ರಾಮನಗರ
ಕರ್ನಾಟಕದಲ್ಲಿ ನಂದಿನ ಹಾಲಿನ ದರ ಹೆಚ್ಚಳ ಮಾಡುತ್ತೇವೆ. ಹೆಚ್ಚಳ ಮಾಡಿದ ಹಾಲಿನ ದರ ರೈತರಿಗೆ ಹೋಗಬೇಕು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ಘಾಟನೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಂದಿನ ಹಾಲಿನ ದರ ಹೆಚ್ಚಳ ಸಂಬಂಧ ಸಭೆ ಕರೆದು ಮಾತುಕತೆ ನಡೆಸಿ ಹಾಲಿನ ದರ ಹೆಚ್ಚಳ ಮಾಡೋಣ ಎಂದು ಹೇಳಿದ್ದಾರೆ. ಆ ಮೂಲಕ ಗ್ರಾಹಕರಿಗೆ ಮತ್ತೊಮ್ಮೆ ಶಾಕ್ ನೀಡಲು ಸರ್ಕಾರ ಮುಂದಾಗುತ್ತಿದೆ.
ನೀವೆಲ್ಲ ರೈತರ ಮಕ್ಕಳಿದ್ದಾರೆ, 3 ರೂಪಾಯಿ ಹೆಚ್ಚಳ ಮಾಡಿದರೆ ಅಥವಾ ಏನೇ ಹೆಚ್ಚು ಮಾಡಿದ್ರೂ ಲಬ್ಬೊ ಲಬ್ಬೋ ಅಂತಾ ಹೇಳುತ್ತಾರೆ. ನಾವು ರೈತರ ಮಕ್ಕಳು, ರೈತರು ಮಕ್ಕಳು ಎಂದು ಹೇಳುತ್ತಾರೆ. ಆದರೆ ರೈತರ ಮಕ್ಕಳಿಗೆ ನೀವೇನಾದ್ರೂ ಕೊಟ್ಟಿದ್ದೀರಾ? ಏನೂ ಮಾಡದೇ ನಾವು ರೈತರ ಮಕ್ಕಳು ಅಂತಾ ಹೇಳುತ್ತಾರೆ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ನಾನು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಕೆಂಪೇಗೌಡರ ಜಯಂತಿ ಆಚರಣೆ ಮಾಡಿದ್ದು ನಮ್ಮ ಸರ್ಕಾರ. ಬಹಳಷ್ಟು ಒಕ್ಕಲಿಗ ನಾಯಕರು ಅನಿಸಿಕೊಂಡವರು ಮಾಡಲಿಲ್ಲ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ಹಿಂದೆ ಸಿಎಂ ಆಗಿದ್ದಾಗ ಕೆಂಪೇಗೌಡ ಜಯಂತಿ ಆಚರಣೆಗೆ ಸೂಚನೆ ನೀಡಲಾಗಿತ್ತು. ಮಾಗಡಿ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ಕೊಡುತ್ತೇವೆ. ಬಾಲಕೃಷ್ಣಗೆ ಸಚಿವರಾಗುವ ಅರ್ಹತೆ ಇದೆ, ಇದರಲ್ಲಿ ಎರಡು ಮಾತಿಲ್ಲ. ಆದ್ರೆ ಮುಖ್ಯಮಂತ್ರಿ ಸೇರಿ 34 ಜನರಿಗೆ ಮಾತ್ರ ಅವಕಾಶ ಇದೆ ಎಂದಿದ್ದಾರೆ.
ಮಂತ್ರಿ ಆಗದಿದ್ದರೂ ಅಭಿವೃದ್ಧಿ ಕೆಲಸದಲ್ಲಿ ಮುಂಚೂಣಿಯಲ್ಲಿದ್ದಾರೆ. ಹೆಚ್.ಸಿ.ಬಾಲಕೃಷ್ಣ ಎಲ್ಲಾ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಗ್ಯಾರಂಟಿಗಳಿಂದ ಅಭಿವೃದ್ಧಿ ಕೆಲಸಗಳಿಗೆ ದುಡ್ಡಿಲ್ಲ ಅಂತಾ ಹೇಳುತ್ತಾರೆ. ಹಾಗಾದರೆ 120 ಕೋಟಿ ರೂ. ಅಭಿವೃದ್ಧಿ ಕೆಲಸ ಹೇಗೆ ಬಂತು? ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು ಹೊರವಲಯದಲ್ಲಿ ಇರುವ ಊರು ಮಾಗಡಿ. ಬಹಳ ಪ್ರಮುಖವಾದ ಪಟ್ಟಣ. ಕೆಂಪೇಗೌಡರ ರಾಜಧಾನಿ ಅಂತ ಕರೆಯುತ್ತಾರೆ. ಕೆಂಪೇಗೌಡರು ಬೆಂಗಳೂರು ಪಟ್ಟಣವನ್ನು ಕಟ್ಟಿದವರು. ಅವರು ಕಟ್ಟಿದ ರಾಜಧಾನಿ ಮಾಗಡಿಯಲ್ಲಿ ಅಭಿವೃದ್ಧಿ ಆಗಬೇಕು ಅನ್ನೋದು ಅಭಿಮತ ಇದೆ ಎಂದು ಹೇಳಿದ್ದಾರೆ.