ತಂಬಾಕು ಜಾಹೀರಾತು ಪ್ರದರ್ಶಿಸುವವರ ವಿರುದ್ಧ ಎಫ್‍ಐಆರ್

ದಾವಣಗೆರೆ :

        ದಂಡ ಕಟ್ಟಿಯೂ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶಿಸುವವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪನವರು ತಂಬಾಕು ನಿಯಂತ್ರಣ ಕೋಶದ ತಂಡದ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಸೂಚಿಸಿದರು.

         ನಗರದ ಜಿಲ್ಲಾಡಳಿತ ಭವನದ ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಡಿಯಲ್ಲಿ ಜಿಲ್ಲಾವಾರು ಸಮನ್ವಯ ಸಮಿತಿಯ ಸದಸ್ಯರುಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ಜಿಲ್ಲಾ ತಂಬಾಕು ನಿಯಂತ್ರಣ ತಂಡದ ವತಿಯಿಂದ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳ ಅಧಿನಿಯದಡಿ ದಾಳಿ ನಡೆಸಿ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಷೇಧಿಸಿರುವ ಕುರಿತು, ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹಿರಾತು ನಿಷೇಧದ ಬಗ್ಗೆ ಅರಿವು ಮೂಡಿಸಿ, ದಂಡ ವಿಧಿಸುವ ಕೆಲಸ ನಡೆಯುತ್ತಿದೆ.

       ಆದರೆ, ದಂಡ ಕಟ್ಟಿಯೂ ತಂಬಾಕು ಉತ್ಪನ್ನ ಜಾಹಿರಾತು ಪ್ರದರ್ಶಿಸುವವರ ವಿರುದ್ಧ ಇನ್ನು ಮುಂದೆ ಎಫ್‍ಐಆರ್ ದಾಖಲಿಸಬೇಕೆಂದು ತಾಕೀತು ಮಾಡಿದರು.ಅಂಗಡಿಗಳಲ್ಲಿ ಬಿಡಿ ಸಿಗರೇಟ್, ಬೀಡಿಗಳನ್ನು ಮಾರುವಂತಿಲ್ಲ. ಬಿಡಿಯಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಯಾವುದೇ ಸಮರ್ಥನೆ ಕೇಳುವುದಿಲ್ಲ. ಜಾಹೀರಾತು ಪ್ರದರ್ಶನ ಮಾಡದ ಹಾಗೆ ಹಾಗೂ ಬಿಡಿಯಾಗಿ ಮಾರದಂತೆ ಶಾಲಾ-ಕಾಲೇಜುಗಳ 100 ಗಜ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಿಷೇಧ ಸೇರಿದಂತೆ ತಂಬಾಕು ನಿಯಂತ್ರಣ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಗಟು ವರ್ತಕರು ಮತ್ತು ತಂಬಾಕು ನಿಯಂತ್ರಣ ಕೋಶದ ವತಿಯಿಂದ ಜಾಗೃತಿ ಸಭೆ ಆಯೋಜಿಸಬೇಕು ಎಂದರು.

       ಬೀಡಿ ಕಟ್ಟುವ ಸಂಘಗಳಿಗೆ, ಕಟ್ಟಡ ಕಾರ್ಮಿಕರಿಗೆ ತಂಬಾಕು ದುಷ್ಪರಿಣಾಮ ಮತ್ತು ಅಧಿನಿಮಯದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲು ಹಾಗೂ ತಂಬಾಕು ಬೆಳೆಯುತ್ತಿರುವ ಕೃಷಿಕರಿಗೆ ಪೂರಕ ಬೆಳೆಗಳ ಕುರಿತು ಅರಿವು ಮೂಡಿಸಬೇಕು. ಅಲ್ಲದೆ, ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಪ್ರತಿ ಮೊದಲನೇ ಶನಿವಾರ ತಂಬಾಕು ವಿರೋಧಿ ದಿನವನ್ನಾಗಿ ಆಚರಿಸುವ ಮೂಲಕ ತಂಬಾಕು ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಬೇಕೆಂದು ಸೂಚಿಸಿದರು.

