ತುಮಕೂರು:
ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂಬಂಧ ರಾಜ್ಯ ಸರ್ಕಾರ ಖರೀದಿಸಿರುವ ವೈದ್ಯಕೀಯ ಸಲಕರಣೆಗಳಲ್ಲಿ ಭ್ರ ಚಾರವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪ ನಿರಾಧಾರ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.ವಿರೋಧ ಪಕ್ಷಗಳ ನಾಯಕರು ಆರೋಪ ಮಾಡಿರುವ ರೀತಿ ನಾವು 2500 ಕೋಟಿ ರೂ. ವೆಚ್ಚದಲ್ಲಿ ಯಾವುದೇ ಸಲಕರಣೆಗಳನ್ನು ಖರೀದಿಸಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಪದೇ ಪದೇ ಹೇಳುತ್ತಿದ್ದರೂ ಸಹ ವಿರೋಧ ಪಕ್ಷಗಳು ಯಾವುದೇ ದಾಖಲೆ ಇಲ್ಲದೆ ವಿನಾ ಕಾರಣ ಆರೋಪ ಮಾಡುತ್ತಿರುವುದರಲ್ಲಿ ಹುರುಳಿಲ್ಲ ಎಂದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ತಡೆಗಾಗಿ ವೈದ್ಯಕೀಯ ಸಲಕರಣೆಗಳನ್ನು 500-600 ಕೋಟಿ ರೂ. ವೆಚ್ಚದಲ್ಲಿ ಮಾತ್ರ ಖರೀದಿಸಲಾಗಿದೆ ಎಂದು ಹೇಳುತ್ತಿದ್ದರೂ ಸಹ ವಿರೋಧ ಪಕ್ಷದವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಆರೋಪ ಮಾಡುತ್ತಲೇ ಇದ್ದಾರೆ ಇದು ಅರ್ಥವಿಲ್ಲದ್ದು ಎಂದರು.
ರಾಜಧಾನಿ ಬೆಂಗಳೂರು ನಗರದಲ್ಲಿ ಕಳೆದ 10-12 ದಿನಗಳಿಂದ ಕೊರೊನಾ ಸಮಸ್ಯೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಕೊರೊನಾಗೆ ತಡೆಗೋಡೆ ಹಾಕಲು ಮುಖ್ಯಮಂತ್ರಿಗಳು 8 ವಲಯಗಳನ್ನಾಗಿ ವಿಂಗಡಿಸಿದ್ದು. ಅದರಲ್ಲಿ 53 ವಾರ್ಡ್‍ಗಳ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಈ ಮೂಲಕ ಹಂತ ಹಂತವಾಗಿ ಕೊರೊನಾ ಮಹಾಮಾರಿಗೆ ತಡೆಗೋಡೆ ಕಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಬೆಂಗಳೂರು ನಗರದಲ್ಲಿ 1.35 ಕೋಟಿ ಜನ ಸಂಖ್ಯೆಯಿದೆ. ಈ ಪೈಕಿ ಪ್ರತಿನಿತ್ಯ ಬಂದು ಹೋಗುವವರು 25 ರಿಂದ 26 ಲಕ್ಷ ಮಂದಿ ಇದ್ದಾರೆ. ಯಾರೇ ಆಗಲಿ ಪ್ರತಿಯೊಬ್ಬರ ಪ್ರಾಣವೂ ಬಹುಮುಖ್ಯ. ಅವರ ಹಕ್ಕನ್ನು ಕಸಿಯಲು ಸಾಧ್ಯವಿಲ್ಲ. ಹಾಗಾಗಿ ಎಲ್ಲರ ಆರೋಗ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸೂರು ಕಲ್ಪಿಸಲು 20 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 5.40 ಲಕ್ಷ ಮನೆಗಳ ನಿರ್ಮಾಣ ವಿವಿಧ ಹಂತದಲ್ಲಿದ್ದು, ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ 400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಈಗಾಗಲೇ ವಸತಿ ಯೋಜನೆಯ ಫಲಾನುಭವಿಗಳ ಖಾತೆಗೆ 1200 ಕೋಟಿ ರೂ. ಹಣ ವರ್ಗಾಯಿಸಲಾಗಿದೆ. ಇದರಿಂದ ನುಂಗಣ್ಣರಿಗೆ ಅಡೆತಡೆಯಾಗಿರುವುದರಿಂದ ವಿನಾ ಕಾರಣ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.ತುಮಕೂರು ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಖಾಲಿ ಇಲ್ಲದಿರುವ ಜಾಗಕ್ಕೆ ಆಸೆಪಡುವವನು ನಾನಲ್ಲ ಎಂದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಜಿ.ಬಿ. ಜ್ಯೋತಿಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
