ತಾಲ್ಲೂಕಿನ ಬುಡಕಟ್ಟು ಜನಾಂಗದ ದುಃಸ್ಥಿತಿಯ ಬದುಕು

ಕೊರಟಗೆರೆ

          21 ನೇ ಶತಮಾನದಲ್ಲಿದ್ದು ಆಧುನಿಕ ನಾಗರಿಕತೆಯ ಬಾಳು ಕಟ್ಟಿಕೊಳ್ಳಬೇಕಿದ್ದ ಜನತೆ, ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ, ಕೆರೆಯ ಅಂಗಳ, ಗ್ರಾಮಠಾಣಾ ಹಾಗೂ ಕಾಡಿನ ಗೋಮಾಳದಲ್ಲಿ ಕಳೆದ 45 ವರ್ಷಗಳಿಂದ ವಾಸಿಸುತ್ತಿದ್ದಾರೆ. ತಮ್ಮ ಬದುಕಿಗೆ ಸುಭದ್ರ ನೆಲೆಯಿಲ್ಲದೆ, ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಲು ಸುರಕ್ಷಿತವಾದ ಸ್ವಂತ ಸೂರಿಲ್ಲದೆ, ನೂರಾರು ಹಂದಿ ಜೋಗ ಮತ್ತು ಹಕ್ಕಿಪಿಕ್ಕಿ ಜನಾಂಗದ ಬುಡಕಟ್ಟು ಕುಟುಂಬಗಳ ಬದುಕು ದುಸ್ಥಿತಿಯಲ್ಲಿದೆ. ಇವರನ್ನು ಕತ್ತಲಿನಲ್ಲಿ ಬದುಕು ಸಾಗಿಸುವ ಅನಿವಾರ್ಯ ಪರಿಸ್ಥಿತಿಗೆ ನಮ್ಮ ವ್ಯವಸ್ಥೆ ದೂಡಿದೆ.

         ರಾಜ್ಯದಲ್ಲಿ ಸ್ಮಾರ್ಟ್ ಸಿಟಿಯ ಕಿರೀಟ ಹೊತ್ತ ತುಮಕೂರು ಜಿಲ್ಲೆಯಲ್ಲಿ ಪ್ರತಿಷ್ಠಿತ ವಿಧಾನ ಸಭಾ ಕ್ಷೇತ್ರವೆನಿಸಿದ ಕೊರಟಗೆರೆ ತಾಲ್ಲೂಕಿನಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರಟಗೆರೆ ತೀತಾ ಜಲಾಶಯದ ಬಳಿ 18 ಕುಟುಂಬಗಳು, ಇದಕ್ಕೆ ಹೊಂದಿಕೊಂಡಂತಿರುವ ಕೆಂಗನಪಾಳ್ಯದ ಕೆರೆಯ ಅಂಗಳದಲ್ಲಿ 10 ಕುಟುಂಬ, ಹೂಲಿಕುಂಟೆ ಗ್ರಾಮದ ಬಳಿ 12 ಕುಟುಂಬ, ಐ ಕೆ ಕಾಲನಿಯ ಮುಖ್ಯರಸ್ತೆ ಬಳಿ 18 ಕುಟುಂಬ, ಚಿಕ್ಕಾವಳ್ಳಿ ಕೆರೆಯ ಬಳಿ 8 ಕುಟುಂಬ, ಚಿಂಪುಗಾನಹಳ್ಳಿ ಗ್ರಾಮದ ಹೊರವಲಯದಲ್ಲಿ 24 ಕುಟುಂಬ, ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ 15 ಕುಟುಂಬ ಹೀಗೆ ತಾಲ್ಲೂಕಿನಾದ್ಯಂತ ನೂರಾರು ಕುಟುಂಬಗಳು ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಸತಿ, ವಿದ್ಯುತ್ ಕಾಣದೆ ಹಲವಾರು ವರ್ಷಗಳಿಂದ ಆದಿವಾಸಿಗಳ ರೀತಿ ಬದುಕುತ್ತಿರುವುದು ಸುಸಂಸ್ಕತ ಸಮಾಜವನ್ನು ಅಣಕಿಸುತ್ತಿದೆ 

