ತುಮಕೂರು:
ಹಣ, ಅಧಿಕಾರ ಎಲ್ಲರಿಗೂ ದೊರೆಯುತ್ತದೆ ಅದನ್ನು ಹಂಚುವ ಕೆಲಸವನ್ನು ಮಾಡುವ ಮನಸ್ಸು ಮುಖ್ಯ, ಪರಸ್ಪರ ಸಹಕಾರದಿಂದ ಅಭಿವೃದ್ಧಿ ಸಾಧಿಸಬೇಕು ಎಂದು ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ನಡೆದ ಸರ್ಕಾರಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಅವರು, ಪ್ರೀತಿ, ಗೌರವ ನೀಡುವ ಸರ್ಕಾರಿ ಶಾಲೆಗೂ, ದುಡ್ಡು ಮಾಡುವ ಖಾಸಗಿ ಶಾಲೆಗೂ ವ್ಯತ್ಯಾಸವಿದೆ, ಮಕ್ಕಳು ಇಷ್ಟ ಪಟ್ಟು ಓದುವ ಮೂಲಕ ಯಶಸ್ಸು ಸಾಧಿಸಬೇಕು ಎಂದರು.
ಮಸ್ಕಲ್ ಶಾಲೆಯಲ್ಲಿ ಎಲ್ ಕೆಜಿ ಪ್ರಾರಂಭ ಮಾಡುವಾಗ ಪೋಷಕರು ಮಕ್ಕಳನ್ನು ಸೇರಿಸಿದ್ದೀರಿ, 140 ಮಕ್ಕಳು ದಾಖಲಾಗಿದ್ದಾರೆ, ಸರ್ಕಾರದ ನಿಯಮವನ್ನು ಮೀರಿ ದಾಖಲಾತಿ ಆಗಿದೆ, ಆ ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಎಲ್ಲ ಸಹಕಾರ ನೀಡುವುದಕ್ಕೆ ಬದ್ಧನಾಗಿದ್ದೇನೆ, ನಮ್ಮ ಮಕ್ಕಳು ಓದುವ ಶಾಲೆಗೆ ಖಾಸಗಿ ಸಿಬ್ಬಂದಿ ಪಾಠ ಮಾಡುವಂತೆ ಮಾಡಿದ್ದೇನೆ, ಇದಕ್ಕೆ 10ಲಕ್ಷ ರೂ ವೆಚ್ಚ ಮಾಡುತ್ತಿದ್ದೇನೆ ಎಂದರು.
ನೋಟು ಅಮಾನೀಕರಣವಾದ ನಂತರ ದುಡ್ಡು ಕೊಡುವುದು ಸುಲಭವಲ್ಲ, ನಮ್ಮ ಶಾಲೆಯ ಮಕ್ಕಳು ತಾಲ್ಲೂಕಿನ ಹೆಸರನ್ನು ಉನ್ನತ ಸ್ಥಾಯಿಯಲ್ಲಿ ಇರಬೇಕು ಎಂದು ಸರ್ಕಾರಿ ಶಾಲೆಯಲ್ಲಿ ಖಾಸಗಿ ಸಿಬ್ಬಂದಿಯನ್ನು ಇಟ್ಟು ಬೋಧನೆ ಮಾಡಿಸುತ್ತಿದ್ದೇನೆ, ಸರ್ಕಾರಿ ಶಾಲೆಗಳ ಅದ್ಧೂರಿ ವಾರ್ಷಿಕೋತ್ಸವ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಶಾಲೆಯಲ್ಲಿ ಓದುತ್ತಿರುವ ಎಲ್ಲ ಮಕ್ಕಳಿಗೂ ಜಾಮಿಟರಿ ಬಾಕ್ಸ್ ಅನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರದಿಂದ ನೀಡುತ್ತಿದ್ದು, ಈ ಭಾಗದ ಎರಡು ಸಾವಿರ ಮಹಿಳೆಯರಿಗೆ ಬಾಗಿನ ನೀಡುವುದು ಮತಕ್ಕಾಗಿ ಅಲ್ಲ, ಸಹೋದರ ಭಾವನೆಯಿಂದ ಅಷ್ಟೇ, ತಾಲ್ಲೂಕಿನ ಜನರೊಂದಿಗೆ ಭಾವನಾತ್ಮಕವಾಗಿ ಬೆರೆಯಬೇಕೆಂಬ ಉದ್ದೇಶದಿಂದ ಈ ಕಾರ್ಯವನ್ನು ಮಾಡುತ್ತಿದ್ದೇನೆ ಎಂದರು.
