ಹಾವೇರಿ:
ಹಜರತ್ ಟಿಪ್ಪುಸುಲ್ತಾನ್ ಅವರ ಜಯಂತಿಯನ್ನು ನವಂಬರ್ 10 ರಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ ಜರುಗಿದ ಟಿಪ್ಪುಸುಲ್ತಾನ್ ಜಯಂತಿ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಮಾತನಾಡಿ, ಟಿಪ್ಪುಸುಲ್ತಾನ್ ಅವರು ಕೇವಲ ಒಂದು ಧರ್ಮ ಹಾಗೂ ಒಂದು ಜಾತಿಗೆ ಸೀಮಿತವಾಗಿಲ್ಲ. ಇಡಿ ಮಾನವ ಸಮುದಾಯಕ್ಕೆ ಸೇರಿದವರು. ಎಲ್ಲ ಧರ್ಮ, ಸಮಾಜದವರು ಸೇರಿ ಅತ್ಯಂತ ಅರ್ಥಪೂರ್ಣವಾಗಿ ಟಿಪ್ಪುಸುಲ್ತಾನ ಅವರ ಜಯಂತಿಯನ್ನು ಆಯೋಜಿಸಲು ಕಾರ್ಯಕ್ರಮ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಹುಭಾಷಾಯ ಪ್ರಾವಿಣ್ಯತೆ ಹೊಂದಿದ ಸಾಂಸ್ಕತಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ವಿಶಿಷ್ಟ ಕೊಡುಗೆ ನೀಡಿರುವ ಟಿಪ್ಪುಸುಲ್ತಾನ್ ಅವರ ವಿಚಾರಧಾರೆಗಳನ್ನು ಯುವ ವಿದ್ಯಾರ್ಥಿ ಸಮೂಹಕ್ಕೆ ತಿಳಿಸುವ ನಿಟ್ಟಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ, ಪ್ರಬಂಧಸ್ಪರ್ಧೆ ಒಳಗೊಂಡಂತೆ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ನವಂಬರ್ 10ರಂದು ಬೆಳಿಗ್ಗೆ 11 ಗಂಟೆಗೆ ನಗರದ ಗುರುಭವನದಲ್ಲಿ ಟಿಪ್ಪುಸುಲ್ತಾನ್ ಅವರ ಜಯಂತಿ ಕಾರ್ಯಕ್ರಮವನ್ನು ನಡೆಸಲು ಸಭೆಯಲ್ಲಿ ಹಾಜರಿದ್ದ ಸಮಾಜದ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ವಿವಿಧ ಜನಪ್ರತಿನಿಧಿಗಳನ್ನು ಆಹ್ವಾನಿಸಲು ನಿರ್ಧರಿಸಲಾಯಿತು ಹಾಗೂ ಸರ್ವ ಸಮಾಜದ ಮುಖಂಡರನ್ನು, ಗಣ್ಯರನ್ನು ಆಹ್ವಾನಿಸಲು ನಿರ್ಧರಿಸಲಾಯಿತು.
ಸಮಾರಂಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಪ್ರಶಂಶಾ ಪತ್ರ ನೀಡುವ ಮೂಲಕ ಅವರ ಸಾಧನೆಯನ್ನು ಗೌರವಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಹಾವೇರಿ ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೀರಜಾದೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿ ಗೋಪಾಲ ಲಮಾಣಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಶಕೀರ್ ಅಹ್ಮದ್, ತಹಶೀಲ್ದಾರ ಶಿವಕುಮಾರ, ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷರಾದ ಜವಳಿ, ಸಮಾಜದ ಮುಖಂಡರಾದ ಅಬ್ದುಲ್ ರಜಾಕ್ ಸಾಜಮುಲ್ಲಾ, ಮೊಮಿನಸಾಬ ಚೋಪದಾರ, ಬಾಬುಸಾಬ ಮೋಮಿನಗಾರ, ಮಜೀದಸಾಬ ಮೇಗಳಮನಿ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