        ತಾಲ್ಲೂಕಿನ ಹೂಲಿಕುಂಟೆ, ತೀತಾ, ಕ್ಯಾಮೇನಹಳ್ಳಿ, ಚಿಂಪುಗಾನಹಳ್ಳಿ, ನೀಲಗೊಂಡನಹಳ್ಳಿ ಹಾಗೂ ಚಿಕ್ಕಾವಳ್ಳಿ ಗ್ರಾಮಗಳ ವ್ಯಾಪ್ತಿಯ ಸರ್ಕಾರಿ ಜಮೀನು ಹಾಗೂ ಕೆರೆ ಕಟ್ಟೆಗಳಲ್ಲಿ ಜೀವನ ಹುಡುಕಿಕೊಂಡಿರುವ ಕಾಡುಗೊಲ್ಲ (ಮೋಡಿಗೊಲ್ಲ), ಎಳವರು, ಹಂದಿಜೋಗ ಮತ್ತು ಹಕ್ಕಿಪಿಕ್ಕಿ ಕುಟುಂಬಕ್ಕೆ ಸೇರಿದ 250 ಕ್ಕೂ ಹೆಚ್ಚು ಜನಸಂಖ್ಯೆಯಿದ್ದಾರೆ. ಇವರಲ್ಲಿ 65 ವಿದ್ಯಾರ್ಥಿಗಳಿದ್ದು, ಇದರಲ್ಲಿ 40 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, 10 ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ, ಉಳಿಕೆ 10 ರಿಂದ 15 ಜನ ಪ್ಲಾಸ್ಟಿಕ್ ಪೇಪರ್ ಹಾಗೂ ಚಿಂದಿ ಆಯುವ ಕಾಯಕದಲ್ಲಿದ್ದಾರೆ. ಇನ್ನೂ ಕೆಲವರು ಭಿಕ್ಷಾಟನೆಯನ್ನೆ ಕಾಯಕ ಮಾಡಿಕೊಂಡು ದುಸ್ಥಿರ ಜೀವನ ನಡೆಸುತ್ತಿರುವುದು ಸಾಮಾನ್ಯವಾಗಿದೆ.

         ಕಾಡುಗೊಲ್ಲ (ಮೋಡಿಗೊಲ್ಲ), ಎಳವರು, ಹಂದಿಜೋಗ ಮತ್ತು ಹಕ್ಕಿಪಿಕ್ಕಿ ಜನಾಂಗದವರು ಸರ್ಕಾರದಿಂದ ಬರುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಲಾಗದೆ, ಮಾಹಿತಿ ಕೊರತೆಯಿಂದ ಹಂದಿ ಸಾಕಾಣಿಕೆ, ಚಿಂದಿ ಆಯುವ ಕೆಲಸ, ಭಿಕ್ಷಾಟನೆ ಮಾಡುತ್ತಿದ್ದಾರೆ. ಜೊತೆಗೆ ಬೇಟೆ ಆಡಿ ಗೋಜನ ಹಕ್ಕಿ, ಪುರುಡಕ್ಕಿ, ಬಿಳಿಇಲಿ, ಕಾಡು ಬೆಕ್ಕು ಸೇರಿದಂತೆ, ಕಾಡು ಪ್ರಾಣಿಗಳನ್ನೆ ಮೃಷ್ಟಾನ್ನ ಭೋಜನ ಮಾಡಿಕೊಂಡಿದ್ದಾರೆ. ಇನ್ನೂ ಕೆಲವು ಕಡೆ ಗುಡ್ಡಗಾಡು ಪ್ರದೇಶಗಳಲ್ಲಿ ಗೆಡ್ಡೆ ಗೆಣಸು, ಹಳ್ಳಕೊಳ್ಳಗಳಲ್ಲಿ ಹಾಗೂ ಕೆರೆಗಳಲ್ಲಿ ಏಡಿ, ಸೀಗಡಿ, ಮೀನು ಹಿಡಿದು ತಿನ್ನುವುದೆ ಇವರ ಕಾಯಕವಾಗಿದೆ. ಊರುಗಳಿಂದ ಹೊರಗಿದ್ದು ಸಂಸ್ಕತಿಯ ಗಂಧವಿಲ್ಲದೆ, ಶಿಕ್ಷಣದ ಕೊರತೆಯಿಂದ ಈ ಕುಟುಂಬಗಳ ವಿದ್ಯಾರ್ಥಿಗಳ ಬಾಳು ಬರಡಾಗಿದೆ.

