ತುಮಕೂರು

ಉಪಯೋಗಿಸಿರುವ ಕಾರೊಂದನ್ನು ಆನ್‍ಲೈನ್ ಮೂಲಕ ಖರೀದಿಸಲು ಇಚ್ಛಿಸಿದ ವ್ಯಕ್ತಿಯೊಬ್ಬರು, ಆನ್‍ಲೈನ್ ಮೂಲಕವೇ ಕಾರಿನ ಮೊತ್ತ 1,45,770 ರೂ. ಪಾವತಿ ಮಾಡಿದರೂ, ಇವರು ಇಚ್ಛಿಸಿದ್ದ ಕಾರು ಲಭಿಸದೆ ವಂಚನೆಗೊಳಗಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಿಪಟೂರು ತಾಲ್ಲೂಕು ಈರಲಗೆರೆ ಗ್ರಾಮದ ಇ.ಎಸ್.ಧರಣೇಶ್ ಎಂಬುವವರು ವಂಚನೆಗೊಳಗಾಗಿದ್ದು, ನ.29 ರಂದು ರಾತ್ರಿ 10 ಗಂಟೆಯಲ್ಲಿ ತಿಪಟೂರು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಆ ಮೂಲಕ ಈ ವಂಚನೆ ಪ್ರಸಂಗ ಬಹಿರಂಗವಾಗಿದೆ.ಓ.ಎಲ್.ಎಕ್ಸ್. ಆ್ಯಪ್ ಮೂಲಕ ಕೆಎ-04-ಎಂ.ಎಂ.-117 ಸಂಖ್ಯೆಯ ಕಾರು ಒಂದೂವರೆ ಲಕ್ಷ ರೂ. ಮೊತ್ತಕ್ಕೆ
ಮಾರಾಟಕ್ಕಿದೆಯೆಂಬುದನ್ನು ನ.27 ರಂದು ಮೊಬೈಲ್‍ನಲ್ಲಿ ಗಮನಿಸಿದರು. ಅದನ್ನು ಖರೀದಿಸುವ ಆಸೆ ಹೊಂದಿದರು. ನ.28 ರಂದು ಸದರಿ ಮಾಹಿತಿಯಲ್ಲಿದ್ದ ಮೊಬೈಲ್ ಸಂಖ್ಯೆಗೆ ತಮ್ಮ ಮೊಬೈಲ್‍ನಿಂದ ಕರೆ ಮಾಡಿದರು. ಆ ಕಡೆಯ ವ್ಯಕ್ತಿ ತಾನು ಸೇನೆ ಯಲ್ಲಿರುವುದಾಗಿಯೂ, ಪ್ರಸ್ತುತ ಹೈದರಾಬಾದ್ ಏರ್‍ಪೆÇೀರ್ಟ್‍ನಲ್ಲಿರುವುದಾಗಿ ಹೇಳಿದರು. ಈರ್ವರೂ ಹಿಂದಿ ಭಾಷೆಯಲ್ಲಿ ಸಂಭಾಷಿಸಿದರು.
ಸದರಿ ಕಾರಿಗೆ 1,50,000 ರೂ. ಎಂದಿದ್ದರೂ, ನಿಮಗೆ 1,30,000 ರೂ.ಗಳಿಗೆ ನೀಡುವುದಾಗಿಯೂ, ಅದರ ಸಾಗಣೆ ವೆಚ್ಚ 8,100 ರೂ.ಗಳನ್ನು ತಮ್ಮ “ಫೋನ್ ಪೇ” ನೆಟ್ ಅಕೌಂಟ್‍ಗೆ ಹಾಕಬೇಕೆಂದೂ ಆ ವ್ಯಕ್ತಿ ಹೇಳಿದರು. ಇದನ್ನು ನಂಬಿದ ಧರಣೇಶ್ ನ.27 ರಂದು ಮಧ್ಯಾಹ್ನ 1-50 ರಲ್ಲಿ ಸದರಿ ಮೊತ್ತವನ್ನು ಜಮಾ ಮಾಡಿದರು. ಬಳಿಕ ಇವರು ಆ ವ್ಯಕ್ತಿಗೆ ಕರೆ ಮಾಡಿದಾಗ, ಕಾರನ್ನು ಇಂದು ರಾತ್ರಿಯೇ ಲಾರಿಗೆ ಲೋಡ್ ಮಾಡಿ ಕಳಿಸುವುದಾಗಿ ಭರವಸೆ ಕೊಟ್ಟರು.
ಜೊತೆಗೆ ತೆರಿಗೆ ಮತ್ತು ಬಿಲ್ ಅಪ್ರೂವಲ್‍ಗೆ ಹಣದ ಅವಶ್ಯಕತೆ ಇದ್ದು, ತನ್ನ “ಪೇ ಟಿಎಂ” ಅಕೌಂಟ್‍ಗೆ ಹಣ ಹಾಕುವಂತೆ ಕೋರಿದರು. ಇವರ ಮಾತು ನಂಬಿದ ಧರಣೇಶ್, ನ.28 ರಂದು ಹಂತ ಹಂತವಾಗಿ 19,520 ರೂ., 20,000 ರೂ., 12,160 ರೂ., 20,000 ರೂ., 1,000 ರೂ., 15,000 ರೂ.ಗಳನ್ನು ಜಮಾ ಮಾಡಿದರು.
ಜೊತೆಗೆ ತನ್ನ ಸ್ನೇಹಿತರೊಬ್ಬರ ಮೊಬೈಲ್ ಮೂಲಕ ಸದರಿ “ಪೇ ಟಿ.ಎಂ.” ಅಕೌಂಟ್‍ಗೆ ಒಟ್ಟು 2 ಬಾರಿ ತಲಾ 50,000 ರೂ.ಗಳಂತೆ ಒಟ್ಟು 1 ಲಕ್ಷ ರೂ.ಗಳನ್ನು ಜಮಾ ಮಾಡಿದರು. ಒಟ್ಟಾರೆ 1,45,770 ರೂ.ಗಳನ್ನು ಇವರು ಪಾವತಿ ಮಾಡಿಬಿಟ್ಟರು. ಇದಾದ ಬಳಿಕ ಇವರು ಸದರಿ ಆಗಂತುಕನ ಮೊಬೈಲ್‍ಗೆ ಕರೆ ಮಾಡತೊಡಗಿದಾಗ, ಆತ ಕರೆಯನ್ನೇ ಸ್ವೀಕರಿಸಲಿಲ್ಲ.
ಆಗ ಇವರಿಗೆ ತಾವು ಮೋಸ ಹೋಗಿರುವುದು ಗೊತ್ತಾಯಿತು. ಆತಂಕಗೊಂಡ ಧರಣೇಶ್ ನ.29 ರಂದು ರಾತ್ರಿ 10 ಗಂಟೆಯಲ್ಲಿ ದೂರು ಸಲ್ಲಿಸಿದ್ದಾರೆ. ತಿಪಟೂರು ನಗರ ಠಾಣೆಯ ಪೊಲೀಸರು, ಐಪಿಸಿ ಕಲಂ 420 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 66 (ಸಿ) ಮತ್ತು (ಡಿ) ಪ್ರಕಾರ ಮೊಕದ್ದಮೆ ದಾಖಲಿಸಿ ಮುಂದಿನ ತನಿಖೆ ಆರಂಭಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
