ಬಳ್ಳಾರಿ/ಬೆಂಗಳೂರು :
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‍ಆರ್‍ಸಿಯನ್ನು ಒಪ್ಪದವರು, ವಿರೋಧಿಸುವವರು ದೇಶದ್ರೋಹಿಗಳು ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.
ನಗರದ ಸತ್ಯನಾರಾಯಣ ಪೇಟೆಯಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಬುಧವಾರ ಏರ್ಪಡಿಸಲಾಗಿದ್ದ ರಂಗೋಲಿ ಬಿಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಸಿಎಎ ಬೆಂಬಲಿಸುವುದಾಗಿ ರಂಗೋಲಿಯಲ್ಲಿ ಚಿತ್ರಿಸಿದ್ದನ್ನು ವೀಕ್ಷಿಸಿದ ಶಾಸಕ ಜಿ.ಸೋಮಶೇಖರರೆಡ್ಡಿ, ಸಿಎಎ ಬೆಂಬಲಿಸಿ ರಂಗೋಲಿ ಹಾಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ನನ್ನ ಭಾರತ ದೇಶವನ್ನು ಪ್ರೀತಿಸುವವರಿಗೆ ನಾನು ಪ್ರಾಣಕೊಡುವೆ. ಆದರೆ, ದ್ವೇಷಿಸುವವರನ್ನು ಹತ್ತಿರವೂ ಸೇರಿಸಿಕೊಳ್ಳಲ್ಲ ಎಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರಿಗೆ ನೇರವಾಗಿ ಮತ್ತೊಮ್ಮೆ ಎಚ್ಚರಿಕೆ ನೀಡಿದರು.
ಸಿಎಎ ಬೆಂಬಲಿಸಿ ಜಾಗೃತಿ ಮೂಡಿಸಿದ ಬಹಿರಂಗ ಸಮಾವೇಶದಲ್ಲಿ ಪ್ರಚೋದನೆ ಭಾಷಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಜಿಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾವೆಲ್ಲ ನ್ಯಾಯಾಂಗಕ್ಕೆ ತಲೆ ಬಾಗಲೇಬೇಕು. ಪೆÇಲೀಸರ ತನಿಖೆಗೆ ಸಹಕರಿಸುತ್ತೇನೆ ಎಂದು ತಿಳಿಸಿದರು.
ಇನ್ನು ಭಟ್ಕಳದ ಮದರಸಾಕ್ಕೆ ಯಾರೋ ಕಿಡಿಗೇಡಿಗಳು ಬೆದರಿಕೆ ಪತ್ರವನ್ನು ಕಳುಹಿಸಿದ್ದಾರೆ. ಇದಕ್ಕೆ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್‍ಸಿಂಗ್ ಅವರ ಲೆಟರ್ ಹೆಡ್‍ನ್ನು ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆನಂದ್‍ಸಿಂಗ್ ಶೀಲ್, ಸಹಿಯಿರುವ ಲೆಟರ್‍ಹೆಡ್‍ನಲ್ಲಿ ಶಾಸಕ ಸೋಮಶೇಖರರೆಡ್ಡಿ ಪ್ರಚೋದನಾಕಾರಿ ಭಾಷಣದ ವಿಚಾರವನ್ನು ಉಲ್ಲೇಖಿಸಿ ಬೆದರಿಕೆ ಪತ್ರವನ್ನು ಕಳುಹಿಸಲಾಗಿದೆ. ಈ ಕುರಿತು ನನಗೂ ಮಾಹಿತಿ ತಿಳಿದು ಬಂದಿದೆ. ಯಾರೋ ಕಿಡಿಗೇಡಿಗಳು, ದೇಶದ್ರೋಹಿಗಳು ಈ ಕೆಲಸ ಮಾಡಿದ್ದಾರೆ. ಇಂಥವರ ವಿರುದ್ದ ನಾನೇನು ದೂರು ನೀಡುವುದಿಲ್ಲ, ಪೆÇಲೀಸರೆ ತನಿಖೆ ನಡೆಸುತ್ತಾರೆ ಎಂದು ತಿಳಿಸಿದ್ದಾರೆ ಎಂದರು.
ಶಾಸಕ ಆನಂದಸಿಂಗ್ ಲೇಟರ್ ಹೆಡ್, ಸೀಲ್ ಸಿಗ್ನೇಚರ್ ಇದೆ. ವಿಳಾಸ ಮಾತ್ರ ನನ್ನದಿದೆ ಎಂದ ಶಾಸಕ ಸೋಮಶೇಖರರೆಡ್ಡಿ, ಈ ಕುರಿತು ಪೊಲೀಸರು ಸುಮೋಟೋ ಪ್ರಕರಣ ದಾಖಲು ಮಾಡುತ್ತಾರೆ. ಲೆಟರ್ ಹೆಡ್‍ನಲ್ಲಿ ಆನಂದ್‍ಸಿಂಗ್ ಶೀಲ್ ಸಹಿಯಿರುವುದರಿಂದ ಅವರೇ ಪ್ರತಿಕ್ರಿಯಿಸಬೇಕು. ಸಂಕ್ರಾಂತಿ ಹಬ್ಬದ ನಿಮಿತ್ತ ರಂಗೋಲಿಯಲ್ಲಿ ಸಿಎಎ ಬರೆದಿರೋದು ಸಂತಸವಾಗಿದೆ ಎಂದರು.ಈ ವೇಳೆ ಪಾಲಿಕೆ ಮಾಜಿ ಸದಸ್ಯ ಕೆ.ಎಸ್.ದಿವಾಕರ್, ಬಿಜೆಪಿ ಯುವ ಮುಖಂಡ ಕೆ.ಎಸ್.ಅಶೋಕ್ ಕುಮಾರ್, ಮಹಿಳಾ ಮುಖಂಡರಾದ ಸುಮಾರೆಡ್ಡಿ, ಸ್ಥಳೀಯ ಯುವಕರಾದ ಗಿರಿಪ್ರಸಾದ್ ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