         ಗ್ರಾಮಗಳಿಂದಾಚೆ ಹಾಗೂ ಕೆರೆ ಅಂಗಳಗಳಲ್ಲಿ ಜೀವನ ಕಟ್ಟಿಕೊಂಡಿರುವ ಈ ಬುಡಕಟ್ಟು ಜನಾಂಗದವರಿಗೆ ಸೂರಿಲ್ಲದೆ, ಕಾಡು ಪ್ರಾಣಿಗಳ ಕಾಟ ಒಂದೆಡೆಯಾದರೆ, ಹಾವು, ಚೇಳು ಸೇರಿದಂತೆ ವಿಷಜಂತುಗಳ ಕಾಟ ಮತ್ತೊಂದೆಡೆ ಕಾಡುತ್ತಿವೆ. ಜಂಜಾಟದಲ್ಲಿ ಜೀವನ ಸಾಗಿಸುತ್ತಿರುವ ಈ ಕುಟುಂಬಗಳು ಮಹಿಳೆಯರ ಹಾಗೂ ಮಕ್ಕಳ ಭಿಕ್ಷಾಟನೆಯ ಊಟವನ್ನೆ ಕುಟುಂಬದ ಸದಸ್ಯರೆಲ್ಲ ಕೂತು ಹಂಚಿಕೊಂಡು ಉಣ್ಣುವ ದಯಾನೀಯ ಸ್ಥಿತಿಯಲ್ಲಿವೆ. ಸ್ಥಿರವಾದ ಜಾಗವಿಲ್ಲದೆ, ಇರುವ ಸ್ಥಳದಲ್ಲಿ ಸಮಸ್ಯೆಯಾದರೆ ಮತ್ತೊಂದು ಸರ್ಕಾರಿ ಜಾಗ ಹೊಂಚಿಕೊಳ್ಳುವ ಈ ಬುಡಕಟ್ಟು ಜನಾಂಗದ ಬದುಕು ಅಸ್ಥಿರವಾಗಿದೆ. ನಿವೇಶನವಿಲ್ಲದೆ, ಸೂರು ಕಟ್ಟಿಕೊಳ್ಳಲು ಹಣ ಇಲ್ಲದೆ, ಉಟ್ಟ ಬಟ್ಟೆಯಲ್ಲಿಯೆ ಕಾಲ ಕಳೆಯುವ ಈ ಬುಡಕಟ್ಟು ಜನಾಂಗದವರು ಸರ್ಕಾರಿ ಸವಲತ್ತುಗಳಾದ ಮನೆ, ಕುಡಿಯುವ ನೀರು, ಬೀದಿ ದೀಪ, ಭಾಗ್ಯಜ್ಯೋತಿ, ಆಧಾರ್‍ಕಾರ್ಡ್, ರೇಷನ್‍ಕಾರ್ಡ್ ಸೇರಿದಂತೆ ಸರ್ಕಾರಿ ಸವಲತ್ತುಗಳು ವಚಿಚಿತರಾಗಿದ್ದಾರೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಅನ್ನಭಾಗ್ಯ ಯೋಜನೆ ಸಹ ಬಹುತೇಕ ಜನರಿಗೆ ಮರೀಚಿಕೆಯಾಗಿದೆ.

