ಕೋಟೆನಾಡಿನಲ್ಲಿ ಮತಹಕ್ಕು ಚಲಾವಣೆಗೆ ಉತ್ಸಾಹ ಹಲವು ವಿಶೇಷತೆಗೆ ಸಾಕ್ಷಿಯಾದ ಚುನಾವಣೆ

ಚಿತ್ರದುರ್ಗ;

     ಚಿತ್ರದುರ್ಗ ಲೋಕಸಭೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಜನ ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಕೆಲವು ಮತಗಟ್ಟೆಗಳಲ್ಲಿ ಮತಯಂತ್ರಗಳ ದೋಷದಂತಹ ಪ್ರಕರಣಗಳನ್ನು ಹೊರೆತು ಪಡಿಸಿದರೆ ಎಲ್ಲಡೆಯೂ ಶಾಂತಿಯುತ ಮತದಾನವಾಗಿದೆ. ಕ್ಷೇತ್ರದಲ್ಲಿ ಎಲ್ಲಿಯೂ ಅಹಿತಕರ ಘಟನೆಗಳು ಜರುಗಿದ ಬಗ್ಗೆ ವರದಿಯಾಗಿಲ್ಲ.

     ಪ್ರಥಮ ಬಾರಿಗೆ ಮತಹಕ್ಕು ಚಲಾಯಿಸಿದ ಯುವಕರು, ಯುವತಿಯರು ಮತಗಟ್ಟೆಯಿಂದ ಹೊರಬಂದು ಸ್ನೇಹಿತರೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು. ಬಹುತೇಕ ಕಾಲೇಜು ವಿದ್ಯಾರ್ಥಿಗಳು ಸರತಿಯ ಸಾಲಿನಲ್ಲಿ ಮೊದಲ ಮತದಾನದ ಹಕ್ಕು ಚಲಾಯಿಸಿದ್ದಾರೆ. ಇನ್ನೂ ಅಂಗವಿಕಲರು ಮತ್ತು ವೃದ್ದರೂ ಸಹ ತಮ್ಮ ಮತಹಕ್ಕು ಚಲಾವಣೆ ಮಾಡಿದರು.

    ಬಿಸಿಲಿನ ಪ್ರಖರತೆ ಹೆಚ್ಚಿರುವ ಮೊಳಕಾಲ್ಮೂರು, ಪಾವಗಡದಲ್ಲಿಯೂ ಮತದಾನ ಬಿರುಸಿನಿಂದ ನಡೆದಿದೆ. ಮಹಿಳೆಯರು, ಯುವಕರು ಉರಿವ ಬಿಸಿಲನ್ನೂ ಲೆಕ್ಕಿಸದೆ ಮತಗಟ್ಟೆಯ ಬಳಿ ಸರತಿಯಲ್ಲಿ ನಿಂತು ತಮ್ಮ ಸಂವಿಧಾನ ಬದ್ದವಾದ ಮತಹಕ್ಕನ್ನು ಚಲಾವಣೆ ಮಾಡುವುದರ ಮೂಲಕ ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಮುದ್ರೆ ಒತ್ತಿದ್ದಾರೆ.

    ಒಂದೆರಡು ಕಂಡೆ ಮತಯಂತ್ರಗಳ ಸಣ್ಣ ಪುಟ್ಟ ಲೋಪಗಳನ್ನು ಹೊರೆತು ಪಡಿಸಿದರೆ ಎಲ್ಲಿಯೂ ಮತದಾನಕ್ಕೆ ಅಡ್ಡಿಯಾಗುವಂತಹ ಬೆಳವಣಿಗೆಗಳು ಘಟಿಸಿರುವ ಬಗ್ಗೆ ವರದಿಯಾಗಿಲ್ಲ. ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಭದ್ರೆತೆ ಮಾಡಿದ್ದರಿಂದ ಅಹಿತಕರ ಘಟನೆಗಳು ನಡೆದಿಲ್ಲ. ಎಲ್ಲಾ ಆರು ಕ್ಷೇತ್ರಗಳಲ್ಲಿಯೂ ಶಾಂತಿಯುತ ಮತದಾನವಾಗಿದೆ.

