ತುಮಕೂರು
2020-21ನೆ ಸಾಲಿನ ಜಲ ಜೀವನ್ ಮಿಷನ್ ಯೋಜನೆಯನ್ನು ತುಮಕೂರು ಜಿಲ್ಲೆಯಲ್ಲಿ ಅನುಷ್ಠಾನ ಮಾಡುವ ಮೂಲಕ ಶುದ್ಧ ಕುಡಿಯುವ ನೀರನ್ನು ನಲ್ಲಿ ಮೂಲಕ ಪ್ರತಿ ಮನೆಗೂ ತಲುಪಿಸುವ ಉದ್ದೇಶವನ್ನಿಟ್ಟುಕೊಂಡು ಕೇಂದ್ರ ಸರ್ಕಾರ ಈ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಅನುಷ್ಠಾನ ಮಾಡಲು ನಿರ್ಧರಿಸಿತ್ತು. ಈ ಸಂಬಂಧ ಅನೇಕ ಸುತ್ತೋಲೆಗಳನ್ನು ತುಮಕೂರು ಜಿಲ್ಲಾ ಪಂಚಾಯಿತಿಗೆ ರವಾನಿಸಿತ್ತು.
ಇದನ್ನು ಮನಗಂಡ ಜಿಲ್ಲಾ ವ್ಯಾಪ್ತಿಯ ಮೂವರು ಸಂಸದರಾದ ಜಿ.ಎಸ್.ಬಸವರಾಜು, ನಾರಾಯಣಸ್ವಾಮಿ ಮತ್ತು ಡಿ.ಕೆ. ಸುರೇಶ್ ಅವರುಗಳು ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಗಳಲ್ಲಿ ಈ ಯೋಜನೆಯನ್ನು ತಂದಿರುವುದಾಗಿ ತಿಳಿಸಿದ್ದರು. ಆದರೆ ಇತ್ತೀಚೆಗೆ ವಿಧಾನ ಸೌಧದಲ್ಲಿ ನಡೆದ ಉಲ್ಲೇಖ 3 ಕ್ಕೆ ಸಂಬಂಧಿಸಿದ ಸಭೆ ನಡೆಸಿದ ಅಧಿಕಾರಿಗಳು ರಾಜ್ಯ ಮಟ್ಟದಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ನಲ್ಲಿಗಳ ಮೂಲಕ ನೀರು ಸರಬರಾಜು ಮಾಡಲು ತುಮಕೂರು ಜಿಲ್ಲೆಯಲ್ಲಿ ನೀರಿನ ಸಂಪನ್ಮೂಲದ ಕೊರತೆ ಇದೆ ಎಂಬ ಕಾರಣ ನೀಡಿ, ನಲ್ಲಿ ಮೂಲಕ ನೀರು ಕೊಡುವ ಕಾಮಗಾರಿಯನ್ನು ಸ್ಥಗಿತಗೊಳಿಸುವ ಮೂಲಕ ಜಲ ಜೀವನ್ ಮಿಷನ್ ಕಾರ್ಯಕ್ರಮದಿಂದ ಜಿಲ್ಲೆಗೆ ವಂಚನೆಯಾದಂತಾಗಿದೆ.
ಕಳೆದ ಒಂದು ವಾರದ ಹಿಂದೆ ಜಿಲ್ಲಾ ಪಂಚಾಯತಿಗೆ ಈ ಸಂಬಂಧ ಪತ್ರವೊಂದು ಬಂದಿದ್ದು, ಅದರಲ್ಲಿ ಮೇಲ್ಕಂಡ ವಿಷಯ ಪ್ರಸ್ತಾಪವಾಗಿದೆ. ಜನಪ್ರತಿನಿಧಿಗಳಿಗೆ ಈ ವಿಷಯ ಗೊತ್ತಿದ್ದರೂ ಗೊತ್ತಿಲ್ಲದಂತೆ ವರ್ತಿಸುತ್ತಿರುವುದನ್ನು ನೋಡಿದರೆ, ಜಿಲ್ಲೆಗೆ ಆಗಿರುವ ವಂಚನೆಗೆ ಇವರೆ ಕಾರಣ ಎಂಬುದು ಸಾಬೀತಾದಂತಾಗಿದೆ. ಶುದ್ಧ ಕುಡಿಯುವ ನೀರನ್ನು ಕೇಳುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಅದನ್ನು ಒದಗಿಸಿಕೊಡುವುದು ಸರ್ಕಾರದ ಹಾಗೂ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ.
ನೀರಿನ ಸಂಪನ್ಮೂಲ ಎಷ್ಟೇ ದೂರವಿದ್ದರೂ ಅಲ್ಲಿಂದ ನೀರನ್ನು ತಂದು ನಲ್ಲಿ ಮೂಲಕ ಪ್ರತಿ ಮನೆಗೂ ಕೊಡುವ ಕೆಲಸ ಈ ಯೋಜನೆಯಲ್ಲಿ ಪ್ರಮುಖವಾಗಿತ್ತು.ಎತ್ತಿನಹೊಳೆ, ಭದ್ರಾ ಮೇಲ್ಕಂಡೆ ಯೋಜನೆ ಹಾಗೂ ಹೇಮಾವತಿ ನೀರಿನ ಮೂಲಗಳು ಜಿಲ್ಲೆಯಲ್ಲಿ ಹಾದು ಹೋಗಿದ್ದು, ನೀರಿನ ಸಂಪನ್ಮೂಲಕ್ಕೆ ಕೊರತೆ ಇಲ್ಲ ಎಂಬುದನ್ನು ಜನಪ್ರತಿನಿಧಿಗಳು ಅರಿಯಬೇಕು. ಕೇವಲ ಅಧಿಕಾರಿಗಳ ಮಲತಾಯಿ ಧೋರಣೆಯಿಂದ ನೀರಿನ ಸಂಪನ್ಮೂಲದ ಕೊರತೆ ಇದೆ ಎಂಬ ಕಾರಣ ನೀಡುವುದು ಕುತಂತ್ರವಾಗಿದೆ.
ಜನಪ್ರತಿನಿಧಿಗಳು ಸಾರ್ವಜನಿಕ ಸಭೆಗಳಲ್ಲಿ ಇನ್ನಾದರೂ ಇಂತಹ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು, ಜಿಲ್ಲೆಗಾಗಿರುವ ಅನ್ಯಾಯವನ್ನು ಜಲ ಜೀವನ್ ಮಿಷನ್ ಯೋಜನೆಗೆ ಜಿಲ್ಲೆಯನ್ನು ಸೇರಿಸುವ ಮೂಲಕ ಸರಿಪಡಿಸಬೇಕು. ಇಲ್ಲದಿದ್ದರೆ ಜನಪ್ರತಿನಿಧಿಗಳ ಹೊಣಗೇಡಿತನವೆ ಇದಕ್ಕೆ ಕಾರಣ ಎಂದು ಜಿಲ್ಲೆಯ ಜನ ತಿಳಿಯಬೇಕಾಗುತ್ತದೆ. ಇನ್ನಾದರೂ ಜಿಲ್ಲೆಯ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸ್ಥಗಿತಗೊಂಡಿರುವ ಸದರಿ ಯೋಜನೆಯನ್ನು ಮತ್ತೆ ಜಾರಿಗೆ ತಂದು ಅನುಷ್ಠಾನಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಈರಣ್ಣ ಕೆಂಪನದೊಡ್ಡೇರಿ ಹಾಗೂ ಕುಮಾರಸ್ವಾಮಿ ತುಮಕೂರು ಅವರುಗಳು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