ಕಾಡು ಪ್ರಾಣಿಗಳಂತಿರುವ ಬುಡಕಟ್ಟು ಜನ;-

         ನಾಗರಿಕತೆಯ ಸೋಂಕಿನಿಂದ ಹೊರಗಿರುವ ಈ ಬುಡಕಟ್ಟು ಜನಾಂಗ, ನೂರಾರು ವರ್ಷಗಳಿಂದ ಊರುಗಳ ಹೊರಗೆ ಹಾಗೂ ಸರ್ಕಾರಿ ಜಾಗಗಳಲ್ಲಿ ಗೂಡು ಕಟ್ಟಿಕೊಂಡಿವೆ. ಶೆಡ್‍ರೂಪದಲ್ಲಿ ಅಥವಾ ಕಾಗದದ ರೊಟ್ಟು ಇಲ್ಲವೆ, ಅಡಕೆ ಪಟ್ಟೆಗಳಲ್ಲಿ ಗೋಡೆ ಕಟ್ಟಿಕೊಂಡು, ಭಿಕ್ಷೆ ಬೇಡಿದ ಸೀರೆ ಅಥವಾ ಇನ್ನಿತರ ಪ್ಲಾಸ್ಟಿಕ್ ಪರದೆಗಳನ್ನು ಛಾವಣಿಯಾಗಿ ಬಳಸಿಕೊಂಡಿವೆ. ಚಿಕ್ಕಗೂಡಿನಲ್ಲಿ ಐದಾರು ಜನ ಹಂದಿ ಗೂಡಿನಲ್ಲಿ ಪ್ರಾಣಿಗಳು ಬದುಕುವ ರೀತಿಯಲ್ಲಿ, ಅನಾಗರಿಕ ಜೀವನ ನಡೆಸುತ್ತಿರುವ ಈ ಬುಡಕಟ್ಟು ಜನಾಂಗ ಸತ್ತರೂ, ಮಣ್ಣು ಮಾಡಲು ಸ್ಮಶಾನವಿಲ್ಲದೆ, ಸ್ಥಳೀಯವಾಗಿ ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್‍ಗಳಿಲ್ಲದೆ, ರಾಜ್ಯ ಹಾಗೂ ತಾಲ್ಲೂಕಿನ ಪೌರತ್ವ ಇಲ್ಲದೆ, ಅನಾಥ ಪ್ರಾಣಿಗಳ ರೀತಿಯಲ್ಲಿ ಬದುಕುತ್ತಿರುವುದು ಶೋಚನಿಯ ವಿಚಾರವಾಗಿದೆ.

ಎಣ್ಣೆ ದೀಪದ ಬೆಳಕಲ್ಲೆ ವಿದ್ಯಾಭ್ಯಾಸ;-

        ಬುಡಕಟ್ಟು ಜನಾಂಗದ ಸ್ಥಿತಿ ಹಳೆ ಶಿಲಾಯುಗದ ಜನರಂತೆ ಕಂಡು ಬರುತ್ತಿದೆ. ರಾಜ್ಯ ಸರ್ಕಾರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತಂದು, ನೂರಾರು ಕೋಟಿ ರೂ.ಗಳನ್ನು ಶಿಕ್ಷಣಕ್ಕಾಗಿ ವ್ಯಯ ಮಾಡುತ್ತಿದೆ. ಆದರೂ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳ ಸ್ಥಿತಿಗತಿಗಳ ಬಗ್ಗೆ ಕ್ಯಾರೆ ಎನ್ನದ ಅಧಿಕಾರಿ ವರ್ಗ, ಈ ಜನಾಂಗದ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈ ಬುಡಕಟ್ಟು ಜನಾಂಗದವರಿಗೆ ರೇಷನ್‍ಕಾರ್ಡ್ ಇಲ್ಲದ ಕಾರಣ, ಅನ್ನಭಾಗ್ಯವಿರಲಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸೀಮೆ ಎಣ್ಣೆ ಬುಡ್ಡಿಗೂ ಗತಿ ಇಲ್ಲದೆ, ಒಂದಕ್ಕೆ ನಾಲ್ಕು ಪಟ್ಟು ಹಣ ನೀಡಿ ಸೀಮೆ ಎಣ್ಣೆಗಾಗಿ ಅಲೆದಾಡಿ ಖರೀದಿಸಿ, ವರ್ಷವಿಡೀ ಎಣ್ಣೆ ದೀಪದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಇವರ ಜೀವನದ ದುಃಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ಕಣ್ತೆರೆಯದ ಇಲಾಖೆಗಳು;-

