ಬೆಂಗಳೂರು:
ಇದೇ ತಿಂಗಳ 20ನೇ ತಾರೀಕಿನ ನಂತರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ (ಐಟಿ, ಬಿಟಿ) ಶೇ. 50ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಅವಕಾಶ ಇರುತ್ತದೆ ಎಂದು ಐಟಿ, ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ಐಟಿ- ಬಿಟಿ ಸಿಬ್ಬಂದಿಗೆ ಪಾಸ್, ಸಂಪರ್ಕ ಸಾರಿಗೆ ವ್ಯವಸ್ಥೆ, ಸ್ಕ್ರೀನಿಂಗ್, ಇಂಟರ್ ನೆಟ್ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಐಟಿ-ಬಿಟಿ ಮುಖ್ಯಸ್ಥರೊಂದಿಗೆ ಶುಕ್ರವಾರ ವೀಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಾವುದೇ ಹೊಸ ಕೆಲಸದ ಆರ್ಡರ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಂಪನಿ ಬಾಗಿಲು ಹಾಕುವುದು, ಅಥವಾ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು ಸರಿ ಅಲ್ಲ. ಏಕೆಂದರೆ ಈಗ ಹೊಸ ಕೆಲಸ ಹುಡುಕಿಕೊಳ್ಳುವುದು ಕಷ್ಟವಾಗುತ್ತದೆ.
ಕಂಪನಿ ಮುಚ್ಚುವ ಬದಲು ಸಂಬಳ ಕಡಿತ ಮುಂತಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಎಲ್ಲ ಕಂಪನಿಗಳು ಇದೇ ನಿಯಮ ಪಾಲಿಸಬೇಕು,”ಎಂದು ಅವರು ಹೇಳಿದರು.
ಕಚೇರಿಗಳು ಆರಂಭವಾದ ನಂತರ ಸಿಬ್ಬಂದಿಯಲ್ಲಿ ಸೋಂಕು ಕಂಡು ಬಂದರೆ ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿದ್ದು, ಈ ಸಂಬಂಧ ಸೂಕ್ತ ಮಾರ್ಗದರ್ಶನ ನೀಡುವಂತೆ ಕಂಪನಿಗಳ ಮುಖ್ಯಸ್ಥರು ಕೋರಿದ್ದಾರೆ. ಆರೋಗ್ಯ ಇಲಾಖೆ ಜತೆ ಮಾತುಕತೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡುವ ಭರವಸೆ ನೀಡಲಾಗಿದೆ. ಕಂಪನಿಗಳು ಸಹ ಸ್ವಚ್ಛತೆ, ಸಾಮಾಜಿಕ ಅಂತರ, ಸೋಂಕಿನ ತಪಾಸಣೆಯಂಥ ಕ್ರಮಗಳನ್ನು ಪಾಲಿಸಲು ಒಪ್ಪಿಕೊಂಡಿವೆ.
ನಿರ್ಬಂಧ ಸಡಿಲಿಕೆ ಆದ ಕೂಡಲೇ ಸೋಂಕು ಹರಡುವ ಸಾಧ್ಯತೆ ಹೆಚ್ಚಬಹುದು. ಇಷ್ಟು ದಿನ ಮುಂಜಾಗ್ರತೆ ವಹಿಸಿ ಸೋಂಕು ತಡೆಗಟ್ಟುವ ಪ್ರಯತ್ನ ಮಾಡಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಕೊರೊನಾ ಜತೆ ಬದುಕುವುದನ್ನು ಕಲಿಯಬೇಕಾಗುತ್ತದೆ. ಜನರಲ್ಲಿ ಸಹ ಈ ಬಗ್ಗೆ ಸಾಕಷ್ಟು ಅರಿವು ಮೂಡಿದೆ. ಜತೆಗೆ ತಪಾಸಣೆ ಹೆಚ್ಚಿಸಿ ಸೋಂಕು ಪತ್ತೆ ಆದರೆ, ಅಂಥವರನ್ನು ಚಿಕಿತ್ಸೆ ನೀಡುವ ಮೂಲಕ ಇನ್ನೂ ಪರಿಸ್ಥಿತಿ ನಿರ್ವಹಣೆ ಮಾಡಲಾಗುವುದು,”ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