       ರಾಜ್ಯ ತಂಬಾಕು ನಿಯಂತ್ರಣ ತಂಡದ ವಿಭಾಗೀಯ ಸಂಯೋಜಕ ಮಹಾಂತೇಶ್ ಮಾತನಾಡಿ, ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣಕ್ಕಾಗಿ ವಿವಿಧ ಚಟುವಟಿಕೆ ಕೈಗೊಳ್ಳಲು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಜಾರಿಗೆ ಬಂದಿದ್ದು, ಈ ಕಾರ್ಯಕ್ರಮದಡಿ ಒಬ್ಬ ಜಿಲ್ಲಾ ಸಲಹೆಗಾರರು ಮತ್ತು ಸಮಾಜಕಾರ್ಯಕರ್ತರೊಬ್ಬರು ಐಇಸಿ, ಶಾಲಾ ಕಾರ್ಯಕ್ರಮಗಳು, ತರಬೇತಿಯಂತಹ ಕಾರ್ಯಕ್ರಮವನ್ನು ನಡೆಸುವರು.

          ಕೋಟ್ಪಾ ಅಧಿನಿಯಮದ ಸೆಕ್ಷನ್ 4 ರ ಪ್ರಕಾರ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ, ಸಾರ್ವಜನಿಕ ಕಚೇರಿಗಳಲ್ಲಿ 60*40 ಇಂಚ್ ಅಳತೆಯ ನಾಮಫಲಕವನ್ನು ಕಡ್ಡಾಯವಾಗಿ ಹಾಕಬೇಕು. ಈ ನಾಮಫಲಕ ಕೋಟ್ಪಾ ವೆಬ್‍ಸೈಟ್‍ಲ್ಲಿ ಅಥವಾ ತಂಬಾಕು ನಿಯಂತ್ರಣ ಘಟಕದಲ್ಲಿ ಲಭ್ಯವಿದೆ. ಸೆಕ್ಷನ್ 6ಎ ಮತ್ತು ಬಿ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಹಾಗೂ ಶಾಲಾಕಾಲೇಜುಗಳ 100 ಯಾರ್ಡ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮತ್ತು ಮಾರಾಟ ನಿಷೇಧವೆಂಬ ನಾಮಫಲಕವನ್ನು 3*2 ಅಡಿ ಅಳತೆಯಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಕಡ್ಡಾಯವಾಗಿ ಬರೆಸಬೇಕು. ಹಾಗೂ ವರ್ತಕರು/ಚಿಲ್ಲರೆ ವ್ಯಾಪಾರಿಗಳು ಶಾಲಾ ಕಾಲೇಜುಗಳ 100 ಯಾರ್ಡ್ ವ್ಯಾಪ್ತಿಯಲ್ಲಿ ಮಾರಾಟ ಮಾಡಬಾರದು ಎಂದರು.

          ಜಿಲ್ಲೆಯನ್ನು ಕೋಟ್ಪಾ ಉನ್ನತ ಅನುಷ್ಟಾನ ಜಿಲ್ಲೆ ಎಂದು ಘೋಷಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಿರಂತರ ದಾಳಿ, ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸೆಕ್ಷನ್ 6ಬಿ ಅಡಿಯಲ್ಲಿ ಶಾಲಾ ಕಾಲೇಜುಗಳ 100 ಯಾರ್ಡ್ ವ್ಯಾಪ್ತಿಯಲ್ಲಿ ತಂಬಾಕು ನಿಷೇಧಿಸಲಾಗಿದೆ.ಇದರ ಪರಿಣಾಮಕಾರಿ ಅನುಷ್ಟಾನದ ಕುರಿತು ವಿವರಿಸಿದರು. ಹಾಗೂ ಜಿಲ್ಲೆಯು ಬ್ಲೂಮ್ ಬರ್ಗ್ ಇನಿಷಿಯೇಟಿವ್ ಯೋಜನೆಯಡಿ ಆಯ್ಕೆಯಾಗಿದ್ದು, ಇದರಡಿ ಕೋಟ್ಪಾ ಅಧಿನಿಯಮ ಅನುಷ್ಟಾನಕ್ಕೆ ವಿವಿಧ ಸಂಘಟನೆ/ಪಾಲುದಾರರಿಗೆ ತರಬೇತಿ, 2025 ರ ಅವಧಿಗೆ ಯಾವುದೇ ರೀತಿಯ ತಂಬಾಕು ಇತ್ತೀಚಿಗೆ ಜನಿಸಿದ ಮಕ್ಕಳಿಗೆ ಲಭ್ಯವಾಗದಂತೆ ನೋಡಿಕೊಳ್ಳುವ ಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

         ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಸತೀಶ್, ಪಿಪಿಟಿ ಪ್ರದರ್ಶನದ ಮೂಲಕ ಕಾರ್ಯಕ್ರಮದ ರೂಪುರೇಷೆಗಳನ್ನು, ಗುರಿಯನ್ನು ವಿವರಿಸಿ, ಜಿಲ್ಲಾ ಆಸ್ಪತ್ರೆಯಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರವನ್ನು ತೆರೆಯಲಾಗಿದ್ದು, ತಂಬಾಕು ಉತ್ಪನ್ನಗಳ ವ್ಯಸನ ಮುಕ್ತರಾಗ ಬಯಸುವವರಿಗೆ ಉಚಿತವಾಗಿ ಆಪ್ತಸಮಾಲೋಚನೆ, ನಿಕೋಟೆಕ್ಸ್ ಗಮ್ ಸೇರಿದಂತೆ ಉಚಿತ ಸೇವೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

          ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಗಂಗಾಧರ್ ಮಾತನಾಡಿ, ಪಾಯಿಂಟ್ ಆಫ್ ಸೇಲ್‍ನಲ್ಲಿ ಬೆಂಕಿಪೊಟ್ಟಣ, ಲೈಟರ್, ಆಷ್ ಟ್ರೇಗಳನ್ನು ಒದಗಿಸಬಾರದು. ಶಾಲಾ ಕಾಲೇಜುಗಳ 100 ಯಾರ್ಡ್ ವ್ಯಾಪ್ತಿಯೊಳಗಿನ ನಿಷೇಧಿತ ಪ್ರದೇಶವನ್ನು ಹಳದಿ ಬಣ್ಣದಿಂದ ಗುರುತಿಸಬೇಕೆಂಬ ಸೂಚನೆ ಇದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಕ್ರಮ ಜರುಗಿಸಲು ಕೋರಿದರು.

          ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಸಮದ್ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾನೂನು ಜಾರಿಯಾದಾಗಿನಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಕಡಿಮೆ ಯಾಗಿದೆ. ಸಿಗರೇಟಿಗೆ ಹೋಲಿಸಿದರೆ ಬೀಡು ಸೇದುವವರ ಸಂಖ್ಯೆ ಕಡಿಮೆ. ಬೀಡಿ ಕಟ್ಟುವವರೂ ವಿರಳವಾಗಿದ್ದಾರೆ. 50 ವಯೋಮಾನ ಮೇಲ್ಪಟ್ಟ ಮತ್ತು ಕಾರ್ಮಿಕ ವರ್ಗ ಮಾತ್ರ ಬೀಡಿ ಬಳಸುತ್ತಾರೆ. ಮೊದಲೆಲ್ಲ ಸಿಗರೇಟು ಮತ್ತು ತಂಬಾಕು ಪಾನ್‍ಗೆ ಬಹಳಷ್ಟು ಬೇಡಿಕೆ ಇತ್ತು. ಈಗ ಕಡಿಮೆಯಾಗಿದೆ ಎಂದ ಅವರು ತಂಬಾಕು ನಿಯಂತ್ರಣ ಘಟಕಕ್ಕೆ ಸಹಕರಿಸುವುದಾಗಿ ತಿಳಿಸಿದರು.

