ಚಿತ್ರದುರ್ಗ:
ಮೈಸೂರು ಹುಲಿ ಟಿಪ್ಪುಸುಲ್ತಾನ್‍ರವರ 221 ನೇ ಹುತಾತ್ಮರ ದಿನಾಚರಣೆಯನ್ನು ನಗರದ ವಿ.ಪಿ.ಬಡಾವಣೆಯಲ್ಲಿರುವ ಮಾನಸಿಕ ರೋಗಿಗಳ ಹಗಲು ಪುನಶ್ಚೇತನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯಿಂದ ಶನಿವಾರ ಆಚರಿಸಲಾಯಿತು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ ದೇಶದ ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಿ ಪ್ರಾಣತ್ಯಾಗ ಮಾಡಿದ ಟಿಪ್ಪುಸುಲ್ತಾನ್‍ರವರ 221 ನೇ ಹುತಾತ್ಮರ ದಿನಾಚರಣೆಯನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ರಾಜ್ಯ ಸರ್ಕಾರ ಸದ್ಯದಲ್ಲಿಯೇ ಟಿಪ್ಪು ಪ್ರಾಧಿಕಾರ ಹಾಗೂ ಸಂಶೋಧನಾ ಕೇಂದ್ರ ಆರಂಭಿಸುವುದಾಗಿ ಭರವಸೆ ನೀಡಿದೆ. ಟಿಪ್ಪುಸುಲ್ತಾನ್ ವಿಚಾರ ಧಾರೆಗಳನ್ನು ಇಂದಿನ ಯುವಪೀಳಿಗೆಗೆ ತಿಳಿಸಬೇಕಿದೆ ಎಂದರು.
ನಗರಸಭೆ ಮಾಜಿ ಉಪಾಧ್ಯಕ್ಷ ಎನ್.ಬಿ.ಟಿ.ಜಮೀರ್ ಮಾತನಾಡಿ ದೇಶಭಕ್ತ ಕನ್ನಡಪ್ರೇಮಿ ಟಿಪ್ಪುಸುಲ್ತಾನ್ ಪಟ್ಟಾಭಿಷೇಕದ ದಿನವೇ ಹುತಾತ್ಮರಾಗಿರುವುದು ವಿಶೇಷ. ಶ್ರೇಷ್ಟ ನಾಟಕಕಾರ ವಿಲಿಯಂ ಶೇಕ್ಸ್‍ಪಿಯರ್ ಕೂಡ ಹುಟ್ಟಿದ ದಿನದಂದೆ ಪ್ರಾಣ ಬಿಟ್ಟರು. ಟಿಪ್ಪು ಕೇವಲ ಮುಸ್ಲಿಂ ಜನಾಂಗಕ್ಕೆ ಮಾತ್ರ ಸೀಮಿತವಲ್ಲ.
ಎಲ್ಲಾ ಜನಾಂಗದ ಹಿತಕಾಪಾಡಿಕೊಂಡು ಬಂದರು. ಶೃಂಗೇರಿ ಶಾರದಾಂಭೆಯ ಪರಮ ಭಕ್ತನಾಗಿದ್ದ ಟಿಪ್ಪುಸುಲ್ತಾನ್ ರಾಜ್ಯದಲ್ಲಿ ಸಾಕಷ್ಟು ದೇವಸ್ಥಾನಗಳನ್ನು ಕಟ್ಟಿಸಿ ದೇಣಿಗೆ ನೀಡಿದ್ದಾರೆ. ಕನ್ನಡ ವಿರೋಧಿಯಾಗಿದ್ದರೆ ದೇವಸ್ಥಾನಗಳನ್ನು ಏಕೆ ಕಟ್ಟಿಸುತ್ತಿದ್ದರು ಎಂದು ಟಿಪ್ಪುವಿರೋಧಿಗಳು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಬ್ರಿಟೀಷರ ವಿರುದ್ದ ಹೋರಾಡುವಾಗ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಿಟ್ಟು ನಾಡಿಗಾಗಿ ಪ್ರಾಣಬಿಟ್ಟ ಮಹಾನ್‍ಧೀರ. ಅಂತಹ ದೇಶಭಕ್ತ ಟಿಪ್ಪುವಿನ ತತ್ವ, ಸಿದ್ದಾಂತ, ಆಚಾರ, ವಿಚಾರಗಳನ್ನು ಎಲ್ಲರೂ ಪಾಲಿಸಬೇಕು ಎಂದು ಮನವಿ ಮಾಡಿದರು.ನ್ಯಾಯವಾದಿ ಮಹಮದ್ ಶಂಷೀರ್‍ಆಲಿ, ಡೇಕೇರ್ ಸೆಂಟರ್‍ನ ಕಾರ್ಯದರ್ಶಿ ಸೂರ್ಯನಾರಾಯಣ್ ಈ ಸಂದರ್ಭದಲ್ಲಿ ಹಾಜರಿದ್ದರು.