ಕ್ಷೇತ್ರ ಶಿಕ್ಷಣ ಇಲಾಖಾ ಕಟ್ಟಡ : ಶೌಚಾಲಯಕ್ಕಾಗಿ ಶಿಕ್ಷಕರ ಪರದಾಟ

ಶಿರಾ

ವಿಶೇಷ ವರದಿ:ಬರಗೂರು ವಿರೂಪಾಕ್ಷ

      ದೇಶವನ್ನು ಬಯಲು ಶೌಚ ಮುಕ್ತ ಮಾಡಲು ಎಲ್ಲರೂ ಶ್ರಮಿಸುವುದಷ್ಟೇ ಅಲ್ಲದೆ, ಪ್ರತಿಯೊಬ್ಬರೂ ಶೌಚಾಲಯವನ್ನು ಕಡ್ಡಾಯವಾಗಿ ನಿರ್ಮಾಣ ಮಾಡಿಕೊಳ್ಳುವಂತೆ ಸರ್ಕಾರ ತಾಕೀತು ಮಾಡಿದೆ. ಇಷ್ಟೆ ಅಲ್ಲದೆ ಸ್ವಚ್ಚ ಭಾರತ ಅಭಿಯಾನ ಅನ್ನುವ ಮಹತ್ವದ ಯೋಜನೆಯನ್ನೆ ಕೇಂದ್ರ ಸರ್ಕಾರ ಜಾರಿಗೊಳಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸಗಳನ್ನು ಇಲಾಖೆಯ ಅಧಿಕಾರಿಗಳ ಮೂಲಕ ಚಾಚೂ ತಪ್ಪದೆ ಸರ್ಕಾರ ಮಾಡಿಸುತ್ತಿದೆ.

        ತಾಲ್ಲೂಕಿನ ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರತಿಯೊಂದು ಶಾಲೆಗಳಿಗೆ ಭೇಟಿಗೆ ಹೋದಾಗ ಹಾಗೂ ಶಾಲಾ ಕಟ್ಟಡಗಳ ನಿರ್ಮಾಣ ಮಾಡಿಸುವಾಗ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸಲು ಸೂಚನೆಯನ್ನು ನೀಡುತ್ತಾರೆ.

       ಇತ್ತೀಚೆಗಂತೂ ಗ್ರಾಮಾಂತರ ಪ್ರದೇಶದ ಅನೇಕ ಶಾಲೆಗಳಲ್ಲೂ ಕೂಡ ಉತ್ತಮವಾದ ಶೌಚಾಲಯಗಳು ನಿರ್ಮಾಣಗೊಂಡಿವೆ. ಸರ್ಕಾರಿ ಶಾಲೆಗಳಲ್ಲಿ ಅನುದಾನದ ಕೊರತೆ ಇದ್ದಲ್ಲಿ ದಾನಿಗಳನ್ನಾದರೂ ಹಿಡಿದುಕೊಂಡು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲಾ ಮುಖ್ಯಸ್ಥರು ತಮ್ಮದೆ ಪ್ರಾಮಾಣಿಕ ಕಾಳಜಿಯಿಂದ ಶೌಚಾಲಯಗಳನ್ನು ನಿರ್ಮಿಸಿದ ಉದಾಹರಣೆಗಳು ಸಾಕಷ್ಟಿವೆ.

       ಇಂತಹ ಸನ್ನಿವೇಶದಲ್ಲಿ ತಾಲ್ಲೂಕಿನ ಇಡೀ ಶಾಲೆಗಳನ್ನು ಮತ್ತು ಶಿಕ್ಷಕರನ್ನು ನಿರ್ವಹಣೆ ಮಾಡುವ ಶಿರಾ ನಗರದ ಕ್ಷೇತ್ರ ಶಿಕ್ಷಣ ಇಲಾಖೆಯಲ್ಲಿಯೆ ಒಂದು ಶೌಚಾಲಯವಿಲ್ಲದೆ, ಶಿಕ್ಷಕರು ಮತ್ತು ಸಿಬ್ಬಂದಿ ಪರಿತಪಿಸುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿಯೇ ಸರಿ. ಜನಸಂಖ್ಯಾ ಗಣತಿಗೆ, ಚುನಾವಣೆಗಳ ಕಾರ್ಯಕ್ಕೆ….ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಸರ್ಕಾರಿ ಕೆಲಸಗಳಿಗೆ ಶಿಕ್ಷಕರನ್ನು ಆಶ್ರಯಿಸುವ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯು ಶಿಕ್ಷಕರ ಮೂಲ ಸಮಸ್ಯೆಗಳಿಗೂ ಸ್ಪಂದಿಸಬೇಕಲ್ಲವೆ? ಶಿರಾ ಕ್ಷೇತ್ರ ಶಿಕ್ಷಣ ಇಲಾಖೆಗೆ ಕಾರ್ಯ ನಿಮಿತ್ತ ಆಗಮಿಸುವ ಶಿಕ್ಷಕರು ಸದರಿ ಕಟ್ಟಡದಲ್ಲಿ ಶೌಚಾಲಯವಿಲ್ಲದೆ ಪರದಾಡುತ್ತಿದ್ದಾರೆ.

