ತಿಪಟೂರು
ಏನೂ ಇಲ್ಲದ ಕೆಲವು ಜಿಲ್ಲೆಗಳನ್ನು ಮಾಡುವ ಬದಲು ಸಕಲ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಮತ್ತು ಕಂದಾಯದಲ್ಲಿ ಹೆಚ್ಚಿನ ಪಾಲನ್ನು ರಾಜ್ಯಕ್ಕೆ ಕೊಡುತ್ತಿರುವ ತಿಪಟೂರನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಮುಖ್ಯಮಂತ್ರಿ ಯನ್ನು ಮಾಜಿ ಶಾಸಕ ಕೆ.ಷಡಕ್ಷರಿ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ವರ್ಷಗಳ ಬೇಡಿಕೆಯಾದಂತಹ ತಿಪಟೂರು ಜಿಲ್ಲಾ ಕೇಂದ್ರವನ್ನು ಮಾಡಲು ಹಲವು ಬಾರಿ ಮನವಿಯನ್ನು ಮಾಡಿದ್ದು, ಜೊತೆಗೆ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಹೊಂದಿದೆ. ತಿಪಟೂರು ಕೇಂದ್ರವೂ ಸುಸಜ್ಜಿತ ಮೂಲ ಸೌಕರ್ಯಗಳನ್ನು ಹೊಂದಿದ್ದು, ಜಿಲ್ಲಾ ಕೇಂದ್ರವನ್ನಾಗಿಸಲು ಅನೇಕ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ.
ತಿಪಟೂರು ಜಿಲ್ಲಾ ಕೇಂದ್ರವಾಗುವುದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ಅಧಿಕ ಖರ್ಚು ಆಗುವುದಿಲ್ಲ. ಈಗಾಗಲೇ ಮಿನಿ ವಿಧಾನಸೌಧ, ನಗರಸಭೆ ಕಟ್ಟಡ, ಆರ್‍ಟಿಓ ಕಚೇರಿ ಜೊತೆಗೆ ಜಿಲ್ಲೆ ಆಗಲು ಅವಶ್ಯಕವಿರುವಂತಹ ಕಾರ್ಯಗಳನ್ನು ಈಗಾಗಲೆ ನಾನು ಮಾಡಿದ್ದು, ಇನ್ನೂ ಕೆಲವು ಕಾಮಗಾರಿಗಳನ್ನು ಮಾಡುವ ಅಗತ್ಯವಿದೆ. ತಿಪಟೂರಿನ ಗಡಿ ಭಾಗದಿಂದ ತುಮಕೂರು ಜಿಲ್ಲಾ ಕೇಂದ್ರಕ್ಕೆ ತೆರಳಲು ನೂರಕ್ಕೂ ಅಧಿಕ ಕಿ.ಮೀ. ಕ್ರಮಿಸಬೇಕಾಗಿದೆ. ಅದ್ದರಿಂದ ತಿಪಟೂರನ್ನು ಜಿಲ್ಲೆ ಮಾಡುವಂತೆ ತಿಳಿಸಿದರು.
ರಾಜ್ಯ ಸರ್ಕಾರಕ್ಕೆ ಅಭಿನಂದನೆ :
ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂಭವಿಸಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಭೂ-ಅಭಿವೃದ್ಧಿ ಬ್ಯಾಂಕ್‍ನಿಂದ ರೈತರಿಗೆ ನೀಡಿರುವ ಸಾಲವನ್ನು ವಸೂಲಾತಿಗೆ ಪ್ರಾರಂಭಿಸಿದಾಗ ಸರ್ಕಾರ ಎಚ್ಚೆತ್ತು ಗಮನ ನೀಡಿತು. ರೈತರಿಗೆ ಸಾಲವನ್ನು ನಬಾರ್ಡ್‍ನಿಂದ ನೀಡಿದ್ದು ಪುನಃ ವಾಪಸ್ಸು ಕಟ್ಟಬೇಕಿತ್ತು. ಆದ್ದರಿಂದ ಸರ್ಕಾರ ಮುಂದೆ ಬಂದು 466 ಕೋಟಿ ಹಣವನ್ನು ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡಲು ಹಣ ಮಂಜೂರಾತಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದು, ಅಭಿನಂದನಾಪೂರ್ವವಾದದ್ದು ಎಂದರು.
ತಾರತಮ್ಯ ಮಾಡದೆ ಸೂಕ್ತ ಪರಿಹಾರ ನೀಡಿ: ಕಾಮಗಾರಿ ಬೇಗ ಪೂರ್ಣಗೊಳಿಸಿ
ಎತ್ತಿನಹೊಳೆ ಕಾಮಗಾರಿ ಯೋಜನೆ ರೈತರಿಗೆ ನೀಡುವಂತ ಪರಿಹಾರದ ಧನದಲ್ಲಿ ವ್ಯತ್ಯಯವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಇದರ ಬಗ್ಗೆ ಗಮನ ಹರಿಸಿ ರೈತರಿಗೆ ಸೂಕ್ತ ಪರಿಹಾರ ಹಣ ದೊರಕುವಂತಾಗಲಿ. ಜೊತೆಗೆ ಸರಿಯಾದ ರೀತಿಯಲ್ಲಿ ಜಿಲ್ಲಾ ಪಂಚಾಯತಿಯ ವ್ಯಾಪ್ತಿಯಲ್ಲಿರುವ ಕೆರೆಗಳಿಗೆ ನೀರನ್ನು ಬಿಡುವ ಅಗತ್ಯವಿದೆ. ಬೈಪಾಸ್ ವಿಚಾರವಾಗಿ ಅನೇಕರು ಮಾತನಾಡುತ್ತಿದ್ದು, ಅಲ್ಲಿನ ಅಲೈನ್‍ಮೆಂಟ್ ಬಗ್ಗೆ ನನಗೆ ಏನೂ ಮಾಹಿತಿ ಇಲ್ಲ. ಅದು ವೈಮಾನಿಕ ಸಮೀಕ್ಷೆ ಮಾಡಿದ್ದು ನನ್ನ ಜಮೀನನಿನಲ್ಲಿ ಹೋದರೆ ನನಗೂ ಅನುಕೂಲವಾಗುತ್ತದೆ. ನಾನು ಎಲ್ಲಿಯೂ ಅದರ ಬಗ್ಗೆ ಒತ್ತಡವನ್ನು ತಂದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಡೆನೂರು ಕಾಂತರಾಜು, ತಾ.ಪಂ.ಅಧ್ಯಕ್ಷ ಜಿ.ಎಸ್.ಶಿವಸ್ವಾಮಿ, ಮಾಜಿ ಅಧ್ಯಕ್ಷ ಎನ್.ಎಂ.ಸುರೇಶ್, ಸದಸ್ಯ ಎಂ.ಡಿ.ರವಿಕುಮಾರ್, ಎ.ಪಿ.ಎಂ.ಸಿ ಅಧ್ಯಕ್ಷ ಲಿಂಗರಾಜು, ಕೆ.ಪಿ.ಸಿ.ಸಿ ಹಾಗೂ ನಗರಸಭಾ ಸದಸ್ಯ ಯೋಗೀಶ್ ಸೇರಿದಂತೆ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
