ಹೊಸಪೇಟೆ :
ಪ್ರಧಾನಿ ನರೇಂದ್ರ ಮೋಧಿ 5 ವರ್ಷಗಳ ಕಾಲ ಸುಳ್ಳು ಹೇಳುವುದರಲ್ಲೇ ಮಗ್ನರಾಗಿದ್ದಾರೆ. ಅವರು ಹೇಳಿದ ಯಾವ ಒಂದು ಭರವಸೆಯೂ ಈಡೇರಿಲ್ಲ. ಅವರು ಮನೆಗೆ ಹೋಗುವ ಕಾಲ ಸನ್ನಿಹಿತವಾಗಿದೆ. ಹೀಗಾಗಿ ಮುಂದಿನ 2019ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ನೇತೃತ್ವದ ಸರ್ಕಾರ ರಚನೆಯಾಗುವುದು ಖಚಿತ ಎಂದು ಸಂಸದ ಡಾ.ನಾಸಿರ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಪಟೇಲನಗರದ ಶಾಸಕ ಆನಂದಸಿಂಗ್ ಅವರ ಕಚೇರಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ವಿಶೇಷ ಕಾರ್ಯಕಾರಿಣಿ ಹಾಗು ಜನಸಂಪರ್ಕ ಅಭಿಯಾನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೆ ಮುಂಚೆ ಕಪ್ಪುಹಣ ವಾಪಾಸ್ ತರುತ್ತೇನೆ. ನಿರುದ್ಯೋಗಿಗಳಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಯಾವುದನ್ನು ಅವರು ಮಾಡಲಿಲ್ಲ. ಬದಲಾಗಿ ಬರೀ ಸುಳ್ಳು ಹೇಳುವುದರಲ್ಲೇ ಕಾಲ ಕಳೆದರು ಎಂದು ಕುಟುಕಿದರು.
ನೋಟ್ ಬ್ಯಾನ್ ಮಾಡಿ ಜನರಿಗೆ ಇನ್ನಿಲ್ಲದ ತೊಂದರೆ ಕೊಟ್ಟರು. ಇದರಿಂದ ಸಣ್ಣ ಸಣ್ಣ ಉದ್ಯಮಗಳಿಗೆ ಭಾರಿ ಹೊಡೆತ ಬಿತ್ತು. ಜನಸಾಮಾನ್ಯರಿಗೆ ಈ ಕೇಂದ್ರ ಸರ್ಕಾರದಿಂದ ಯಾವುದೇ ಅನುಕೂಲವಾಗಿಲ್ಲ. ಜನ ಭ್ರಮನಿರಸ ಹೊಂದಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಯುಪಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಕೇಂದ್ರ ಸರ್ಕಾರವು ರಫೆಲ್ ಯುದ್ದ ವಿಮಾನ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಸಿದೆ. ಬೆಂಗಳೂರಿನ ಎಚ್‍ಎಎಲ್ ಗೆ ಟೆಂಡರ್ ನೀಡಿದ್ದರೆ ಸಾವಿರಾರು ಇಂಜಿನಿಯರುಗಳಿಗೆ ಉದ್ಯೋಗವಕಾಶಗಳು ಸಿಗುತ್ತಿದ್ದವು. ಆದರೆ ಅದನ್ನು ಮಾಡದೇ ಅಂಬಾನಿಯವರಿಗೆ ನೀಡಿ ಅವರಿಗೆ ಅನುಕೂಲ ಮಾಡಿಕೊಟ್ಟರು. ಅಧಿಕಾರದ ಆಸೆಯಿಂದ ಮಾಜಿ ಸಿಎಂ ಯಡಿಯೂರಪ್ಪ ಖುದ್ದು ಆಪರೇಷನ್ ಕಮಲಕ್ಕೆ ಇಳಿದು ಸಿಕ್ಕಿಹಾಕಿಕೊಂಡಿದ್ದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.ಬಳಿಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಾಧನೆಗಳ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಕೆಪಿಸಿಸಿ ಮಹಿಳಾ ರಾಜ್ಯ ಕಾರ್ಯದರ್ಶಿ ಕವಿತಾಸಿಂಗ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿಂಕರ್ ರಫೀಕ್, ಅಮಾಜಿ ಹೇಮಣ್ಣ, ಮುಖಂಡರಾದ ಸಂದೀಪಸಿಂಗ್, ಇಮಾಮ್ ನಿಯಾಜಿ, ಅಯ್ಯಾಳಿ ತಿಮ್ಮಪ್ಪ, ಜಂಬಾನಳ್ಳಿ ಪರಶುರಾಮಪ್ಪ, ಫಯಿಮ್ ಭಾಷಾ, ಭಾಗ್ಯಲಕ್ಷ್ಮಿ ಭರಾಡೆ, ರಜಿಯಾ ಬೇಗಂ, ಗೀತಾಶಂಕರ್, ಎನ್.ವೆಂಕಟೇಶ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
