ಚಿತ್ರದುರ್ಗ:
ನಗರವನ್ನು ಸ್ವಚ್ಚ ಮಾಡುವ ಕೆಲಸದಲ್ಲಿ ತೊಡಗಿರುವ ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ಆಳುವ ಸರ್ಕಾರಗಳು ವಿಶೇಷವಾದ ಕಾಳಜಿ ವಹಿಸಿ ಕಾಲ ಕಾಲಕ್ಕೆ ತಕ್ಕಂತೆ ಸವಲತ್ತುಗಳನ್ನು ನೀಡಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಆಗ್ರಹಿಸಿದರು.
ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು . ಜಗತ್ತಿನಾದ್ಯಂತ ಪೌರ ಕಾರ್ಮಿಕರು ಮಾಡುವ ಕೆಲಸಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಶೌಚದ ಗುಂಡಿಗಳಲ್ಲಿ ಇಳಿದು ಪೌರ ಕಾರ್ಮಿಕರು ಈಗಲೂ ಸ್ವಚ್ಚಗೊಳಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಪೌರ ಕಾರ್ಮಿಕರ ಶ್ರಮ ಹಾಗೂ ಕಷ್ಟದ ಕೆಲಸ ಇತ್ತೀಚೆಗೆ ಸರ್ಕಾರದ ಗಮನಕ್ಕೆ ಬಂದಿದೆ. ಕೆಲಸ ಕಠಿಣವಾದುದು. ಆದರೆ ಸಂಬಳ ಕಡಿಮೆ. ಕೆಲವು ಪೌರ ಕಾರ್ಮಿಕರು ಐದಾರು ತಿಂಗಳಿನಿಂದಲೂ ಸಂಬಳವಿಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರ ಕೆಲಸಕ್ಕೆ ಕೇವಲ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ಮಾತ್ರ ಮೀಸಲು ಎನ್ನುವ ತಪ್ಪು ಭಾವನೆಯಿಂದ ಪೌರ ಕಾರ್ಮಿಕರನ್ನು ಕೀಳಾಗಿ ನೋಡುವುದು ಸರಿಯಲ್ಲ. ಯಾರು ಬೇಕಾದರೂ ಮಾಡಬಹುದು. ತಪ್ಪೇನಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿರುವುದರಿಂದ ಪೌರ ಕಾರ್ಮಿಕರ ಕೆಲಸಕ್ಕೂ ಹೆಚ್ಚಿನ ಬೇಡಿಕೆ ಬಂದಿದೆ. 1974-75 ರಲ್ಲಿ ಅಂದಿನ ಮುಖ್ಯಮಂತ್ರಿ ಡಿ.ದೇವರಾಜಅರಸ್ ಹಾಗೂ ಕ್ಯಾಬಿನೆಟ್ ಮಂತ್ರಿಯಾಗಿದ್ದ ಬಸವಲಿಂಗಪ್ಪನವರು ಮಲ ಹೊರುವ ಪದ್ದತಿಯನ್ನು ದಿಟ್ಟತನದಿಂದ ರದ್ದುಪಡಿಸಿದರು.
ಅದಕ್ಕಾಗಿ ಇಂದಿಗೂ ಆ ಇಬ್ಬರು ಮಹನೀಯರುಗಳನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.ಮಲ ಹೊರುವವರು ಮತ್ತು ಹೊರೆಸುವವರು ಇಬ್ಬರನ್ನು ಜೈಲಿಗೆ ಕಳಿಸುವ ಕಠಿಣವಾದ ಕಾನೂನಿದೆ. ಆದರೆ ಎಲ್ಲಯೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಪೌರ ಕಾರ್ಮಿಕರಾಗಿ ಜೀವಮಾನವಿಡಿ ಕೆಲಸ ಮಾಡುವವರು ನಿವೃತ್ತಿಯ ವೇಳೆಗಾಗಲೆ ಯಾವ್ಯಾವ ಕಾಯಿಲೆಗೆ ತುತ್ತಾಗುತ್ತಾರೋ ತಿಳಿಯುವುದಿಲ್ಲ. ಅದಕ್ಕಾಗಿ ನಿಮ್ಮ ನಿಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಯಾವುದೇ ಕಾರಣಕ್ಕೂ ನೀವುಗಳು ಮಾಡುವ ಕೆಲಸಕ್ಕೆ ಮಾತ್ರ ಕರೆತರಬೇಡಿ ಎಂದು ಪೌರ ಕಾರ್ಮಿಕರಿಗೆ ಕರೆ ನೀಡಿದರು.
ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಮೆದೇಹಳ್ಳಿ ಸಮೀಪ ಹದಿನೈದು ಎಕರೆ ಜಮೀನಿದೆ. ಜಿಪ್ಲಸ್ ಟು.1800 ಮನೆಗಳನ್ನು ನಿರ್ಮಿಸಬಹುದು. ಹದಿಮೂರರಿಂದ ಹದಿನಾಲ್ಕು ಸಾವಿರ ಅರ್ಜಿಗಳು ನಗರಸಭೆಗೆ ಬಂದಿದೆ. ಅವುಗಳನ್ನೆಲ್ಲಾ ಪರಿಶೀಲಿಸಿರುವುದರಿಂದ ಅಂತಿಮವಾಗಿ ಏಳೆಂಟು ಸಾವಿರ ಮಂದಿಗೆ ಮನೆಗಳನ್ನು ನೀಡಲಾಗುವುದು. ಲಾಟರಿ ಮೂಲಕ ಮನೆಗಳನ್ನು ಕೊಡಬೇಕಾಗುತ್ತದೆ. ಆದರೆ ಪೌರ ಕಾರ್ಮಿಕರಿಗೆ ವಿಶೇಷ ಆದ್ಯತೆಯಡಿ ನೇರವಾಗಿ ಮನೆಗಳನ್ನು ನೀಡುವುದಾಗಿ ಶಾಸಕರು ಭರವಸೆ ನೀಡಿದರು.