           ಜಿಲ್ಲಾ ವರ್ತಕರ ಸಂಘದ ಕಾರ್ಯದರ್ಶಿ ತೌಫೀಕ್ ಅಹ್ಮದ್ ಮಾತನಾಡಿ, ಮೊದಲೆಲ್ಲ ಸ್ಟಾಕ್ ಕೊಡೋಕೆ ಆಗದಿರುವಷ್ಟು ಒತ್ತಡ ಇರುತ್ತಿತ್ತು. ಮಾರ್ಚ್ ಕೊನೆಯಲ್ಲಿ ಕಾರ್ಯದೊತ್ತಡ ಹೆಚ್ಚಿರುತ್ತಿತ್ತು. ಈಗ ಆಗಿಲ್ಲ. ತಂಬಾಕು ಉತ್ಪನ್ನಗಳ ಬೇಡಿಕೆ ಕಡಿಮೆಯಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಮಾತನಾಡಿ, ಕಾರಾಗೃಹದ ವಿಚಾರಣಾಧೀನ ಕೈದಿಗಳಿಗೆ ತಿಂಗಳಲ್ಲಿ ಒಂದು ಅಥವಾ ಎರಡು ಬಾರಿ ಮನೋವೈದ್ಯರೊಂದಿಗೆ ತಂಬಾಕಿನ ದುಷ್ಪರಿಣಾಮ ಮತ್ತು ಅರಿವು ಕಾರ್ಯಕ್ರಮ ಅಥವಾ ಶಿಬಿರಗಳನ್ನು ಆಯೋಜಸುವಂತೆ ಸೂಚಿಸಿದರು. ಹಾಗೂ ಶಾಲಾ-ಕಾಲೇಜುಗಳಲ್ಲಿ ಪ್ರತಿ ಶನಿವಾರ ನಡೆಸಲು ಆದೇಶಿಸಿರುವಂತೆ ಪ್ರತಿ ಗ್ರಾ.ಪಂ ಗಳ ಹೋಬಳಿ ಮಟ್ಟದಲ್ಲಿಯೂ ಒಬ್ಬ ವಕೀಲರನ್ನೊಳಗೊಂಡಂತೆ ಜಾಗೃತಿ ಕಾರ್ಯಕ್ರಮ ನಡೆಸುವಂತೆ ಸಲಹೆ ನೀಡಿದರು.

            ಎಎಸ್‍ಪಿ ಟಿ.ಜೆ.ಉದೇಶ್ ಮಾತನಾಡಿ, ದಾವಣಗೆರೆಯಲ್ಲಿ ಠಾಣಾವಾರು ಪಿಎಸ್‍ಐ ನವರನ್ನೊಳಗೊಂಡು ತಂಡದಿಂದ ತಂಬಾಕು ದಾಳಿ ನಡೆಸಬಹುದು ಸಲಹೆ ನೀಡಿದರು.

           ಸಭೆಯಲ್ಲಿ ಡಿಡಿಪಿಐ ಪರಮೇಶ್ವಪ್ಪ, ಡಿಡಿಪಿಯು ಶೇಖರಪ್ಪ, ಜಿಲ್ಲಾ ಮಲೇರಿಯಾಧಿಕಾರಿ ಡಾ.ಮೀನಾಕ್ಷಿ, ಜಿಲ್ಲಾ ಕಾರಾಗೃಹ ಅಧೀಕ್ಷಕ ಕರ್ಣ ಬಿ. ಕ್ಷತ್ರಿ, ಡಾ. ಡಾ.ರೇಣುಕಾರಾಧ್ಯ, ತಾಲ್ಲೂಕು ವೈದ್ಯಾಧಿಕಾರಿಗಳು, ಇತರೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link