ಉಪಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆ

ಬೆಂಗಳೂರು

     ಉಪಚುನಾವಣೆಯ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗಲಿದೆ. ಮತ್ತೆ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಸರ್ಕಾರ ರಚನೆಗೆ ಮುಂದಾಗುವ ಪ್ರಯತ್ನಗಳು ನಡೆದಿವೆ ಎಂಬ ಸುದ್ದಿಗಳು ಹರಿದಾಡುತ್ತಿವೆಯಾದರೂ ಈಗಿನ ರಾಜಕೀಯ ಸ್ಥಿತಿಗತಿ ಅವಲೋಕಿಸಿದರೆ ಮತ್ತೆ ಕಾಂಗ್ರೆಸ್-ಜೆಡಿಎಸ್ ಒಂದುಗೂಡುವುದು ಕಷ್ಟ ಎಂದೇ ಹೇಳಲಾಗುತ್ತಿದೆ. ಜತೆಗೆ ಬಿಜೆಪಿ ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿರುವುದರಿಂದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಸ್ಥಾಪನೆ ಸದ್ಯಕ್ಕಂತೂ ಕನಸಿನ ಮಾತೇ ಸರಿ.

      ಕಾಂಗ್ರೆಸ್-ಜೆಡಿಎಸ್ ಮರು ಮೈತ್ರಿ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಎಂದರೆ ತಪ್ಪಾಗಲಾರದು. ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಒಂದಾಗಿ ಸರ್ಕಾರ ರಚನೆ ಮಾಡುವಂತ ರಾಜಕೀಯ ಪರಿಸ್ಥಿತಿಯೇ ಸೃಷ್ಟಿಯಾಗಿಲ್ಲ. ಅದಕ್ಕೂ ಮೊದಲೇ ಎರಡೂ ಪಕ್ಷಗಳು ಮರುಮೈತ್ರಿಯ ಬಗ್ಗೆ ಮಾತನಾಡುತ್ತಿರುವುದು ಅಚ್ಚರಿ ಬೆಳವಣಿಗೆ, ಜತೆಗೆ ಉಪಚುನಾವಣೆಯಲ್ಲಿ ಮತದಾರರನ್ನು ಗೊಂದಲಕ್ಕೀಡಾಗಿಸಿ ದಾರಿ ತಪ್ಪಿಸುವ ಪ್ರಯತ್ನ ಎಂದೇ ಹೇಳಲಾಗುತ್ತಿದೆ.

     ಈ ಉಪಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಪಡೆಯಲು 6 ರಿಂದ 7 ಸ್ಥಾನಗಳು ಗೆದ್ದರೆ ಸಾಕು, ಈಗಿನ ಪರಿಸ್ಥಿತಿಯನ್ನು ಗಮಿಸಿದರೆ ಬಿಜೆಪಿ ಸುಲಭವಾಗಿ 7-8 ಸ್ಥಾನ ಗೆಲ್ಲುವುದು ನಿಶ್ಚಿತ. ಹಾಗಾಗಿ, ಮತ್ತೆ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಸರ್ಕಾರ ರಚಿಸುವ ರಾಜಕೀಯ ವಾತಾವರಣ ರೂಪುಗೊಳ್ಳುವುದು ಅಷ್ಟು ಸುಲಭವಲ್ಲ.

      ಈಗಾಗಲೇ ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಿ ಕಹಿ ಉಂಡಿರುವ ಜೆಡಿಎಸ್‍ನವರಿಗೆ ಕಾಂಗ್ರೆಸ್ ಜತೆ ಕೈಜೋಡಿಸುವ ಇಚ್ಛೆ ಇಲ್ಲ. ಜೆತೆಗೆ, ಕಾಂಗ್ರೆಸ್ ಜತೆ ಕೈಜೋಡಿಸಿ ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಿದರೆ, ಜೆಡಿಎಸ್‍ನ ಹಲವು ಶಾಸಕರು ಬಿಜೆಪಿಯತ್ತ ಮುಖ ಮಾಡುವ ಆತಂಕವೂ ಜೆಡಿಎಸ್ ನಾಯಕರಿಗಿದೆ. ಮತ್ತೆ ಕಾಂಗ್ರೆಸ್ ಜತೆ ಸೇರಿದರೆ ಪಕ್ಷ ಇಬ್ಭಾಗವಾಗುವ ಸಾಧ್ಯತೆ ಇರುವುದರಿಂದ ಜೆಡಿಎಸ್ ನಾಯಕರು ಕಾಂಗ್ರೆಸ್ ಜತೆ ಸೇರುವ ಸಾಹಸ ಮಾಡಲಾರರು ಎಂದೇ ಹೇಳಲಾಗುತ್ತಿದೆ.