         ಕಾಡುಗೊಲ್ಲ (ಮೋಡಿಗೊಲ್ಲ), ಎಳವರು, ಹಂದಿಜೋಗ ಹಾಗೂ ಹಕ್ಕಿಪಿಕ್ಕಿ ಜನಾಂಗದವರಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಡಿ ವಿಶೇಷ ಸವಲತ್ತುಗಳ ವಿತರಣೆಗೆ ಹಾಗೂ ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ವಿಶೇಷ ಅನುದಾನಗಳಿವೆ. ನೂರಾರು ಕೋಟಿರೂ.ಗಳು ಇಲಾಖೆಗಳಲ್ಲಿ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳದೆ ಕೊಳೆಯುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬುಡಕಟ್ಟು ಜನಾಂಗ ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಯಾವೊಬ್ಬ ಅಧಿಕಾರಿಯೂ ಸಹ ಈ ಕುಟುಂಬಗಳ ಬಗ್ಗೆ ಕಾಳಜಿ ವಹಿಸಿಲ್ಲ. ಕನಿಷ್ಠ ಸೌಕರ್ಯಗಳಾದ ಚುನಾವಣಾ ಗುರುತಿನಚೀಟಿ, ಭಾರತೀಯ ಪ್ರಜೆ ಎಂಬುದಕ್ಕೆ ಆಧಾರ್‍ಕಾರ್ಡ್, ನೂರಾರು ಎಕರೆ ಸರ್ಕಾರಿ ಗೋಮಾಳ ಜಮೀನುಗಳಿದ್ದರೂ ನಿವೇಶನ ಹಂಚಿಲ್ಲ. ಚುನಾವಣಾ ಸಂದರ್ಭದಲ್ಲಿ ಮಾತ್ರ ಕೆಲವು ಸ್ಥಳೀಯ ಮುಖಂಡರು ಅನೇಕ ಆಮಿಷವೊಡ್ಡಿ ಮತ ಕೇಳಲು ಅವರ ಬಳಿ ಹೋಗುವುದು ಬಿಟ್ಟರೆ, ಮತ್ತೆ ಮತ್ತೊಂದು ಚುನಾವಣಾ ಸಂದರ್ಭದಲ್ಲಿಯೆ ರಾಜಕಾರಣಿಗಳು ಭೇಟಿ ನೀಡುವುದು.

ಸೂರಿಗೆ ಪರದಾಟ;-

         ಬುಡಕಟ್ಟುಜನಾಂಗಕ್ಕೆ ಕಸುಬು ಆಧಾರಿತ ಸೇರಿದಂತೆ ಇನ್ನಿತರ ಯೋಜನೆಯಡಿಯಲ್ಲಿ ವಸತಿ ನೀಡುವ ಅನೇಕ ಕಾರ್ಯಕ್ರಮಗಳಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಬುಡಕಟ್ಟು ಜನಾಂಗ ಒಳಗಾಗಿದೆ. ಅಂಬೇಡ್ಕರ್, ಇಂದಿರಾ ಸೇರಿದಂತೆ 24 ಗ್ರಾಪಂ ಗಳಿಗೆ 3000 ಮನೆಗಳನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಶೇಷ ಯೋಜನೆಯಡಿಯಲ್ಲಿ ಬಡಜನತೆಗೆ ಕಲ್ಪಿಸಿದರಾದರೂ, ಈ ಯೋಜನೆಯಡಿಯಲ್ಲಿಯೂ ಈ ಸಮುದಾಯದ ಜನರನ್ನು ಹೊರಗಿಟ್ಟು ಯಾರೊಬ್ಬರಿಗೂ ಮನೆ ವಿತರಣೆ ಮಾಡದಿರುವುದು, ಈ ಜನಾಂಗಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap