ಮಧ್ಯವರ್ತಿ ಹಾವಳಿ ತಪ್ಪಿಸಲು ನಾಗರಿಕ ಮಿತ್ರ .!

ದಾವಣಗೆರೆ

      ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲಿಕ್ಕಾಗಿ, ನಾಗರಿಕ ಮಿತ್ರ ಡೆಸ್ಕ್ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

     ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಫಲಾನುಭವಿಗಳಿಗೆ ತಲುಪಿಸುವಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕೆಂಬುದಾಗಿ ತುಡಿಯುತ್ತಿರುವ ವ್ಯಕ್ತಿಗಳು ಹಾಗೂ ನಿವೃತ್ತ ನೌಕರರನ್ನು ಕರೆದುಕೊಂಡು ಬಂದು, ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ನಾಗರಿಕ ಮಿತ್ರ ಡೆಸ್ಕ್ ಸ್ಥಾಪಿಸಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ಚಿಂತನೆ ಇದೆ ಎಂದು ಹೇಳಿದರು.

     ನಾಗರಿಕ ಮಿತ್ರ ಡೆಸ್ಕ್‍ನಲ್ಲಿರುವವರೇ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲು ಬರುವ ಸಾರ್ವಜನಿಕರ ಅರ್ಜಿಗಳನ್ನು ತುಂಬಿ, ಇಷ್ಟು ದಿನಗಳೊಳಗೆ ನಿಮ್ಮ ಮನೆ ಬಾಗಿಲಿಗೆ ಸೌಲಭ್ಯ ಬರಲಿದೆ ಎಂಬುದಾಗಿ ಹೇಳಿ ಕಳುಹಿಸಿ, ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.ಜನರ ಬಳಿಗೆ ಆಡಳಿತ ಹೋಗಬೇಕಾದರೆ ಡಿಸಿ, ಎಸಿ, ತಹಶೀಲ್ದಾರ್‍ಗಳು ಸೇರಿದಂತೆ ಎಲ್ಲ ಹಂತದ ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಹೋಗಬೇಕೆಂಬ ದೂರದೃಷ್ಟಿ ತಮ್ಮದ್ದಾಗಿದೆ. ಇದಕ್ಕೆ ಎಲ್ಲ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದರು

    ಜಮೀನಿನ ಸರ್ವೇ, ಖಾತೆ ಬದಲಾವಣೆ, ವಿವಿಧ ಪ್ರಮಾಣಪತ್ರ ಪಡೆಯಲು ರೈತರಿಗೆ ಸಾಕಷ್ಟು ತೊಂದರೆ ಆಗುತ್ತಿರುವುದು ತಮ್ಮ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಒಂದೊಂದು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಒಬ್ಬರೂ ಸಹ ಸರ್ಕಾರದ ಯೋಜನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದರ ಜೊತೆಗೆ ಸಾಮಾಜಿಕ ಸುರಕ್ಷಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಕಲಚೇತನರ ಮಾಶಾಸನ ಸೇರಿದಂತೆ ಇತರ ಯೋಜನೆಗಳ ಅರ್ಜಿಗಳನ್ನು ಮನೆ ಬಾಗಿಲಿಗೆ ಹೋಗಿ ಸ್ವೀಕರಿಸಿ, ಮಂಜೂರು ಮಾಡಿಸಿ, ಮಂಜೂರಾತಿ ಆದೇಶವನ್ನು ಖುದ್ದಾಗಿ ಮನೆ ಬಾಗಿಲಿಗೆ ಹೋಗಿ ತಲುಪಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು.

     ಜನ ಪ್ರತಿನಿಧಿಗಳ ಮಾರ್ಗದರ್ಶನ ಹಾಗೂ ಸಹಕಾರ ಪಡೆದು ನಗರದ ಮೂಲಭೂತ ಸೌಕರ್ಯವನ್ನು ಸುಧಾರಿಸುವುದಲ್ಲದೇ, ಮೇಲ್ದರ್ಜೆಗೆ ಏರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈಗಾಗಲೇ ನಗರದ ಬಹುತೇಕ ಭಾಗಗಳಲ್ಲಿ ಒಳ ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಿಂದ ಬರುವ ಕೊಳಚೆ ನೀರನ್ನು ಮಾದರಿಯಾಗಿರುವ ಎಸ್‍ಟಿಪಿ ಮೂಲಕ ಟ್ರಿಟ್ ಮಾಡಲಾಗುತ್ತಿದೆ. ಆದರೆ, ಹೆಚ್ಚು ಸಿವೇಜ್ ಹೋಗದ ಕಾರಣ ಇನ್ನುಳಿದ ಭಾಗಗಳಿಗೂ ಒಳ ಚರಂಡಿ ಸಂಪರ್ಕ ಕಲ್ಪಿಸಲಾಗುವುದು. ಅಲ್ಲದೇ, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವೈಜ್ಞಾನಿಕವಾಗಿ ಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹಾಜರಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap