ತುಮಕೂರು
ನಗರದ ಅಮಾನಿಕೆರೆಯನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಮಾಡುವ ಕಾಮಗಾರಿಗಳು ನಡೆದಿವೆ. ಇದರ ನಡುವೆ ಕೆರೆ ಅಂಗಳದ ಗ್ಲಾಸ್‍ಹೌಸ್ ಪಕ್ಕದಲ್ಲಿ ತುಮಕೂರು ಸಂತೆ ನಿರ್ಮಾಣ ಮಾಡುವ ಪ್ರಯತ್ನಕ್ಕೆ ನಗರದ ವಿವಿಧ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಕೆರೆಯ ಮೂಲ ಸ್ವರೂಪ ಉಳಿಸಿ, ನೀರು ಸಂಗ್ರಹಣೆ, ಹಸಿರು ಬೆಳೆಸುವ ಕಾರ್ಯ ಮಾಡಬೇಕೇ ಹೊರತು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಮಾಡಬಾರದು ಎಂದು ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಕೆರೆಯಲ್ಲಿ ನೀರು ತುಂಬಿಸಿ ಜಲಚರಗಳ ರಕ್ಷಣೆ ಮಾಡುವುದು, ಅಪರೂಪದ ಗಿಡಮರಗಳನ್ನು ಬೆಳೆಸುವುದರಿಂದ ಕೆರೆಯನ್ನು ಆಕರ್ಷಣೀಯ ಪ್ರವಾಸಿ ತಾಣವಾಗಿ ರೂಪಿಸಬೇಕು. ಸಂತೆಯು ಪ್ರವಾಸಿ ಕೇಂದ್ರದ ಆಕರ್ಷಣೆಯಾಗಲಾರದು ಎಂದಿದ್ದಾರೆ.
ಅಭಿವೃದ್ಧಿ ಹೆಸರಿನಲ್ಲಿ ಅಮಾನಿಕೆರೆಯ ಅಂಗಳವೇ ಕಡಿಮೆಯಾಗುತ್ತಿದೆ. 950 ಎಕರೆ ವಿಸ್ತೀರ್ಣವಿದ್ದ ಕೆರೆ ಇಂದು 500 ಎಕರೆಗೆ ಕುಸಿದಿದೆ. ಇದರಲ್ಲಿ ಉದ್ಯಾನವನ, ಗ್ಲಾಸ್‍ಹೌಸ್, ರಸ್ತೆ ಮತ್ತಿತರ ಉದ್ದೇಶಕ್ಕೆ ಬಳಸಿಕೊಂಡು ಮತ್ತಷ್ಟು ಕಿರಿದು ಮಾಡಲಾಗಿದೆ ಎಂದು ಹೇಳಿದ್ದಾರೆ.
ಮಂಗಳವಾರ ಅಮಾನಿಕೆರೆಯ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ಹೋಗಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು, ಕೆರೆ ಅಂಗಳದ ಗ್ಲಾಸ್‍ಹೌಸ್ ಪಕ್ಕದ ಮುಕ್ಕಾಲು ಎಕರೆ ಪ್ರದೇಶದಲ್ಲಿ 1.75 ಕೋಟಿ ರೂ. ವೆಚ್ಚದಲ್ಲಿ ತುಮಕೂರು ಸಂತೆ ನಿರ್ಮಾಣ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದರು.
ಕೆರೆ ಅಂಗಳದಲ್ಲಿ ಸಂತೆ ನಿರ್ಮಾಣ ಮಾಡಿ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡುವುದು ಅವೈಜ್ಞಾನಿಕ ಹಾಗೂ ಕಾನೂನು ಬಾಹಿರ. ಕೆರೆಯ ಮೂಲಸ್ವರೂಪಕ್ಕೆ ಧಕ್ಕೆ ಮಾಡುವುದು, ಅಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡುವುದು ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶ ಉಲ್ಲಂಘನೆಯಾಗುತ್ತದೆ ಎಂದು ಪರಿಸರವಾದಿ ಸಿ.ಯತಿರಾಜು ಹೇಳಿದರು.
ಸ್ಮಾರ್ಟ್ ಸಿಟಿಯರು ಅಭಿವೃದ್ಧಿ ಹೆಸರಿನಲ್ಲಿ ಕೆರೆಯ 13 ಎಕರೆ ಜಾಗವನ್ನು ಉದ್ಯಾನವನ, ಗ್ಲಾಸ್‍ಹೌಸ್‍ಗೆ ಬಳಿಸಿಕೊಂಡಿದ್ದಾರೆ. ಕೆರೆ ಅಂಗಳದಲ್ಲಿ ನಿಯಮ ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲಿ, ಕೆರೆಯನ್ನು ಸಂರಕ್ಷಸಲಿ, ಇಲ್ಲಿ ಸಂತೆಗೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದ್ದಾರೆ.
ವಿಜ್ಞಾನ ಚಳುವಳಿಯಲ್ಲಿ ತೊಡಗಿಸಿಕೊಂಡಿರುವ ಡಾ.ಹೆಚ್.ಎಸ್.ನಿರಂಜನಾರಾಧ್ಯರವರೂ ಕೆರೆಯಲ್ಲಿ ಸಂತೆ ನಿರ್ಮಾಣ ಮಾಡುವುದನ್ನು ವಿರೋಧಿಸಿದ್ದಾರೆ. ಕೆರೆಯಲ್ಲಿ ನೀರು ತುಂಬಿಸಿ, ಸುತ್ತಲೂ ಅಪರೂಪದ ಗಿಡಮರಗಳನ್ನು ಬೆಳೆಸಿದರೆ ಪ್ರವಾಸಿ ತಾಣವಾಗಿ ಆಕರ್ಷಣೆಯಾಗಿರುತ್ತದೆ. ಆದರೆ, ಸಂತೆ ಪ್ರವಾಸಿಗರ ಆಕರ್ಷಣೆಯಾಗಲಾರದು ಎಂದು ತಿಳಿಸಿದ್ದಾರೆ.
ಕೆರೆಯಲಿ ನೀರು, ಹಸಿರು ಹೆಚ್ಚಿಸಿ ಹವಾನಿಯಂತ್ರಿತ, ಆಹ್ಲಾದಕರ ವಾತಾವರಣ ನಿರ್ಮಾಣ ಮಾಡಲಿ, ಜಲಚರ ಜೀವಿಗಳಿಗೂ ಆಶ್ರಯವಾಗಲಿ, ಕೆರೆಯಲ್ಲಿ ಸಂತೆ ಮಾಡಬಾರದು ಎಂದು ಹೇಳಿದ್ದಾರೆ.ತುಮಕೂರಿನಲ್ಲಿ ಸಂತೆ ನಿರ್ಮಾಣ ಮಾಡಲು ಅಮಾನಿಕೆರೆಯೇ ಬೇಕಾಗಿಲ್ಲ, ನಗರದ ವಿವಿಧೆಡೆ ಮಿನಿ ಮಾರುಕಟ್ಟೆಗಳುನ್ನು ನಿರ್ಮಾಣ ಮಾಡಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಿ, ಅಂತರಸನಹಳ್ಳಿಯ ಮಾರುಕಟ್ಟೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಿ ಎಂದು ಪ್ರಾಂತ ರೈತರ ಸಂಘದ ಜಿಲ್ಲಾ ಸಂಚಾಲಕ ಬಿ. ಉಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆರೆಯನ್ನು ಆಕರ್ಷಕ ಪ್ರವಾಸಿ ಕೇಂದ್ರವಾಗಿ ರೂಪಿಸಬೇಕು ಎನ್ನುವಾಗ, ಸಂತೆ ಮಾಡಿ ವಾತಾವರಣ ಕೆಡಿಸುವುದು ಬೇಡ, ಇಲ್ಲಿ ವಾಯುವಿಹಾರಕ್ಕೆ ಪೂರಕವಾದ ಕೆಲಸಗಳಾಗಲಿ ಸಂತೆಯನ್ನು ನಗರದ ಬೇರೆಡೆ ಮಾಡಲಿ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
