ಅಂತರ್ಜಲ ವೃದ್ಧಿಸದೆ ನೀರಿಗೆ ಅನ್ಯ ದಾರಿ ಇಲ್ಲ..!!

ತುಮಕೂರು

    ಎಲ್ಲಿಂದಲೋ ಬರುವ ಹೇಮಾವತಿ ನೀರನ್ನು ಹೋರಾಟ ಮಾಡಿ ಪಡೆಯುವ, ಎಂದೋ ಬರುವ ಎತ್ತಿನ ಹೊಳೆ ನೀರಿಗೆ ಕಾಯುವ ಪರಿಸ್ಥಿತಿಗೆ ಹೊರತಾಗಿ ತುಮಕೂರು ನಗರದಲ್ಲಿ ನೀರಿನ ಸ್ವಾವಲಂಬನೆ ಸಾಧ್ಯವಿಲ್ಲವೆ? ನಗರಕ್ಕೆ ಬೇಕಾಗಿರುವಷ್ಟು ನೀರನ್ನು ಇಲ್ಲಿಯೇ ಪಡೆಯುವ ಅವಕಾಶವಿಲ್ಲವೆ? ಸಾಧ್ಯವಾಗುತ್ತದೆ ಎನ್ನುತ್ತಾರೆ ನೀರಿನ ತಜ್ಞರು.

   ನಮಗೆ ಕೆರೆಕಟ್ಟೆಗಳ ನೀರು, ಅಂತರ್ಜಲದ ಹೊರತಾಗಿ ಯಾವುದೇ ನದಿ ಮೂಲದ ನೀರಿನ ಸೌಕರ್ಯಗಳಿಲ್ಲ. ಹೇಮಾವತಿ ನೀರಿನ ಲಭ್ಯತೆ ಇಲ್ಲವಾದರೆ ನೆಲ ಕೊರೆದು ತೆಗೆಯುವ ಅಂತರ್ಜಲವೇ ಅನಿವಾರ್ಯ. ಹೀಗಾಗಿ ಅಂತರ್ಜಲ ಕ್ರೂಢೀಕರಣಕ್ಕೆ ಆದ್ಯತೆ ನೀಡಬೇಕಾದ ಅನಿವಾರ್ಯತೆ. ತುಮಕೂರಿನಲ್ಲಿದ್ದ ಕೆರೆ ಕಟ್ಟೆಗಳ ಜಾಗದಲ್ಲಿ ಕಾಂಕ್ರಿಟ್ ಕಟ್ಟಡಗಳು ನಿರ್ಮಾಣವಾಗಿವೆ. ನೀರುಗಾಲುವೆಗಳು ಮುಚ್ಚಿಹೋಗಿ, ದಿಕ್ಕುತಪ್ಪಿ ಮಳೆನೀರು ದಿಕ್ಕಾಪಾಲಾಗಿ ಪೋಲಾಗುತ್ತಿದೆ. ನಗರವ್ಯಾಪ್ತಿಯಲ್ಲಿ ಅಂತರ್ಜಲ ಕುಸಿದುಹೋಗಿದೆ. ನೀರಿನ ಬಳಕೆ ಹೆಚ್ಚಾಗಿ, ಭೂಮಿ ಒಳಗಿನ ನೀರಿನ ಪ್ರಮಾಣ ದಿನೇದಿನೆ ಕಡಿಮೆಯಾಗುತ್ತಿದೆ. ಹೀಗಾಗಿ ವರ್ಷದಿಂದವರ್ಷಕ್ಕೆ ಅಂತರ್ಜಲ ಕುಸಿಯುತ್ತಾ ಹೋಗುತ್ತಿದೆ. ಹೀಗೇ ಆದರೆ ಇತರೆ ದೊಡ್ಡ ನಗರಗಳಂತೆ ತುಮಕೂರಿನಲ್ಲೂ ಅಂತರ್ಜಲ ಬರಿದಾಗುವ ಕಾಲ ದೂರವಿಲ್ಲ.

    ಯಾವುದೇ ನಗರಕ್ಕೆ ಹೊರಗಿನಿಂದ ನೀರು ತರುವ, ಖರೀದಿಸಿ ಜನರಿಗೆ ವಿತರಿಸುವ ವ್ಯವಸ್ಥೆ ಮುಂದಿನ ದಿನಗಳಲ್ಲಿ ದುಸ್ತರವಾಗುತ್ತದೆ. ಈ ಹಿನ್ನೆಲೆಯಲ್ಲಿ ತುಮಕೂರಿನ ನೀರಿನ ಮೂಲವಾದ ಅಂತರ್ಜಲ ಉಳಿಸಿ, ವೃದ್ಧಿ ಮಾಡುವ ಕಾರ್ಯ ಆದ್ಯತೆಯಾಗಬೇಕು.ಮಳೆಗಾಲದಲ್ಲಿ ಪ್ರತಿ ಹನಿ ನೀರು ಹೊರಗೆ ಹರಿದು ಹೋಗದಂತೆ ಸಂಗ್ರಹಿಸಬೇಕು, ಇಲ್ಲವೆ ಭೂಮಿಯಲ್ಲಿ ಇಂಗಿಸಬೇಕು. ಪ್ರತಿ ಕಟ್ಟಡಗಳು ಕಡ್ಡಾಯವಾಗಿ ಮಳೆ ನೀರಿನ ಕೊಯ್ಲು ವ್ಯವಸ್ಥೆ ಹೊಂದಿರಬೇಕು. ರಸ್ತೆ, ಬಯಲಲ್ಲಿ ಬೀಳುವ ಮಳೆ ನೀರು ಸಂಗ್ರಹಿಸುವ ಕಾರ್ಯಗಳಾಗಬೇಕು.