        ಸದರಿ ಇಲಾಖಾ ಕಟ್ಟಡದಲ್ಲಿ ತಾಲ್ಲೂಕಿನ ನೂರಾರು ಮಂದಿ ಶಿಕ್ಷಕರನ್ನು ತರಬೇತಿ ಕಾರ್ಯಗಳಿಗೆ ಆಹ್ವಾನಿಸಲಾಗುತ್ತದೆ. ಶಿಕ್ಷಣ ಇಲಾಖಾ ಕಟ್ಟಡದಲ್ಲಿಯೆ ಕ್ಷೇತ್ರ ಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಕಚೇರಿಯೂ ಇದ್ದು, ಈ ಕಟ್ಟಡದಲ್ಲಿ ವಾರಕ್ಕೊಮ್ಮೆ ಹಾಗೂ ತಿಂಗಳಿಗೆ ಹತ್ತಾರು ಬಾರಿ ಶಿಕ್ಷಕರ ತರಬೇತಿಗಳು ನಡೆಯುತ್ತಲೆ ಇರುತ್ತವೆ. ಕಳೆದ ಒಂದು ವಾರದಿಂದಲೂ ಸುಮಾರು 80 ಮಂದಿ ಶಿಕ್ಷಕ/ಶಿಕ್ಷಕಿಯರಿಗೆ ಗಣಿತ ಕಿಟ್ಸ್ ತರಬೇತಿ ನಡೆಯುತ್ತಿದೆ. ಮುಂದಿನ 8 ದಿನಗಳವರೆಗೂ ಇದೇ ಗಣಿತ ಕಿಟ್ಸ್ ತರಬೇತಿಯು ಪುನಃ 80 ಮಂದಿ ಶಿಕ್ಷಕರಿಗೆ
ನಡೆಯಲಿದೆ.

      ಇಷ್ಟೇ ಅಲ್ಲದೆ ಆಗಾಗ್ಗೆ ಸದರಿ ಕಚೇರಿಯ ಕಟ್ಟಡದಲ್ಲಿ ಶಿಕ್ಷಕರ ತರಬೇತಿ ನಡೆದಾಗಲೆಲ್ಲಾ ಆಗಮಿಸುವ ಶಿಕ್ಷಕರು ಶೌಚಾಲಯವಿಲ್ಲದೆ ಪರದಾಡುವಂತಾಗಿದೆ. ಬಿ.ಇ.ಓ. ಕಚೇರಿಯ ವ್ಯವಸ್ಥಾಪಕರ ಕೊಠಡಿಯಲ್ಲಿ ಒಂದು ಶೌಚಾಲಯವಿದ್ದು, ಅದನ್ನು ಇಲಾಖೆಯ ಸಿಬ್ಬಂದಿ ಮಾತ್ರ ಬಳಕೆ ಮಾಡುತ್ತಾರೆ. ಬಿ.ಆರ್.ಸಿ.  ಕಟ್ಟಡದಲ್ಲಿರುವ ಶೌಚಾಲಯವನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಗಬ್ಬೆದ್ದು ನಾರುತ್ತಿದೆ.

       ಪರಿಸ್ಥಿತಿ ಹೀಗಿರುವಾಗ ತರಬೇತಿಗೆಂದು ಬಂದ ಶಿಕ್ಷಕರು ಬಹಿರ್ದೆಸೆಗೊ, ಇಲ್ಲವೆ ಮೂತ್ರ ವಿಸರ್ಜನೆಗೊ ಹೋಗುವುದು ಸಹಜವೂ ಆಗಿದ್ದು, ಶಿಕ್ಷಕಿಯರು ನಗರಸಭಾ ಕಚೇರಿಯ ಶೌಚಾಲಯವನ್ನು ವಿಧಿ ಇಲ್ಲದೆ ಬಳಕೆ ಮಾಡುತ್ತಾರೆ. ಇನ್ನು ಪುರುಷ ಶಿಕ್ಷಕರು ದ್ವಿಚಕ್ರ ವಾಹನಗಳಲ್ಲಿ ನಗರದ ಹೊರ ಭಾಗಕ್ಕೆ ಹೋಗಿ ಬರಬೇಕಿದೆ. ಕ್ಷೇತ್ರ ಶಿಕ್ಷಣ ಇಲಾಖೆಯಲ್ಲಿಯೆ ಶಿಕ್ಷಕರಿಗೆ ಶೌಚಾಲಯವಿಲ್ಲದೆ ಶಿಕ್ಷಕರ ಪಡಿಪಾಟಲನ್ನು ಕೇಳುವವರೆ ಇಲ್ಲವಾಗಿದೆ.

     ಇತ್ತೀಚೆಗಷ್ಟೆ ಶಿಕ್ಷಣ ಇಲಾಖೆಗೆ ವರ್ಗವಾಗಿ ಬಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಂದಿಷ್ಟು ಕ್ರಿಯಾಶೀಲರೂ ಆಗಿದ್ದಾರೆಂಬ ನಂಬಿಕೆ ಶಿಕ್ಷಕ ಸಮೂಹದಲ್ಲಿದ್ದು, ತಮ್ಮದೆ ಇಲಾಖಾ ಕಟ್ಟಡದಲ್ಲಿ ಶೌಚಾಲ ನಿರ್ಮಾಣ ಮಾಡಿಸಿ ಶಿಕ್ಷಕರ ಸಮಸ್ಯೆಗೆ ಈ ಅಧಿಕಾರಿ ಸ್ಪಂದಿಸುವರೇನೋ ಕಾದು ನೋಡಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap