ಮೂರನೆ ಹಂತದ ಮತದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ

ಬೆಂಗಳೂರು

       ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮಂಗಳವಾರ ನಡೆಯುವ ಮತದಾನವನ್ನು ಮುಕ್ತ ಹಾಗೂ ಶಾಂತರೀತಿಯಾಗಿ ನಡೆಸಲು ಅಭೂತಪೂರ್ವ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ .

      ರಾಜ್ಯದ ಚಿಕ್ಕೋಡಿ, ಬೆಳಗಾವಿ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಹಾವೇರಿ, ವಿಜಯಪುರ, ಧಾರವಾಡ, ಕಲಬುರ್ಗಿ, ಉತ್ತರ ಕನ್ನಡ, ರಾಯಚೂರು, ದಾವಣಗೆರೆ, ಬೀದರ್ ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು ಕೇಂದರ ಮೀಸಲು ಪಡೆ,ರಾಜ್ಯ ಮೀಸಲುಪಡೆ,ಜಿಲ್ಲಾ ಸಶಸ್ತ್ರದಳ,ಗೃಹರಕ್ಷಕದಳ,ಅರಣ್ಯ ರಕ್ಷಕರು ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಮಂದಿ ಭದ್ರತೆಗೆ ನಿಯೋಜಿಸಲಾಗಿದೆ.

     ಭದ್ರತೆ 34,548 ಮಂದಿ ಪೊಲೀಸ್ ಸಿಬ್ಬಂದಿ ಇರಲಿದ್ದು 14 ಕ್ಷೇತ್ರಗಳಲ್ಲಿ 28,022 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 5,605 ಮತಗಟ್ಟೆಗಳನ್ನು ಸೂಕ್ಷ್ಮಮತಗಟ್ಟೆಗಳಾಗಿದ್ದರೆ, 1026 ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್‍ಪಂತ್ ತಿಳಿಸಿದ್ದಾರೆ.

      ಮಂಗಳವಾರ ಮತದಾನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರವರೆಗೂ ನಡೆಯಲಿದೆ. ನಾಳೆ ಒಟ್ಟು 2.443 ಕೋಟಿ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 57 ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಈ ಕ್ಷೇತ್ರದಲ್ಲಿ 4 ವಿವಿಎಂಗಳನ್ನು ಬಳಕೆ ಮಾಡಲಾಗುತ್ತಿದೆ.

        ನಾಳಿನ ಮತದಾನದ ನಂತರ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಪ್ರಕ್ರಿಯೆಗಳು ಸಂಪೂರ್ಣಗೊಳ್ಳಲಿದ್ದು, ಮತ ಎಣಿಕೆಯಷ್ಟೇ ಬಾಕಿ ಉಳಿಯಲಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ ಏ. 18 ರಂದು 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಉಳಿದ 14 ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ.

        ನಾಳೆ ನಡೆಯುವ ಮತದಾನದಲ್ಲಿ ಲೋಕಸಭೆಯ ಕಾಂಗ್ರೆಸ್‍ನ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ. ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಕಾಂಗ್ರೆಸ್‍ನ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ, ಬಿಜೆಪಿಯ ಪ್ರಹ್ಲಾದ್ ಜೋಷಿ ಸೇರಿದಂತೆ ಕಣದಲ್ಲಿರುವ 237 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.ನಾಳೆ ನಡೆಯುವ 14 ಕ್ಷೇತ್ರದ ಚುನಾವಣೆಯಲ್ಲಿ ಕಣದಲ್ಲಿರುವ 237 ಅಭ್ಯರ್ಥಿಗಳ ಪೈಕಿ 227 ಮಂದಿ ಪುರುಷರು ಮತ್ತು 10 ಮಹಿಳಾ ಅಭ್ಯರ್ಥಿಗಳು ಕಣದಲಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