ಎಂದು ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ಹಾಕಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು.
ತಾಲ್ಲೂಕು ಕೃಷಿ ಇಲಾಖೆ, ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಡ್ರ್ಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ 2019-20 ನೆ ಸಾಲಿನ ಕೃಷಿ ಅಭಿಯಾನ ಕಾರ್ಯಕ್ರಮದಡಿ ಭಾನುವಾರ ಹುಳಿಯಾರಿನ ಎಂಪಿಎಸ್ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಹೋಬಳಿ ಮಟ್ಟದ ಕೃಷಿ ವಸ್ತು ಪ್ರದರ್ಶನ, ರೈತರೊಂದಿಗೆ ಸಂವಾದ ಹಾಗೂ ರೈತರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಮಳೆ ಬೆಳೆಯಿಲ್ಲದೆ ಕಂಗಾಲಾಗಿದ್ದ ರಾಜ್ಯದ ರೈತರಿಗೆ ಹೈನುಗಾರಿಕೆ ವರದಾನವಾಗಿದ್ದು, ಇದರಿಂದ ಅದೆಷ್ಟೊ ಕುಟುಂಬಗಳು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಅಮೇರಿಕಾದೊಂದಿಗೆ ಹಾಲಿನ ಉತ್ಪನ್ನಗಳಿಗೆ ಒಪ್ಪಂದ ಮಾಡಿಕೊಂಡರೆ, ರಾಜ್ಯದ ಅರ್ಧದಷ್ಟು ರೈತರ ನೆಮ್ಮದಿಗೆ ಸಂಚಕಾರ ಬಂದೊದಗುತ್ತದೆ. ಹಾಗಾಗಿ ಈ ಒಪ್ಪಂದ ಬೇಡ ಎಂದು ಸ್ಪಷ್ಟವಾಗಿ ರಾಜ್ಯದಿಂದ ಒತ್ತಡ ತರಲಾಗಿದೆ ಎಂದರಲ್ಲದೆ, ಕಳೆದ 6 ತಿಂಗಳ ಹಿಂದೆಯೂ ಸಹ ಈ ಒಪ್ಪಂದದ ವಿಚಾರ ಬಂದಾಗ ಆಗಲೂ ಒತ್ತಡ ತಂದು ತಡೆಯಲಾಗಿತ್ತು ಎಂದು ಅವರು ವಿವರಿಸಿದರು.
ಸರ್ಕಾರದ ಬಹುತೇಕ ಇಲಾಖೆಗಳನ್ನು ಕೆಲವೆ ಕೆಲವು ಮಂದಿ ಗುತ್ತಿಗೆಗೆ ಪಡೆದುಕೊಂಡವರಂತೆ, ಸಹಾಯಧನ, ಕೊಡುಗೆ, ಸೌಲಭ್ಯಗಳನ್ನು ಕಬಳಿಸುತ್ತಿದ್ದಾರೆ. ಇದು ಸ್ವತಃ ತಮ್ಮ ಗಮನಕ್ಕೆ ಬಂದಿದ್ದು, ಇದಕ್ಕೆ ಮುಕ್ತಿ ಆಡಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕೊಟ್ಟು ಅವರ ಬದುಕು ಹಸನಾಗುವಂತೆ ಮಾಡುವ ಸಲುವಾಗಿ ಅಧಿಕಾರಿಗಳ ದಂಡು ಕಟ್ಟಿಕೊಂಡು ಅವರ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಮಾಹಿತಿಗಳನ್ನು ತಿಳಿಸುವ ಕಾರ್ಯ ಮಾಡುತ್ತಿದ್ದೇನೆ. ಹಾಗಾಗಿ ಅಧಿಕಾರಿಗಳು ಜಾತಿ, ಪಕ್ಷ ಬಿಟ್ಟು ಸಭೆಗೆ ಬಂದು ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
