ಜನನಿಬಿಡ ರಸ್ತೆಗಳಲ್ಲಿ ತಪ್ಪಿಲ್ಲ ಪಾರ್ಕಿಂಗ್ ಫಜೀತಿ

ತುಮಕೂರು

    ‘ಕೆಲವರಿಗೆ ಟ್ರಾಫಿಕ್ ಸೆನ್ಸೇ ಇಲ್ಲ…’ ಎಂದು ನಗರದ ಜನರಲ್ ಕಾರ್ಯಪ್ಪ ರಸ್ತೆಯಲ್ಲಿ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಪೇದೆ ಸಿಟ್ಟಿನಿಂದ ಗೊಣಗಿಕೊಳ್ಳುತ್ತಾರೆ. ಎಂಜಿ ರಸ್ತೆ, ಈ ರಸ್ತೆಯ ತಿರುವು ರಸ್ತೆಗಳು ಹಾಗೂ ಜನರಲ್ ಕಾರ್ಯಪ್ಪ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗಿಗೆ ದೊಡ್ಡ ಸಮಸ್ಯೆ. ಕಿರಿದಾದ ಈ ರಸ್ತೆಗಳ ಎರಡೂ ಬದಿ ವಾಹನಗಳ ಪಾರ್ಕಿಂಗ್ ಮಾಡಿದರೆ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ.

     ಹಾಗಾಗಿ ಇಲ್ಲಿ ದಿನಬಿಟ್ಟುದಿನ ಒಂದೊಂದು ಬದಿ ವಾಹನ ನಿಲುಗಡೆಗೆ ಮಾಡಲಾಗುತ್ತದೆ. ಎಂ ಜಿ ರಸ್ತೆಯಲ್ಲಿ ಒಂದು ಬದಿ ದ್ವಿಚಕ್ರ, ಮತ್ತೊಂದು ಕಡೆ ಕಾರುಗಳ ನಿಲುಗಡೆಗೆ ಅವಕಾಶ ಮಾಡಲಾಗಿದೆ. ಇಲ್ಲಿ ಏಕಮುಖ ಸಂಚಾರವಿದ್ದರೂ ಸಂಚಾರ ಕಿರಿಕಿರಿಯೇ. ಇದರ ಜೊತೆಗೆ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿಹೋಗುವವರು ಸಂಚಾರಿ ಸಮಸ್ಯೆಗೆ ಕಾರಣರಾಗಿದ್ದಾರೆ. ಇಲ್ಲಿ ಟ್ರಾಫಿಕ್ ಪೊಲೀಸರಿದ್ದರೂ ಅವರನ್ನು ಯಾಮಾರಿಸುವ ವಾಹನ ಸವಾರರೂ ಇದ್ದಾರೆ, ಅಂತಹವರು ಸಿಕ್ಕಿಬಿದ್ದಾಗ ಪೊಲೀಸರು ದಂಡ ವಿಧಿಸುತ್ತಾರೆ. ದಂಡ ವಿಧಿಸುವುದೇ ಸಮಸ್ಯೆಗೆ ಪರಿಹಾರವಲ್ಲ, ಜನರಲ್ಲಿ ಟ್ರಾಫಿಕ್‍ಸೆನ್ಸ್ ಇರಬೇಕು ಎಂದು ಪೊಲೀಸರು ಹೇಳುತ್ತಾರೆ.

      ದ್ವಿಚಕ್ರ ವಾಹನಗಳ ಪಾರ್ಕಿಂಗ್‍ಗಾಗಿ ಎಂಜಿ ರಸ್ತೆ, ಜನರಲ್ ಕಾರ್ಯಪ್ಪ ರಸ್ತೆಗೆ ಹೊಂದಿಕೊಂಡಿರುವ ಮೂರು ಕನ್ಸರ್‍ವೆನ್ಸಿಗಳಲ್ಲಿ ಅವಕಾಶ ಮಾಡಲಾಗಿದ್ದರೂ ಅಲ್ಲಿ ವಾಹನ ನಿಲ್ಲಿಸಲು ಯಾಕೋ ಆಸಕ್ತಿ ತೋರುತ್ತಿಲ್ಲ. ಸದ್ಯಕ್ಕೆ ಇಲ್ಲಿ ದ್ವಿಚಕ್ರ ವಾಹನಗಳ ನಿಲಗಡೆಗೆ ಯಾವುದೇ ಶುಲ್ಕ ವಸೂಲಿ ಮಾಡದೆ ಉಚಿತವಾಗಿ ನೀಡಲಾಗಿದೆ. ಮೂರೂ ಕನ್ಸರ್‍ವೆನ್ಸಿಗಳಲ್ಲಿ ಪಾರ್ಕಿಂಗ್ ವಾಹನಗಳ ನಿರ್ವಹಣೆಗೆ ಸೆಕ್ಯೂರಿಟಿಗಳನ್ನು ನಗರ ಪಾಲಿಕೆ ನೇಮಿಸಿದೆ.

    ವಾಹನಗಳಿಗೆ ರಕ್ಷಣೆ ಇದೆ, ವ್ಯವಸ್ಥಿತವಾದ ಸ್ಥಳಾವಕಾಶವಿದೆ ಆದರೂ ಕನ್ಸರ್‍ವೆನ್ಸಿಗಳು ವಾಹನಗಳಿಲ್ಲದೆ ಖಾಲಿ ಹೊಡೆಯುತ್ತವೆ. ಆದರೆ ಪಕ್ಕದಲ್ಲೇ ರಸ್ತೆಯ ಎರಡೂ ಬದಿ ವಾಹನಗಳು ಸಾಲು ಸಾಲು ನಿಂತಿರುತ್ತವೆ.ಮೊದಲೇ ಇಕ್ಕಟ್ಟಾಗಿರುವ ಎಂಜಿ ರಸ್ತೆ. ಜನರಲ್ ಕಾರ್ಯಪ್ಪ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ನಡೆಯುತ್ತಿವೆ. ಕಾಮಗಾರಿಗಾಗಿ ಹೆಚ್ಚುಕಮ್ಮಿ ಅರ್ಧ ರಸ್ತೆಯನ್ನು ಬಂದ್ ಮಾಡಲಾಗಿದೆ. ಈ ರಸ್ತೆಗಲ್ಲಿ ಎರಡೂ ಬದಿಯಲ್ಲಿ ವಾಹನ ನಿಲ್ಲಿಸಿಬಿಟ್ಟರೆ ಇತರೆ ವಾಹನಗಳ ಸಂಚಾರಕ್ಕೆ ಜಾಗವೆಲ್ಲಿ ಎನ್ನುವಂತಾಗಿದೆ.

    ಕನ್ಸರ್‍ವೆನ್ಸಿಗಳಲ್ಲಿ ಪಾರ್ಕಿಂಗ್‍ಗೆ ಅವಕಾಶ ಮಾಡಲಾದೆ, ಟೂ ವೀಲರ್‍ಗಳನ್ನು ಅಲ್ಲಿ ನಿಲುಗಡೆ ಮಾಡಿ ಎಂದು ಟ್ರಾಫಿಕ್ ಪೊಲೀಸರು ಪ್ರಕಟಣೆ ಮಾಡುತ್ತಲೇ ಇರುತ್ತಾರೆ. ಯಾರೂ ಅತ್ತ ಕಿವಿಕೊಡುವಂತೆ ಕಾಣುತ್ತಿಲ್ಲ. ಯಾರೋ, ಯಾವಾಗಲೋ ಬಂದು ಪೊಲೀಸರ ಕಣ್ಣು ತಪ್ಪಿಸಿ ರಸ್ತೆ ಬದಿ ವಾಹನ ನಿಲ್ಲಿಸಿ ಹೋಗಿರುತ್ತಾರೆ. ಕನ್ಸರ್‍ವೆನ್ಸಿಗಳಿಗೆ ಹೋಗಿ ವಾಹನ ನಿಲ್ಲಿಸುವಷ್ಟು ತಾಳ್ಮೆ, ಕಾಳಜಿ ಇಲ್ಲ. ಪೊಲೀಸರು ಆಗಾಗ ಕಾರ್ಯಾಚರಣೆ ನಡೆಸಿ ಅಂತಹ ವಾಹನಗಳಿಗೆ ದಂಡ ಹಾಕುತ್ತಾರೆ. ಆದರೆ ಇದು ಪ್ರತಿ ನಿತ್ಯ ಮಾಡಲಾಗದು ಸಾರ್ವಜನಿಕರಲ್ಲಿ ವಾಹನಗಳ ಪಾರ್ಕಿಂಗ್ ಬಗ್ಗೆ ಜಾಗೃತಿ ಮೂಡಬೇಕು ಎಂದು ಪೊಲೀಸರು ಹೇಳುತ್ತಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link