     ಕಾಂಗ್ರೆಸ್‍ನಲ್ಲೂ ಜೆಡಿಎಸ್ ಜತೆ ಸೇರಿ ಸರ್ಕಾರ ರಚನೆಗೆ ಒಮ್ಮತವಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೊರತು ಪಡಿಸಿ ಜೆಡಿಎಸ್ -ಕಾಂಗ್ರೆಸ್ ಜತೆ ಸೇರಲು ಮುಂದಾದರೆ ಸಿದ್ದರಾಮಯ್ಯ ಬೆಂಬಲಿಗರು ಅದಕ್ಕೆ ಅವಕಾಶ ಕೊಡಲಾರರು. ಹಾಗಾಗಿ, ಸಿದ್ದರಾಮಯ್ಯನವರನ್ನೊರತುಪಡಿಸಿ ಮೈತ್ರಿ ಎಂಬ ಜೆಡಿಎಸ್ ಪ್ರಸ್ತಾಪಕ್ಕೆ ಕಾಂಗ್ರೆಸ್‍ನಲ್ಲಿ ಮನ್ನಣೆ ಸಿಗದು.

      ಸಿದ್ದರಾಮಯ್ಯನವರ ಜತೆ ಸೇರಿ ಸರ್ಕಾರ ರಚಿಸುವುದು ಜೆಡಿಎಸ್ ನಾಯಕರಿಗೆ ಬೇಕಾಗಿಲ್ಲ. ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದ ಸಿದ್ದರಾಮಯ್ಯನವರ ಜತೆ ಕೈಜೋಡಿಸುವ ಬಯಕೆ ಜೆಡಿಎಸ್ ನಾಯಕರಲ್ಲಿ ಇಲ್ಲ. ಎರಡೂ ಪಕ್ಷಗಳಿಗೂ ಮರು ಮೈತ್ರಿ ದೊಡ್ಡ ಸವಾಲು ಜತೆಗೆ ಆಂತರಿಕವಾಗಿಯೂ ಸಾಕಷ್ಟು ಅಸಮಾಧಾನ-ಅತೃಪ್ತಿಗಳು ಭುಗಿಲೇಳುವುದು ನಿಶ್ಚಿತ. ಮತದಾರರು ಬಿಜೆಪಿ ಪರ ಹೆಚ್ಚಿನ ಒಲವು ತೋರಿರುವ ಸಮೀಕ್ಷೆ ಹೊರ ಬರುತ್ತಿರುವಂತೆಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಗೊಂದಲ ಸೃಷ್ಟಿಸಲು ಮರು ಮೈತ್ರಿಯ ಸುದ್ದಿಯನ್ನು ತೇಲಿ ಬಿಟ್ಟಿವೆ ಎಂದು ಹೇಳಲಾಗುತ್ತಿದೆ.

    ಭವಿಷ್ಯದ ರಾಜಕೀಯ ದೃಷ್ಟಿಯಿಂದ ಕಾಂಗ್ರೆಸ್-ಜೆಡಿಎಸ್ ಒಂದಾಗುವುದು ಸಾಧ್ಯವಿಲ್ಲ, ಕಾರಣ ಹಳೇ ಮೈಸೂರು ಭಾಗದ 7-8 ಜಿಲ್ಲೆಗಳಲ್ಲಿ ಕಾಂಗ್ರೆಸ್-ಜೆಡಿಎಸ್‍ಗಳೆ ನೇರ ಪ್ರತಿಸ್ಪರ್ಧಿಗಳು. ಈ ಎರಡೂ ಪಕ್ಷಗಳು ಒಂದಾದರೆ ಈ ಭಾಗದಲ್ಲಿ ಪಕ್ಷ ಸಂಘಟನೆ ಕಷ್ಟವಾಗಬಹುದು. ಇದರ ಲಾಭ ಬಿಜೆಪಿಗೆ ಆಗುತ್ತದೆ. ಹಾಗಾಗಿ, ಎರಡೂ ಪಕ್ಷಗಳ ಮರು ಮೈತ್ರಿ ಸಾಧ್ಯವೇ ಇಲ್ಲ ಎಂದು ಹೇಳಿದರೆ ಅದು ಉತ್ಪ್ರೇಕ್ಷೆ ಏನಲ್ಲ.

      ಈ ಎರಡೂ ಪಕ್ಷಗಳು ಮತ್ತೆ ಒಂದಾದರೆ ಇಲ್ಲೆಲ್ಲ ಬಿಜೆಪಿ ಬಲಗೊಳ್ಳಲು ಕಾರಣವಾಗುತ್ತದೆ. ಈ ಕಾರಣದಿಂದ ಕಾಂಗ್ರೆಸ್ ಅಂತೂ ಮರುಮೈತ್ರಿಗೆ ಒಪ್ಪಿಕೊಳ್ಳುವುದು ಕಷ್ಟ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.ಉಪಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಮೇಲುಗೈ ಸಾಧಿಸುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ, ಉಪಚುನಾವಣೆ ನಂತರ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ಕಷ್ಟ. ಹಾಗೆಯೆ ಜೆಡಿಎಸ್ – ಕಾಂಗ್ರೆಸ್ ಒಂದಾಗುವುದೂ ಕಷ್ಟ ಎಂದೆ ಹೇಳಲಾಗಿದೆ. ಏನೆ ಇರಲಿ ಎಲ್ಲದ್ದಕ್ಕೂ ಡಿ. 9ರ ಫಲಿತಾಂಶವೆ ಉತ್ತರ ನೀಡಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap