ಲಾಕ್ ಡೌನ್ ಬಗ್ಗೆ ಸಾರ್ವಜನಿಕರಲ್ಲಿ ಭಯವಿಲ್ಲ : ಜೆ ಸಿ ಮಾದುಸ್ವಾಮಿ

ಗುಬ್ಬಿ

    ಪ್ರತಿ ನಿತ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವೇಳೆ ತಾಲ್ಲೂಕಿನ ಗಡಿಭಾಗದಿಂದ ಖುದ್ದು ಗಮನಿಸಿದ್ದೇನೆ ಲಾಕ್‍ಡೌನ್ ಬಗ್ಗೆ ಸಾರ್ವಜನಿಕರಲ್ಲಿ ಭಯವಿಲ್ಲವಾಗಿದೆ. ಸಾಮಾಜಿಕ ಅಂತರ ಹಾಗೂ ವೈರಸ್ ಭೀತಿಯೂ ಇಲ್ಲವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಜಾಗೃತಿ ಮೂಡಿಸಿ ಕ್ರಮವಹಿಸಬೇಕು.

    ಬೈಕ್ ಸೇರಿದಂತೆ ಎಲ್ಲಾ ವಾಹನಗಳು ಆರಾಮಾಗಿ ಓಡಾಡುತ್ತಿರುವುದು ಕಂಡರೆ ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಕೂಡಲೆ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ತಡೆಗಟ್ಟುವುದರ ಜೊತೆಗೆ ತಪಾಸಣೆ ನಡೆಸಿ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸದರು.

    ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ತುರ್ತುಸಭೆಯಲ್ಲಿ ಮಾತನಾಡಿದ ಅವರು ಭಾರತ ಲಾಕ್‍ಡೌನ್ ಆದೇಶ ಜಾರಿಯಲ್ಲಿದ್ದರೂ ಪೊಲೀಸ್ ಇಲಾಖೆ ಅದನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬುದು ಕಂಡುಬರುತ್ತಿದೆ ಗ್ರಾಮೀಣ ಭಾಗದಲ್ಲಿ ಎಲ್ಲಾ ಅಂಗಡಿ ಮುಂಗಟ್ಟು ತೆರೆದು ಎಂದಿನಂತೆ ಜನಸಂದಣಿ ಕಾಣುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮವಹಿಸಬೇಕು. ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ನಿಟ್ಟೂರಿನಲ್ಲಿ ಟೀಶಾಪ್‍ಗಳು ತೆಗೆದಿವೆ. ಮಾರ್ಗ ಮಧ್ಯೆ ಕೊಂಡ್ಲಿ, ದೊಡ್ಡಗುಣಿ, ಕಳ್ಳಿಪಾಳ್ಯ ಹೀಗೆ ಹೆದ್ದಾರಿ ಬದಿಯ ಗ್ರಾಮಗಳಲ್ಲೇ ಜಾಗೃತಿ ಕಾಣುತ್ತಿಲ್ಲ. ಸಾರ್ವಜನಿಕರಲ್ಲಿ ಪೊಲೀಸರ ಭಯವಂತೂ ಕಾಣುತ್ತಿಲ್ಲ. ಅನಿವಾರ್ಯ ಅವಶ್ಯಕತೆ ಇದ್ದು ಹೊರಬಂದವರ ಬಗ್ಗೆ ಪರಿಶೀಲಿಸಿ ಕ್ರಮವಹಿಸಬೇಕು. ಸುಮ್ಮನೇ ಊರು ಸುತ್ತಲೂ ಬರುವವರ ವಿರುದ್ದ ಕಾನೂನು ಕ್ರಮ ಜರುಗಿಸುವ ಜತೆಗೆ ಮಾಮೂಲಿ ವಸೂಲಿ ದೂರುಗಳಿವೆ ಎಂದ ಅವರು ರೈತರು ಕೃಷಿ ಪರಿಕರ, ಪಂಪ್‍ಮೋಟಾರ್ ಸಂಬಂಧಿಸಿದಂತೆ ವಿದ್ಯುತ್ ಉಪಕರಣ ಖರೀದಿಗೆ ಅವಕಾಶ ಮಾಡಿಕೊಡಬೇಕು. ಅಲ್ಲಿಯೂ ಸಾಮಾಜಿಕ ಅಂತರ ಕಾಪಾಡಬೇಕು. ಕೃಷಿ ಪರಿಕರ ಮಾರುವ ಅಂಗಡಿಗಳು ತೆರೆದು ರೈತರಿಗೆ ವಸ್ತುಗಳು ನೀಡಿದ ಬಳಿಕ ಅಂಗಡಿ ಮುಚ್ಚುವ ಕೆಲಸವಾಗಬೇಕು ಎಂದರು.

    ಅಕ್ರಮ ಜೂಜಾಟ, ಮದ್ಯ ಮಾರಾಟದ ವಿರುದ್ದ ಸಾಕಷ್ಟು ದೂರುಗಳಿವೆ. ಈ ಬಗ್ಗೆ ಪೊಲೀಸ್ ಮತ್ತು ಅಬಕಾರಿ ಇಲಾಖೆ ಕ್ರಮವಹಿಸಲು ಮುಂದಾಗಬೇಕು. ಪೊಲೀಸರಿಗೆ ಜೂಜು ಅಡ್ಡೆಗಳು ತಿಳಿದಿವೆ. ಆದರೂ ರೈಡ್ ನಡೆದಿಲ್ಲ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಸಿ ಮತ್ತು ತರಕಾರಿ ಮಾರಾಟಕ್ಕೆ ಅನುವು ಮಾಡಲು ಸಮಯ ನಿಗದಿ ಮಾಡಿದಂತೆ ರೈತರಿಂದ ತರಕಾರಿ ಮತ್ತು ಹಣ್ಣು ಖರೀದಿಸಿ ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು ಮಾಡಬೇಕು.

     ದಿನಸಿ ಮತ್ತು ಕೋಳಿ, ಮಾಂಸ ಮಾರಾಟಗಾರರು ಆದಷ್ಟು ಹೋಂ ಡಿಲೆವರಿ ಮಾಡಲು ಅನುವು ಮಾಡಬೇಕು. ಅನಗತ್ಯ ಬೈಕ್‍ಗಳ ಸಂಚಾರಕ್ಕೆ ಕಡಿವಾಣ ಹಾಕಲು ಬಂಕ್‍ಗಳಲ್ಲಿ ದ್ವಿಚಕ್ರವಾಹನಕ್ಕೆ ಪೆಟ್ರೋಲ್ ಸ್ಥಗಿತ ಮಾಡಲು ಕ್ರಮವಹಿಸ ಲಾಗುವುದು . ತಾಲ್ಲೂಕಿನಲ್ಲಿ ಯಾವುದೇ ಹಬ್ಬ ಜಾತ್ರೆ ನಡೆಯದಂತೆ ತಾಲ್ಲೂಕು ಆಡಳಿತ ನಿಗಾವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

     ತೋಟಗಾರಿಕೆ ಇಲಾಖೆ ರೈತರ ತರಕಾರಿ ಹಣ್ಣು ಖರೀದಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ವ್ಯಾಪಾರಸ್ಥರ ಸಂಪರ್ಕ ಏರ್ಪಡಿಸುವ ಕೆಲಸ ಮಾಡಲು ಸೂಚಿಸಿದ ಸಚಿವರು ನ್ಯಾಯಬೆಲೆ ಅಂಗಡಿಯಲ್ಲಿ ಎರಡು ತಿಂಗಳ ಉಚಿತ ಅಕ್ಕಿ ಗೋಧಿ ವಿತರಣೆಯಲ್ಲಿ ವ್ಯತ್ಯಾಸವಾಗದಂತೆ ಕ್ರಮವಹಿಸಬೇಕು. ಕೆಲವಡೆ ಹಣ ವಸೂಲಿ ಮತ್ತು ಸೋಪು, ಉಪ್ಪು ಇನ್ನಿತರ ವಸ್ತುಗಳ ಖರೀದಿಗೆ ಬಲವಂತ ಮಾಡಿರುವ ದೂರುಗಳಿವೆ. ಈ ಬಗ್ಗೆ ಆಹಾರ ನಿರೀಕ್ಷಕರು ನಿಗಾವಹಿಸಬೇಕು. ಈ ತಿಂಗಳ 10 ರೊಳಗೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಹಂಚಿಕೆ ಮಾಡಬೇಕು.