     ಚಿತ್ರದುರ್ಗ ನಗರದಲ್ಲಿ ಬೆಳಿಗ್ಗೆ ಮತದಾನ ಮಂದಗತಿಯಲ್ಲಿ ಸಾಗಿತು. 9 ಗಂಟೆಯ ಬಳಿಕ ಕೆಲವು ಮತಗಟ್ಟೆಗಳಲ್ಲಿ ಮತದಾನ ಬಿರುಸುಗೊಂಡಿತು. ಜೋಗಿಮಟ್ಟಿ ರಸ್ತೆ, ಪ್ರಶಾಂತನಗರ, ಕೆಳಗೋಟೆ, ಜೆ.ಸಿ.ಆರ್ ಬಡಾವಣೆ, ಐಯುಡಿಪಿ ಲೇಔಟ್, ಬುರುಜನಹಟ್ಟಿ ಇನ್ನಿತರೆ ಕಡೆ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.

ವಿಶೇಷತೆಗಳಿಗೆ ಸಾಕ್ಷಿ

     ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರದಂದು ಜರುಗಿದ ಶಾಂತಿಯುತ ಮತದಾನ ಹಲವು ವಿಶೇಷಗಳಿಗೆ ಸಾಕ್ಷಿಯಾಯಿತು.

       ಜಿಲ್ಲೆಯಲ್ಲಿ ಈ ಬಾರಿ ಪ್ರತಿ ಕ್ಷೇತ್ರಕ್ಕೆ ತಲಾ 02 ರಂತೆ ಮಹಿಳಾ ಸಿಬ್ಬಂದಿಗಳೇ ಇದ್ದ ಒಟ್ಟು 12 ಸಖಿ ಮತಗಟ್ಟೆಗಳ ಸ್ಥಾಪನೆ, ವಿಶೇಷಚೇತನ ಅಧಿಕಾರಿ, ಸಿಬ್ಬಂದಿಗಳನ್ನೊಳಗೊಂಡ ವಿಶೇಷ ಮತಗಟ್ಟೆ ಸ್ಥಾಪನೆ, ವಿಶೇಷ ಚೇತನರಿಗೆ ವ್ಹೀಲ್ ಚೇರ್, 18 ಕ್ಕಿಂತ ಕಡಿಮೆ ವಯಸ್ಸಿನ ಸ್ಕೌಟ್-ಗೈಡ್ ವಿದ್ಯಾರ್ಥಿಗಳನ್ನು ವಿಕಲಚೇತನರು ಹಾಗೂ ಹಿರಿಯರಿಗೆ ನೆರವಾಗುವ ಸಲುವಾಗಿ ಸ್ವಯಂಸೇವಕರನ್ನಾಗಿ ನೇಮಕಗೊಳಿಸಿದ್ದು, ವಿಕಲಚೇತನರು, ವಯೋವೃದ್ಧರು, ಬಾಣಂತಿಯರಿಗೆ ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸುವಂತಾಗಲು ಉಚಿತ ಆಟೋ, ವಾಹನದ ವ್ಯವಸ್ಥೆಗೊಳಿಸಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಂಡುಬಂದ ವಿಶೇಷಗಳು.

     ಇದರ ಜೊತೆಗೆ, ಮತವನ್ನು ಯಾರಿಗೆ ಹಾಕಲಾಗಿದೆ ಎಂಬುದನ್ನು ಮತದಾರರು ಖಾತ್ರಿ ಪಡಿಸಿಕೊಳ್ಳುವ ಸಲುವಾಗಿ ಚುನಾವಣಾ ಆಯೋಗ ಪರಿಚಯಿಸಿರುವ ವಿ.ವಿ. ಪ್ಯಾಟ್ ಯಂತ್ರವನ್ನು ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಬಳಕೆಯಾಗಿದ್ದು ವಿಶೇಷ.
ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಏ.18 ರಂದು ಬೆಳಗಿನ 9:30 ರವರೆಗೆ ನೀರಸ ಮತದಾನ ಪ್ರಕ್ರಿಯೆ ಕಂಡು ಬಂದಿತು.