ಮಕ್ಕಳ ಶಿಕ್ಷಣಕ್ಕೆ ಸರ್ಕಾರದಿಂದ ಸಾಕಷ್ಟು ಅನುಕೂಲಗಳಿವೆ. ಉನ್ನತ ಶಿಕ್ಷಣಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಯಾವುದೇ ಜಾಮೀನು ಇಲ್ಲದೆ ಸಾಲ ನೀಡಬೇಕೆಂದು ಕೇಂದ್ರ ಸರ್ಕಾರ ಆರ್.ಬಿ.ಐ.ಗೆ ಸೂಚಿಸಿದೆ.ಉನ್ನತ ಶಿಕ್ಷಣಕ್ಕಾಗಿ ಹೊರದೇಶಕ್ಕೆ ಹೋಗಲು ಐವತ್ತು ಲಕ್ಷ ರೂ.ಗಳವರೆಗೆ ನೆರವು ಸಿಗಲಿದೆ ಎಂದು ಪೌರ ಕಾರ್ಮಿಕರಿಗೆ ತಿಳಿಸಿದರು.
ನಗರಸಭೆ ಪೌರಾಯುಕ್ತ ಚಂದ್ರಪ್ಪನವರು ಪ್ರಾಸ್ತಾವಿಕವಾಗಿ ಮಾತನಾಡಿ ಸಿಂದುಬಯಲಿನ ನಾಗರೀಕತೆಯಿಂದಲೂ ಪೌರಸೇವೆ ನಿರಂತರವಾಗಿ ನಡೆದುಕೊಂಡು ಬಂದಿದೆ. ಪೌರ ಕಾರ್ಮಿಕರ ಸೇವೆ ಕೀಳೆಂದು ಯಾರು ತಪ್ಪು ತಿಳಿದುಕೊಳ್ಳಬಾರದು. ಒಂದು ದಿನ ಪೌರ ಕಾರ್ಮಿಕರು ಕೆಲಸ ಮಾಡದೆ ಮುಷ್ಕರ ಮಾಡಿದರೆ ನಗರದಲ್ಲಿ ಸ್ವಚ್ಚತೆಯೇ ಇರುವುದಿಲ್ಲ. ಇದನ್ನು ಮನಗಂಡು ಸರ್ಕಾರ ಕಾಲ ಕಾಲಕ್ಕೆ ವೇತನ, ಇನ್ನಿತರೆ ಸೌಲಭ್ಯಗಳನ್ನು ನೀಡಿ ದಿನಕ್ಕೆ ಎಂಟು ಗಂಟೆಗಳ ಕೆಲಸವನ್ನು ನಿಗಧಿಪಡಿಸಿದೆ. ಪೌರ ಕಾರ್ಮಿಕರು ಗೌರವದಿಂದ ಬದುಕು ನಡೆಸುವಂತಾಗಲಿ ಎಂದು ಬ್ಯಾಂಕ್ ಖಾತೆಗೆ ಸಂಬಳವನ್ನು ಜಮಾ ಮಾಡಲಾಗುವುದು ಎಂದು ಹೇಳಿದರು.
ಪೌರ ಕಾರ್ಮಿಕರ ಜಿಲ್ಲಾಧ್ಯಕ್ಷ ಡಿ.ದುರುಗೇಶ್, ಸ್ಲಂ ಜನಾಂದೋಲನ ತಾಲೂಕು ಅಧ್ಯಕ್ಷ ರಾಜಣ್ಣ, ಇಂಜಿನಿಯರ್ ರವಿಕುಮಾರ್, ರಾಮಚಂದ್ರಪ್ಪ, ಪೌರ ಕಾರ್ಮಿಕರಾದ ಮಹಂತೇಶ್, ಪಾರ್ವತಮ್ಮ, ತಿಮ್ಮಕ್ಕ, ಮೈಲಾರಪ್ಪ ವೇದಿಕೆಯಲ್ಲಿದ್ದರು. ಪೌರ ಕಾರ್ಮಿಕರಿಗೆ ವಾಟರ್ ಫಿಲ್ಟರ್, ಮಂಚ, ವಿಶೇಷ ವೇತನದ ಚೆಕ್‍ಗಳನ್ನು ವಿತರಿಸಲಾಯಿತು.ರೇಣುಕ ಮತ್ತು ತಂಡದವರು ಪ್ರಾರ್ಥಿಸಿದರು. ಕಂದಾಯ ನಿರೀಕ್ಷಕ ವಸೀಂ ನಿರೂಪಿಸಿದರು. ಸಮುದಾಯ ಸಂಘಟಕಿ ಮಂಜುಳಮ್ಮ, ಹೆಲ್ತ್ ಇನ್ಸ್‍ಪೆಕ್ಟರ್‍ಗಳಾದ ಸರಳ, ಕಾಂತರಾಜ್ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