    ವಿಕೇಂದ್ರೀಕರಣ ಮಾಡುವ ಮೂಲಕ ಗ್ರಾಮಗಳಲ್ಲಿ ಆಹಾರ ಪದಾರ್ಥ ಹಂಚಿಕೆ ಮಾಡಬೇಕು. ಸುಮ್ಮನೇ ಗುಂಪು ಕಟ್ಟಿಕೊಂಡು ಸಮಯ ಕಳೆದರೆ ಕ್ರಮವಹಿಸಲಾಗುವುದು ಎಂದರು.ತಾಲ್ಲೂಕಿನಲ್ಲಿ 350 ಕ್ಕೂ ಅಧಿಕ ಜ್ವರಪೀಡಿತರ ಸಂಖ್ಯೆ ಈವರೆವಿಗೆ ಇತ್ತು. ಎಲ್ಲಿಯೂ ಕೋವಿಡ್ 19 ವೈರಸ್ ಬಗ್ಗೆ ಶಂಕಿತರ ಸುಳಿವು ಸಿಕ್ಕಿಲ್ಲ. ಆದರೂ ಶಿರಾ ತಾಲ್ಲೂಕಿನ ಗಡಿಭಾಗವಾದ ಕಾರಣ ಅವಶ್ಯ ಕ್ರಮವಹಿಸಬೇಕಿದೆ.

     ಹೊರರಾಜ್ಯಗಳಿಂದ ಬಂದಂತಹವರ ತಪಾಸಣೆ ನಡೆದಿದೆ. ಗೃಹ ಕ್ವಾರಂಟೈನ್‍ನಲ್ಲಿರುವವರ ಬಗ್ಗೆ ನಿಗಾವಹಿಸಬೇಕು. ಅವರ ಸಂಪರ್ಕದಲ್ಲಿರುವವರನ್ನೂ ಆರೋಗ್ಯ ತಪಾಸಣೆ ಮಾಡಬೇಕು. ಈ ಜತೆಗೆ ಎತ್ತಿನಹೊಳೆ ಯೋಜನೆಯ ಕಾರ್ಮಿಕರು ಸೇರಿದಂತೆ ಇನ್ನಿತರ ಕಾರ್ಖಾನೆಯ ಕಾರ್ಮಿಕರ ವಸತಿ ಆಹಾರ ಪೊರೈಕೆ ಬಗ್ಗೆ ಕ್ರಮಹವಿಸಬೇಕು. ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಬೇಕು. ಆಹಾರ ಇಲಾಖೆ ಬಿಪಿಎಲ್ ಕಾರ್ಡ್ ಇಲ್ಲವದರನ್ನು ಗುರುತಿಸಿ ಪಡಿತರ ವಿತರಣೆ ಮಾಡಬೇಕು. ಈ ಬಗ್ಗೆ ತಾಲ್ಲೂಕು ಆಡಳಿತಕ್ಕೆ ಸೂಚಿಸಲಾಗಿದೆ ಎಂದರು.

     ಸಭೆಯಲ್ಲಿ ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಿಕಾ, ತಹಸೀಲ್ದಾರ್ ಡಾ:ಪ್ರದೀಪ್‍ ಕುಮಾರ್ ಹಿರೇಮಠ್, ತಾಪಂ ಇಒ ನರಸಿಂಹಯ್ಯ, ತಾಲ್ಲೂಕು ವೈದ್ಯಾಧಿಕಾರಿ ಡಾ:ಬಿಂದೂಮಾಧವ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link