    ನಗರದ ಹೊರವಲಯದ ನೀರನ್ನು ಹರಿಸಿ ಸಂಗ್ರಹಿಸಿಕೊಳ್ಳಲು ಹೆಚ್ಚಿನ ಸಂಗ್ರಹಾಗಾರಗಳ ನಿರ್ಮಾಣವಾಗಬೇಕು. ಇದಾದರೆ ಮಾತ್ರ ಹೇಮಾವತಿ ನೀರಿನ ಕೊರತೆಯಾಗುವ ಸಂದರ್ಭಗಳಲ್ಲೂ ನೀರಿನ ಕೊರತೆ ಆಗದಂತೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಭೀಮಸಂದ್ರದ ಒಳಚರಂಡಿಯ ಟ್ರೀಟ್‍ಮೆಂಟ್ ಪ್ಲಾಂಟಿನ ನೀರನ್ನು ಶುದ್ಧೀಕರಿಸಿ ನಗರದಲ್ಲಿ ಉದ್ಯಾನ ಬೆಳೆಸಲು, ಇತರೆ ಉದ್ದೇಶಕ್ಕೆ ಬಳಸಲು ಯೋಜನೆ ರೂಪಿಸಬೇಕು ಎಂದು ವನ್ಯ ಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಟಿ. ವಿ. ಎನ್. ಮೂರ್ತಿ ಅಭಿಪ್ರಾಯಪಡುತ್ತಾರೆ.

      ತುಮಕೂರಿನಲ್ಲಿ ಇವತ್ತಿಗೂ ಅಂತರ್ಜಲ ಮಟ್ಟ ಕಾಪಾಡಿರುವುದು ನಗರದ ಅಮಾನಿಕೆರೆ. ಕೊಳೆತು ನಾರುತ್ತಾ, ನಿರ್ಲಕ್ಷಕ್ಕೊಳಗಾಗಿದ್ದ ಈ ಕೆರೆಸೌಂದರ್ಯಗೊಳಿಸಿ, ನೀರು ಸಂಗ್ರಹಿಸುವ ಕೆಲಸಗಳಾಗುತ್ತಿವೆ. ಅಮಾನಿಕೆರೆಯ ಜೊತೆಗೆ ಮರಳೂರು ಕೆರೆ, ಕುಪ್ಪೂರು ಕೆರೆ, ದೇವರಾಯಪಟ್ಟಣ ಕೆರೆ, ಮೈದಾಳ ಕೆರೆಗಳ ಹೂಳು ತೆಗೆದು ಹೆಮಾವತಿ ನೀರು, ಮಳೆ ನೀರು ಸಂಗ್ರಹಿಸಿ ಅಂತರ್ಜಲ ವೃದ್ಧಿಸಲು, ಜನರಿಗೆ ವಿತರಿಸಲು ಯೋಜನೆ ರೂಪಿಸಲಾಗಿದೆ.

     ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕೂಡಾ ನಗರದಲ್ಲಿ ನೀರು ಸಂಗ್ರಹಿಸಿ ಅಂತರ್ಜಲ ವೃದ್ಧಿ ಮಾಡುವ ರೀತಿಯ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇದರ ಅಂಗವಾಗಿ ನೀರು ಸಂಗ್ರಹಣೆ ಹಾಗೂ ಮನರಂಜನೆ ಉದ್ದೇಶದಿಂದ ಅಮಾನಿಕೆರೆಯ ಅಭಿವೃದ್ಧಿ ಕೆಲಸ ಆರಂಭವಾಗಿದೆ.

      ತುಮಕೂರು ಅಮಾನಿಕೆರೆಗೆ ಸುಮಾರು 887 ವರ್ಷಗಳ ಇತಿಹಾಸವಿದೆ. ಸುಮಾರು 506 ಎಕರೆ ಪ್ರದೇಶ, 7 ಕಿ.ಮೀ ವಿಸ್ತೀರ್ಣದ ಪರಿಧಿ, 481 ಎಕರೆ ಒಳಭಾಗದ ವಿಸ್ತೀರ್ಣ, ಸುಮಾರು 38 ಚ.ಕಿ.ಮೀ ವಿಸ್ತೀರ್ಣದ ಕೆರೆ, 4885 ಮಿಲಿಯನ್ ಲೀಟರ್ ನೀರು ಸಂಗ್ರಹ ಸಾಮಥ್ರ್ಯ ಹೊಂದಿದೆ. ನೀರಿನ ಅಭಾವವಿರುವ ತುಮಕೂರಿನಲ್ಲಿ ಅಂತರ್ಜಲ ಮಟ್ಟವನ್ನು ಪುನರ್‍ವೃದ್ಧಿ ಮಾಡಲು ಅಮಾನಿಕೆರೆ ಅಭಿವೃದ್ಧಿ ಒಂದು ವರವಾಗಲಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ. ರಂಗಸ್ವಾಮಿ ತಿಳಿಸಿದ್ದಾರೆ.

     ದೆಹಲಿ, ಬೆಂಗಳೂರು, ಹೈದರಾಬಾದ್‍ನಂತಹ ಬೃಹತ್ ನಗರಗಳಲ್ಲಿ 2020ರ ವೇಳೆಗೆ ಅಂತರ್ಜಲ ಬರಿದಾಗಲಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಇದನ್ನು ಮನಗಂಡ ಸ್ಮಾರ್ಟ್ ಸಿಟಿ ಲಿಮಿಟೆಡ್ ನಾಗರಿಕರಿಗೆ ಉಪಯೋಗವಾಗುವಂತೆ ಅಮಾನಿಕೆರೆಯನ್ನು ಪುನರುಜ್ಜೀವನಗೊಳಿಸಿ ಸೌಂದರ್ಯೀಕರಣಗೊಳಿಸಲು 28 ಕೋಟಿ ರೂ.ಗಳ ಅಂದಾಜು ವೆಚ್ಚದ ಯೋಜನೆಯೊಂದನ್ನು ರೂಪಿಸಿ ಕಾಮಗಾರಿ ಆರಂಭಿಸಿದೆ.

    ಈ ಕೆರೆ ಅಭಿವೃದ್ಧಿಗೆ ಅಂತಾರಾಷ್ಟ್ರೀಯ ಸಲಹಾ ಸಂಸ್ಥೆಯಾದ ಐಪಿಒ ಗ್ಲೋಬಲ್ ಕಂಪನಿಯನ್ನು ನೇಮಿಸಲಾಗಿದೆ. ಸಲಹಾ ಕಂಪನಿಯು ಕೆರೆಯ ಅಭಿವೃದ್ಧಿಯತ್ತ ಗಮನ ಹರಿಸಲಿದ್ದು, ಸಂಸ್ಕರಿಸದ ಕೊಳೆತ ಪದಾರ್ಥಗಳನ್ನು ಸರೋವರಗಳಲ್ಲಿ ಪ್ರವೇಶಿಸುವುದನ್ನು ತಡೆಯಲು ಒಳಚರಂಡಿ ತಿರುವು ಕಾರ್ಯವನ್ನು ಮೊದಲ ಹಂತದಲ್ಲಿ ಪೂರ್ಣಗೊಳಿಸಲಿದೆ. ಒಳಚರಂಡಿಯನ್ನು ತಿರುಗಿಸುವುದರ ಜೊತೆಗೆ, ನೀರಿನ ಹಾನಿಕಾರಕ ಒಳಹರಿವನ್ನು ಮತ್ತು ನೀರಿನಲ್ಲಿ ಬೆಳೆಯುವ ಕಳೆ ಸಸ್ಯಗಳನ್ನು ತಡೆಗಟ್ಟುವುದಕ್ಕೆ ಆದ್ಯತೆ ನೀಡಲಿದೆ. ಅಲ್ಲದೆ ಈ ಯೋಜನೆಯಡಿ ಶೌಚಾಲಯದ ಬ್ಲಾಕ್‍ಗಳು, ಮಕ್ಕಳ ಉದ್ಯಾನ ಪ್ರದೇಶ, ವಾಕಿಂಗ್ ಟ್ರ್ಯಾಕ್, ಯೋಗ ಮತ್ತು ವ್ಯಾಯಾಮ ವಲಯಗಳನ್ನು ಸ್ಥಾಪಿಸಲಾಗುವುದು.

      ಅಮಾನಿಕೆರೆ ಮನರಂಜನೆ, ಪ್ರವಾಸೋದ್ಯಮ ಮತ್ತು ಕಾಟೇಜ್ ಅಥವಾ ವಸತಿ ಜೀವನಕ್ಕೆ ಪ್ರಮುಖ ಅವಕಾಶಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಯೋಜನೆಯಿಂದ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಹೆಚ್ಚಿಸುವುದರೊಂದಿಗೆ ಶುದ್ಧೀಕರಿಸಿದ ನೀರಿನ ಮೂಲವನ್ನಾಗಿ ಅಭಿವೃದ್ಧಿಪಡಿಸಬಹುದಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link