ಕಳೆದ ವರ್ಷ ಲಕ್ಷ ದಾಟಿದ ಹೊರರೋಗಿಗಳ ಸಂಖ್ಯೆ
ತುಮಕೂರು
ವಿಶೇಷ ಲೇಖನ :ಆರ್.ಎಸ್.ಅಯ್ಯರ್
ತುಮಕೂರು ಜಿಲ್ಲೆಯಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆ/ಚಿಕಿತ್ಸಾಲಯಗಳಲ್ಲಿ ಕಳೆದ ವರ್ಷ ಅಂದರೆ 2018-19 ನೇ ಸಾಲಿನಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದವರ ಸಂಖ್ಯೆ ಒಂದು ಲಕ್ಷವನ್ನು ದಾಟಿದೆ. ಇದರಲ್ಲಿ ತಿಪಟೂರಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದವರ ಸಂಖ್ಯೆ ಅತ್ಯಧಿಕವಾಗಿದ್ದು, ಜಿಲ್ಲೆಯಲ್ಲೇ ತಿಪಟೂರು ಮುಂಚೂಣಿಯಲ್ಲಿದೆಯೆಂಬ ಕುತೂಹಲದ ಸಂಗತಿ ಬೆಳಕಿಗೆ ಬಂದಿದೆ.
2018-19 ನೇ ಸಾಲಿನಲ್ಲಿ ಜಿಲ್ಲೆಯ 4 ಆಯುರ್ವೇದ ಆಸ್ಪತ್ರೆಗಳಲ್ಲಿ 23,773 ಜನರು; 1 ಯುನಾನಿ ಆಸ್ಪತ್ರೆಯಲ್ಲಿ 4245 ಜನರು; 25 ಆಯುರ್ವೇದ ಚಿಕಿತ್ಸಾಲಯಗಳಲ್ಲಿ 72,397 ಜನರು; 1 ಯುನಾನಿ ಚಿಕಿತ್ಸಾಲಯದಲ್ಲಿ 3,084 ಜನರು; 1 ಹೋಮಿಯೋಪತಿ ಚಿಕಿತ್ಸಾಲಯದಲ್ಲಿ 891 ಜನರು, 1 ಪ್ರಕೃತಿ ಚಿಕಿತ್ಸಾಲಯದಲ್ಲಿ 34 ಜನರು, ಮಧುಗಿರಿಯಲ್ಲಿರುವ ತಾಲ್ಲೂಕು ಆಯುಷ್ ಘಟಕದಲ್ಲಿ 3,031 ಜನರು -ಹೀಗೆ ಒಟ್ಟು 31 ವಿವಿಧ ಆಯುರ್ವೇದ ಕೇಂದ್ರಗಳಿಂದ ಒಟ್ಟು 1,07,455 ಜನರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. 1,352 ಜನರು ಪಂಚಕರ್ಮ ಚಿಕಿತ್ಸೆಗೊಳಗಾಗಿದ್ದಾರೆ.
ಈ ಪೈಕಿ ತಿಪಟೂರಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ 11,747 ಜನರು ಹೊರರೋಗಿಗಳಾಗಿ ಹಾಗೂ 801 ಜನರು ಪಂಚಕರ್ಮ ಚಿಕಿತ್ಸೆ ಪಡೆದಿದ್ದು, ಈ ಸಂಖ್ಯೆಯು ಇಡೀ ಜಿಲ್ಲೆಯಲ್ಲೇ ಮೊದಲ ಸ್ಥಾನವೆಂಬುದು ಕುತೂಹಲ ಉಂಟುಮಾಡಿದೆ.
ಎಲ್ಲೆಲ್ಲಿ ಆಸ್ಪತ್ರೆಗಳಿವೆ?
ಆಯುಷ್ ಇಲಾಖೆಯ ಅಂಕಿ ಅಂಶಗಳ ಪ್ರಕಾರ ತುಮಕೂರು ನಗರ, ತಿಪಟೂರು, ಚಿಕ್ಕನಾಯಕನಹಳ್ಳಿ ಮತ್ತು ಮಂಚಲದೊರೆ-ಈ ನಾಲ್ಕು ಸ್ಥಳಗಳಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳಿವೆ.
ತುಮಕೂರು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಸಂಯುಕ್ತ ಆಸ್ಪತ್ರೆ ಇದೆ. ಇಲ್ಲಿ 7,840 ಜನರು ಹೊರರೋಗಿಗಳಾಗಿ ಆಯುರ್ವೇದ ಚಿಕಿತ್ಸೆಯನ್ನು ಹಾಗೂ 4,245 ಜನರು ಯುನಾನಿ ಚಿಕಿತ್ಸೆಯನ್ನು ಮತ್ತು 275 ಜನರು ಪಂಚಕರ್ಮ ಚಿಕಿತ್ಸೆಯನ್ನು ಪಡೆದಿದ್ದಾರೆ. ತಿಪಟೂರಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ 11,747 ಜನರು ಹೊರರೋಗಿ ಗಳಾಗಿ ಹಾಗೂ 801 ಜನರು ಪಂಚಕರ್ಮ ಚಿಕಿತ್ಸೆ ಪಡೆದಿದ್ದಾರೆ. ಚಿಕ್ಕನಾಯಕನಹಳ್ಳಿಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ 2,392 ಜನರು ಹೊರರೋಗಿಗಳಾಗಿ ಹಾಗೂ 276 ಜನರು ಪಂಚಕರ್ಮ ಚಿಕಿತ್ಸೆ ಪಡೆದಿದ್ದಾರೆ. ಗುಬ್ಬಿ ತಾಲ್ಲೂಕು ಮಂಚಲದೊರೆಯಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ 1,794 ಜನರು ಹೊರರೋಗಿಗಳಾಗಿ ಕಳೆದ ಸಾಲಿನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಿವೆ. ಅಲ್ಲಿ ಚಿಕಿತ್ಸೆ ಪಡೆದವರ ವಿವರ ಇಲ್ಲಿದೆ:-
ತುಮಕೂರು ತಾಲ್ಲೂಕಿನ ಹಿರೇಹಳ್ಳಿ- 4,352, ಹೊನಸಿಗೆರೆ-6,005, ಸೀತಕಲ್ಲು- 1,115; ಕೊರಟಗೆರೆ ತಾಲ್ಲೂಕಿನ ದುಡ್ಡನಹಳ್ಳಿ- 2,617; ಕುಣಿಗಲ್ ತಾಲ್ಲೂಕಿನ ದೊಡ್ಡಮಧುರೆ- 3,781; ಗುಬ್ಬಿ ತಾಲ್ಲೂಕಿನ ಹರದಗೆರೆ- 2,890, ಬೆಟ್ಟದಹಳ್ಳಿ- 2,564, ಬಿ.ಕೋಡಿಹಳ್ಳಿ- 5,728, ದೊಡ್ಡಗುಣಿ- 2,786; ಶಿರಾ ನಗರ- 4,444 (ಯುನಾನಿ-3,084); ಶಿರಾ ತಾಲ್ಲೂಕಿನ ಮಾಯಸಂದ್ರ- 4,041, ಶಿಡ್ಲೇಕೋಣ- 3,152; ಮಧುಗಿರಿ ತಾಲ್ಲೂಕಿನ ಚಿಕ್ಕದಾಳವಟ್ಟ- 1,433, ಗರಣಿ- 3,634, ಸಜ್ಜೆಹೊಸಹಳ್ಳಿ- 3,868; ತಿಪಟೂರು ತಾಲ್ಲೂಕಿನ ಕಂಪಾರಹಳ್ಳಿ-1,720, ರಾಮಚಂದ್ರಾಪುರ- 3,226, ಗಂಗನಘಟ್ಟ-990, ಬುರುಡೇ ಘಟ್ಟ- 1,436, ಕೊನೇಹಳ್ಳಿ-4,246; ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ- 2,570, ಅರೆಮಲ್ಲೇನಹಳ್ಳಿ-1,970; ಪಾವಗಡ ತಾಲ್ಲೂಕಿನ ಚೆನ್ನಕೇಶವಪುರ- 1,210, ದೊಮ್ಮತಮರಿ- 1,100 ಜನರು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಮಧುಗಿರಿಯಲ್ಲಿರುವ ತಾಲ್ಲೂಕು ಆಯುರ್ವೇದ ಆಯಷ್ ಘಟಕದಲ್ಲಿ 3,031 ಜನರು ಹೊರರೋಗಿಗಳಾಗಿ ಚಿಕಿತ್ಸೆಯನ್ನು ಪಡೆದಿದ್ದಾರೆಂಬುದನ್ನು ಆಯುಷ್ ಇಲಾಖೆಯ ಅಂಕಿ ಅಂಶಗಳು ವಿವರಿಸುತ್ತವೆ.
ಹೋಮಿಯೋ- ಪ್ರಕೃತಿ ಚಿಕಿತ್ಸೆ
ಮಧುಗಿರಿ ತಾಲ್ಲೂಕಿನ ಕೊಂಡವಾಡಿಯಲ್ಲಿ ಪ್ರತ್ಯೇಕವಾಗಿ ಒಂದು ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯವೇ ಇದ್ದು, ಇಲ್ಲಿ 891 ಜನರು ಚಿಕಿತ್ಸೆ ಪಡೆದಿದ್ದಾರೆ. ಇನ್ನು ಮತ್ತೊಂದು ಮುಖ್ಯಾಂಶವೆಂದರೆ ಕೊರಟಗೆರೆ ತಾಲ್ಲೂಕು ಸಿದ್ಧರಬೆಟ್ಟದಲ್ಲಿ ಸರ್ಕಾರಿ ಪ್ರಕೃತಿ ಚಿಕಿತ್ಸಾಲಯ ಇದೆಯೆಂಬುದು ಹಾಗೂ ಇಲ್ಲಿ ಕಳೆದ ಸಾಲಿನಲ್ಲಿ 34 ಜನರು ಚಿಕಿತ್ಸಾ ಸೌಲಭ್ಯ ಪಡೆದುಕೊಂಡಿದ್ದಾರೆಂಬುದು ಗಮನಾರ್ಹ ಸಂಗತಿ.
ಹೀಗೆ ತುಮಕೂರು ಜಿಲ್ಲೆಯಲ್ಲಿ ಸರ್ಕಾರಿ ಆಯುರ್ವೇದ, ಯುನಾನಿ, ಹೋಮಿಯೋಪತಿ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರಗಳನ್ನು ಒಂದು ಲಕ್ಷಕ್ಕೂ ಮೀರಿದ ರೋಗಿಗಳು ಸದ್ಬಳಕೆ ಮಾಡಿಕೊಂಡಿರುವುದು ವ್ಯಕ್ತವಾಗಿದೆ.
26 ಲಕ್ಷ ರೂ.ಗಳ ಔಷಧಿ
ಆಯುಷ್ ಇಲಾಖೆಗೆ ಸೇರಿದ ಈ ಎಲ್ಲ ಆಸ್ಪತ್ರೆ/ಚಿಕಿತ್ಸಾ ಕೇಂದ್ರಗಳಿಗೆ 2018-19 ನೇ ಸಾಲಿನಲ್ಲಿ ಸರ್ಕಾರದಿಂದ 26,33,000 ರೂ. ಮೊತ್ತದಷ್ಟು ಔಷಧಿಗಳು ಪೂರೈಕೆಗೊಂಡಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