ಈ ಭಾಗದ ಸಾಸಲು ಕೆರೆಗೆ ಮೊದಲ ಬಾರಿಗೆ ಹೇಮಾವತಿ ನೀರು ಹರಿಸಿದ್ದೇನೆ, ದೇವರಕೆರೆಗೆ ನೀರು ಹರಿಸಲು ತಾಂತ್ರಿಕ ತೊಂದರೆ ಇದ್ದು ಮುಂದಿನ ವರ್ಷದಲ್ಲಿ ಹೇಮಾವತಿ ನೀರು ಹರಿಸಲು ಬದ್ಧನಾಗಿದ್ದೇನೆ, ಸ್ಥಳೀಯ ಸಂಸ್ಥೆ ಚುನಾವಣೆ ಬರುವ ಮುಂಚೆಯೇ ಮಸ್ಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಿಸಿರಸ್ತೆ, ಶುದ್ಧಕುಡಿಯುವ ನೀರಿನ ಘಟಕ, ಚರಂಡಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ತಾಲ್ಲೂಕಿನಲ್ಲಿ ಡಾಂಬರು ಕಾಣದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಚಾಲನೆ ನೀಡಲಾಗಿದೆ, ಒಂದೂವರೆ ವರ್ಷದಲ್ಲಿ 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಉಳಿದ ಮೂರುವರೆ ವರ್ಷದಲ್ಲಿ ಗ್ರಾಮಾಂತರ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುವುದು, ಗೂಳೂರು ಜಿಲ್ಲಾ ಪಂಚಾಯತಿಯಲ್ಲಿ ಇದುವರೆಗೆ 37 ಕೊಳವೆಬಾವಿ ಕೊರೆಸಲಾಗಿದ್ದು, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಎರಡನೇ ಮೂರು ತಿಂಗಳು ಅಷ್ಟೇ ಅಧಿಕಾರ ಎಂದು ಹೇಳಿಕೊಂಡು ಓಡಾಡುತ್ತಿರುವವರಿಗೆ ಸಮಯ ಬಂದಾಗ ಉತ್ತರಿಸುತ್ತೇನೆ, ಕಾನೂನು ನಮಗೂ ಗೊತ್ತಿದೆ, ಮತ್ತೆ ಅಧಿಕಾರಕ್ಕೆ ಬರುತ್ತೇನೆ ಎಂದು ಕೆಲವರು ಕನಸು ಕಾಣುತ್ತಿದ್ದಾರೆ, ಅವರಿಗೆ ತಕ್ಕ ಉತ್ತರವನ್ನು ನೀಡುತ್ತೇನೆ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
ಮಸ್ಕಲ್ ಶಾಲೆಗೆ ಭೂಮಿಯನ್ನು ದಾನ ಮಾಡಿದ ಜಿ.ಮರಿಯಪ್ಪಣ್ಣ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ತಾ.ಪಂ.ಸದಸ್ಯ ಗೋವಿಂದರಾಜು, ಮೋಹನ್, ಅಶ್ವತ್ಥ್, ಚಂದ್ರು, ಕೆಂಪಹನುಮಯ್ಯ, ಸುರೇಶ್, ಶಾಂತಮ್ಮ, ಚಂದ್ರು, ವಿಜಯಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