       ಬಿಸಿಲಿನ ತಾಪದ ನಡುವೆಯೂ ಬೆ. 11 ರಿಂದ 1 ಗಂಟೆಯ ವರೆಗೆ ತುರುಸಿನ ಮತದಾನ ಪ್ರಕ್ರಿಯೆ ಕಾಣಲಾಯಿತು. ಪುರುಷ- ಮಹಿಳಾ ಮತದಾರರು ಪ್ರತ್ಯೇಕ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವುದು, ಹಾಯ್ಕಲ್ ಗ್ರಾಮದ ವಯೋವೃದ್ದರಾದ ಗಂಗಮ್ಮ (86), ಸೂರಮ್ಮ(85) ಹುರುಪಿನಿಂದ ಮತ ಚಲಾಯಿಸಿದ್ದು, ಗಮನ ಸೆಳೆಯಿತು.

      ಮನಮೈನಹಟ್ಟಿಯಲ್ಲಿ ಪ್ರಥಮ ಬಾರಿಗೆ ಮತ ಚಲಾಯಿಸಿದ ಯುವತಿಯರು ಸರತಿ ಸಾಲಿನಲ್ಲಿ ಹುರುಪಿನಿಂದ ನಿಂತು ಗಮನ ಸೆಳೆದರು. ನಲಗೇತನಹಟ್ಟಿ ಗ್ರಾಮದಲ್ಲಿ ಮತದಾನ ಮಾಡಿದ ವಯೋವೃದ್ದರು ಹಂಪಿಯಲ್ಲಿ ಜರುಗಲಿರುವ ಅಂಬು ಕಾರ್ಯಕ್ರಮಕ್ಕೆ ತೆರಳಬೇಕಿದ್ದರೂ, ಮತ ಚಲಾಯಿಸುವುದನ್ನು ಮಾತ್ರ ಮರೆಯದೆ, ತಮ್ಮ ಹಕ್ಕು ಚಲಾಯಿಸಿದರು.

       ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿಯ ಶುಭಾ ಹಾಗೂ ಶಾರದ ಅವರು ಇದೇ ಮೊದಲ ಬಾರಿಗೆ ಮತ ಚಲಾಯಿಸಿ ಖುಷಿಪಟ್ಟರು. ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಅಧಿಕಾರ ನಮಗೆ ದೊರೆತಿದ್ದು ಖುಷಿ ತಂದಿದೆ. ಹೀಗಾಗಿ ಇದೇ ಮೊದಲ ಬಾರಿ ನಾವು ಮತ ಚಲಾಯಿಸುತ್ತಿದ್ದೇವೆ ಎಂದು ಸಂತಸ ಹಂಚಿಕೊಂಡರು. ಜಿಲ್ಲೆಯಲ್ಲಿ ಬಹುತೇಕ ಮತಗಟ್ಟೆಗಳಲ್ಲಿ ಪುರುಷರಿಗಿಂತಲೂ, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಮತ ಚಲಾಯಿಸಲು ಆಗಮಿಸಿ, ಸರದಿ ಸಾಲಿನಲ್ಲಿ ನಿಂತಿದ್ದು ಕಂಡುಬಂದಿತು.

        ಈ ಬಾರಿ ಎಲ್ಲಾ ಮತಗಟ್ಟೆಗಳಲ್ಲಿ ವಿಕಲಚೇತನ ಮತದಾರರಿಗಾಗಿ ವೀಲ್‍ಚೇರ್, ವಾಕರ್ ಹಾಗೂ ಊರುಗೋಲುಗಳ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಕೆಲವೆಡೆ ವಿಕಲಚೇತನರು, ವಯೋವೃದ್ಧರು ಹಾಗೂ ಅಶಕ್ತರಿಗೆ ಚುನಾವಣಾ ಆಯೋಗದಿಂದಲೇ ಉಚಿತ ಆಟೋ ವ್ಯವಸ್ಥೆ ಮಾಡಿದ್ದು, ಜನಮನ್ನಣೆಗೆ ಪಾತ್ರವಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap