ಶಾಸಕರ ಖರೀದಿಯಿಂದ ಉಪಚುನಾವಣೆ ಎದುರಿಸುವಂತಾಗಿದೆ : ಕುಮಾರಸ್ವಾಮಿ

ಬೆಂಗಳೂರು

     ಕುರಿ,ಮೇಕೆ,ಆಡುಗಳನ್ನು ಖರೀದಿಸಿದಂತೆ ಬಿಜೆಪಿ ಶಾಸಕರನ್ನು ಖರೀದಿಸಿದ ಪರಿಣಾಮವಾಗಿ ರಾಜ್ಯ ಉಪಚುನಾವಣೆಗಳನ್ನು ಎದುರಿಸುವಂತಾಗಿದ್ದು ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಎಂದು ಜೆಡಿಎಸ್ ನಾಯಕ,ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.

    ಉಪಚುನಾವಣೆಯ ಹಿನ್ನೆಲೆಯಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಸಿರುವ ಕುಮಾರಸ್ವಾಮಿ ಇಂದು ಕೂಡಾ ಬಿಜೆಪಿ ವಿರುದ್ಧ ಸತತ ವಾಗ್ಧಾಳಿ ನಡೆಸಿದ್ದಲ್ಲದೆ ಬಿಜೆಪಿಯ ಅನೈತಿಕ ರಾಜಕಾರಣಕ್ಕೆ ಜನ ಉತ್ತರ ನೀಡದಿದ್ದರೆ ಮುಂದಿನ ದಿನಗಳು ಕಷ್ಟಕರವಾಗಲಿವೆ ಎಂದರು.

     ನಾನು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗ ಒಂದು ದಿನವೂ ನೆಮ್ಮದಿಯಾಗಿರಲು ಬಿಜೆಪಿಯವರು ಬಿಡಲಿಲ್ಲ.ಮೇಲಿಂದ ಮೇಲೆ ಸರ್ಕಾರ ಬೀಳಿಸುವ ಯತ್ನ ಮಾಡುತ್ತಲೇ ಬಂದರು.ಕೊನೆಗೆ ಶಾಸಕರನ್ನು ಕುರಿ,ಮೇಕೆ,ಆಡುಗಳಂತೆ ಖರೀದಿ ಮಾಡಿ ಸರ್ಕಾರ ಬೀಳಿಸಿದರು ಎಂದರು.

    ಇವರು ಕೊಡುತ್ತಿದ್ದ ಕಿರುಕುಳವೂ ಸೇರಿದಂತೆ ಪ್ರತಿಯೊಂದು ಕಷ್ಟಗಳನ್ನು ರೈತರ ಸಾಲ ಮನ್ನಾ ಮಾಡಬೇಕು ಎಂಬ ಕಾರಣದಿಂದ ಸಹಿಸಿಕೊಂಡು ಬಂದೆ ಎಂದ ಅವರು,ಯಾವತ್ತೂ ಅಧಿಕಾರ ಶಾಶ್ವತವಲ್ಲ.ಮಾಡಿದ ಕೆಲಸ ಶಾಶ್ವತ ಎಂದರು.ಉಪಚುನಾವಣೆಯ ನಂತರ ಸರ್ಕಾರ ಬೀಳುತ್ತದೆ.ಮಧ್ಯಂತರ ಚುನಾವಣೆ ಎದುರಾಗುತ್ತದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು,ಮೊದಲು ಉಪಚುನಾವಣೆ ಮುಗಿಯಲಿ.ಫಲಿತಾಂಶ ಏನಾಗುತ್ತದೋ ನೋಡೋಣ.ಆನಂತರ ಮಧ್ಯಂತರ ಚುನಾವಣೆಯ ಮಾತು ಎಂದರು.

       ಇಷ್ಟಾದರೂ ಮಧ್ಯಂತರ ಚುನಾವಣೆ ಎದುರಾದರೆ ಅದನ್ನು ಎದುರಿಸಲು ಪಕ್ಷ ಸಿದ್ಧವಿದೆ ಎಂದ ಅವರು,ಅತಂತ್ರ ವಿಧಾನಸಭೆ ನಿರ್ಮಾಣವಾದ ನಂತರ ಮತ್ತು ಇವತ್ತಿನ ಅನೈತಿಕ ರಾಜಕಾರಣದ ನಂತರ ಪರಿಸ್ಥಿತಿ ಏನು ಬೇಕಾದರೂ ಆಗಬಹುದು ಅನ್ನುವಂತಿದೆ.ಈ ಹಿನ್ನೆಲೆಯಲ್ಲಿ ನಾವು ಉಪಚುನಾವಣೆಗೆ ಸಿದ್ಧರಾಗಿದ್ದೇವೆ ಎಂದ ಅವರು,ಸಧ್ಯದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತದಾರರನ್ನು ಕೋರಿ ಕೊಂಡರು.

     ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲ ಮಾಡಿಕೊಡಲು ಜೆಡಿಎಸ್ ಪಕ್ಷ ಕೊನೆ ಕ್ಷಣದಲ್ಲಿ ತನ್ನ ಕ್ಯಾಂಡಿಡೇಟ್ ಅನ್ನು ಬದಲಾವಣೆ ಮಾಡಿತು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು,ತಮ್ಮ ವಿರುದ್ಧ ಬಿಜೆಪಿ ಕ್ಯಾಂಡಿಡೇಟ್ ಸುಧಾಕರ್ ಏನೇ ಅಪಪ್ರಚಾರ ಮಾಡಿದರೂ ಜನ ಅದನ್ನು ನಂಬುವುದಿಲ್ಲ ಎಂದು ಹೇಳಿದರು.

      ಕ್ಷೇತ್ರದ ಜನರಿಗೆ ನನ್ನ ಮೇಲಿರುವ ವಿಶ್ವಾಸ ದೊಡ್ಡದು.ಅದನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದ ಅವರು ನನ್ನ ಸರ್ಕಾರ ಉರುಳಲು ಸುಧಾಕರ್ ಕೂಡಾ ಕಾರಣರು.ಅವರನ್ನು ತಿರಸ್ಕರಿಸಿ ಎಂದು ಜನರಿಗೆ ಮನವಿ ಮಾಡಿದರು.ಹಣಬಲದಿಂದ ಏನನ್ನಾದರೂ ಮಾಡಬಹುದು ಎಂಬ ಬಾವನೆಯಿಂದ ಇಷ್ಟ ಬಂದಂತೆ ನಡೆದುಕೊಳ್ಳುತ್ತಿರುವ ಇವರನ್ನು ಮೂಲೆಗೆ ಹಾಕಿ ಎಂದು ಹೇಳಿದ ಅವರು ಉಪಚುನಾವಣೆ ಬಿಜೆಪಿಗೆ ಮರೆಯಲಾಗದ ಪಾಠವಾಗಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ,ಸೇರಿದಂತೆ ಹಲ ನಾಯಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap