ತುಮಕೂರು
ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಕ್ರಮಬದ್ಧವಾಗಿ ನಡೆಯುತ್ತಿಲ್ಲ. ಹಲವು ಬಾರಿ ಈ ಬಗ್ಗೆ ಧ್ವನಿ ಎತ್ತಿದರೂ, ಯಾವುದೇ ಪ್ರಯೋಜನವಾಗಿಲ್ಲ. ಸ್ವತಃ ಬಿಜೆಪಿ ಪಕ್ಷದ ನಾಯಕರೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಶಾಸಕ ರಫೀಕ್ ಅಹಮ್ಮದ್ ಆರೋಪ ಮಾಡಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಂತೆ ತುಮಕೂರು, ಸ್ಯಾಟಲೈಟ್ ಸಿಟಿಯಾಗಬೇಕು. ನನ್ನ ಅಧಿಕಾರಾವದಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಆರಂಭವಾದವು. ಆದರೆ, ಇಲ್ಲಿಯವರೆಗೆ ಯಾವುದೇ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ. ಈಗಲೂ ಕೂಡ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ. ನಾನೇನಾದರೂ ಶಾಸಕನಾಗಿದ್ದರೆ ಈ ರೀತಿ ಆಗಲು ಬಿಡುತ್ತಿರಲಿಲ್ಲ ಎಂದು ಎಂದರು.
ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಗರದ ಎಲ್ಲ ಕಡೆಗಳಲ್ಲಿಯೂ ರಸ್ತೆಗಳನ್ನು ಅಗೆದು ಹಾಗೆಯೆ ಬಿಟ್ಟಿರುವುದರಿಂದ ಈಗಾಗಲೇ ಧೂಳಿನ ಸಿಟಿ ಎಂಬ ಹಣೆಪಟ್ಟಿಯನ್ನು ಪಡೆದಿದೆ. ಇನ್ನೂ ಎರಡ್ಮೂರು ತಿಂಗಳಲ್ಲಿ ಮಳೆಗಾಲ ಬರುತ್ತದೆ. ಆಗ ತುಮಕೂರು ಕೊಚ್ಚೆ ಸಿಟಿ ಯಾಗುವುದರಲ್ಲಿ ಸಂಶಯವಿಲ್ಲ. ಇಷ್ಟೆಲ್ಲಾ ಆದರೂ ಸೂಕ್ತ ಕ್ರಮ ಕೈಗೊಳ್ಳದೆ ಸ್ಮಾರ್ಟ್ ಸಿಟಿ ಎಂಡಿ ಹಾಗೂ ಪಾಲಿಕೆ ಆಯುಕ್ತರು ಕೆಲ ಗುತ್ತಿಗೆದಾರರಿಂದ ದಂಡ ವಸುಲಿ ಮಾಡಬಹುದು, ಆದರೆ ಇವರು ಬೆಸ್ಕಾಂ ಇಲಾಖೆ ಹಾಗೂ ಒಳಚರಂಡಿ ಮಂಡಳಿಗೆ ದಂಡ ವಿಧಿಸಿರುವುದು ಹುಚ್ಚುತನವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಕಾಮಗಾರಿ ಸೂಕ್ತ ರೀತಿಯಲ್ಲಿ ನಡೆಯದೇ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ. ಪಕ್ಷಾತೀತವಾಗಿ ಹೋರಾಟ ಮಾಡಲು ನಾವು ಸಿದ್ದರಿದ್ದೇವೆ ಎಂದರಲ್ಲದೆ, ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಎಚ್ಚೆತ್ತು ಶೀಘ್ರವೇ ಕಾಮಗಾರಿಗಳನ್ನು ಪೂರೈಸುವಂತೆ ಎಚ್ಚರಿಕೆ ನೀಡಬೇಕು. ಹಾಗೆಯೆ ಶಾಸಕರು ಸಹ ಅಧಿಕಾರಿಗಳ ವಿರುದ್ದ ಚಾಟಿ ಬೀಸಿ, ಕೆಲಸ ತೆಗೆದುಕೊಳ್ಳಬೇಕೆಂದು ಡಾ.ರಫೀಕ್ ಅಹಮದ್ ಒತ್ತಾಯಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿರುವ 2020ನೇ ಸಾಲಿನ ಬಜೆಟ್‍ನಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ನಿರ್ಲಕ್ಷ ಮಾಡಲಾಗಿದೆ. ಮೈತ್ರಿ ಸರಕಾರದಲ್ಲಿ ಅಲ್ಪಸಂಖ್ಯಾತರಿಗೆ ಬಹಳಷ್ಟು ಯೋಜನೆ ರೂಪಿಸಿದ್ದರು. ಅದರಲ್ಲಿ ಶೇ.50 ರಷ್ಟು ಅನುದಾನವನ್ನು ಕಡಿತಗೊಳಿಸಿದ್ದಾರೆ. ಇದರಿಂದ ಅಲ್ಪಸಂಖ್ಯಾತರಿಗೆ ಗೊಂದಲ ಹಾಗೂ ಆತಂಕ ಸೃಷ್ಠಿಯಾಗಿದೆ. ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರು 800 ಕೋಟಿ ಮತ್ತು ಎಚ್.ಡಿ.ಕುಮಾರ ಸ್ವಾಮಿಯವರು 400 ಕೋಟಿ ರೂ. ನೀಡಿದ್ದರು. ಈಗ ಅದು 200 ಕೊಟಿ ರೂ.ಗೆ ಇಳಿದಿದೆ. ಇದರಿಂದ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಸಾಧ್ಯವಿಲ್ಲ. 2020 ಬಜೆಟ್‍ನಲ್ಲಿ ಬಹಳಷ್ಟು ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿಗೆ ಪರ್ಯಾಯವಾಗಿ ಅಭಿವೃದ್ಧಿ ಹೊಂದುತ್ತಿರುವ ತುಮಕೂರಿಗೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಸಿಗುತ್ತದೆ ಎಂಬ ನಿರೀಕ್ಷೆಯಿತ್ತು. ನಮ್ಮ ನಿರೀಕ್ಷೆ ಹುಸಿಯಾಗಿದೆ. ಕಳೆದ ಮೈತ್ರಿ ಸರಕಾರದಲ್ಲಿ ನಗರ ಪಾಲಿಕೆಗೆ 125 ಕೊಟಿ ರೂ. ಅನುದಾನ ನೀಡಲಾಗಿತ್ತು. ಈ ವರ್ಷ ವಿಶೇಷ ಅನುದಾನ ಬರುತ್ತದೆ ಎಂಬ ನಮ್ಮ ನಿರೀಕ್ಷೆ ಸುಳ್ಳಾಗಿದೆ. ಈ ಬಜೆಟ್‍ನಲ್ಲಿ ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಹಳೆ ಯೋಜನೆಗಳನ್ನೆ ತಿರುಚಿ ಹೇಳಿದ್ದಾರೆ. ವಿವಿಧ ಇಲಾಖೆಗಳ ಅನುದಾನವನ್ನು ಕಡಿತಗೊಳಿಸಿ ಅದರಲ್ಲಿ ಮಕ್ಕಳ ಆಯವ್ಯಯ ಮಾಡಿದ್ದೇವೆ ಎಂಬುದಾಗಿ ಬಿಂಬಿಸಿ ಕೊಳ್ಳುತ್ತಿದ್ದಾರೆ. ಈ ಆಯವ್ಯಯ ಸರಿಯಿಲ್ಲ. ಇದು ಖಂಡನೀಯ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನ ಕಡಿತವಾಗಿದೆ ಎಂದು ಮುಖ್ಯಮಂತ್ರಿಗಳೆ ಹೇಳಿದ್ದಾರೆ. ಇದರಿಂದ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ದಿ ಕಾಣಲು ಸಾಧ್ಯವಿಲ್ಲವಾಗಿದೆ. ಅಲ್ಲದೇ ಬಹಳಷ್ಟು ಇಲಾಖೆಗೆ ಅನುದಾನ ಕಡಿತಗೊಳಿಸಿದ್ಧಾರೆ. ಮೈತ್ರಿ ಸರಕಾರದಲ್ಲಿ ಅಲ್ಪಸಂಖ್ಯಾತರ ಇಲಾಖೆಗೆ 2,300 ಕೋಟಿ ರೂ. ಅನುದಾನ ನೀಡಲಾಗಿತ್ತು. ಕೇವಲ ಈ ಬಾರಿ 1,200 ಕೋಟಿ ನೀಡಲಾಗಿದೆ. ಸುಮಾರು ಸಾವಿರ ಕೋಟಿ ರೂ. ಅನುದಾನ ಕಡಿತಗೊಳಿಸಿದ್ದಾರೆ ಎಂದರು.
ಕೇಂದ್ರ ಸರಕಾರ ಈಗಾಗಲೇ ಸಿಎಎ ಜಾರಿಗೊಳಿಸಿದೆ. ಈಗ ಮತ್ತೆ ಎನ್.ಪಿ.ಆರ್ ಘೋಷಿಸಲು ನಿರ್ಧರಿಸಿದೆ. ಈ ಬಗ್ಗೆ ಸರಕಾರಕ್ಕೆ ಸರಿಯಾದ ಮಾಹಿತಿ ಇಲ್ಲ. ಇದನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆ. ಎನ್.ಪಿ.ಆರ್ ಅನ್ನು ಬಾಯಕಟ್ ಮಾಡಬೇಕು ಎಂದು ಸಿ.ಎಲ್.ಪಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಎನ್‍ಪಿಆರ್, ಸಿಎಎ ಯಿಂದ ಕೇವಲ ಮುಸಲ್ನಾರಿಗಾಗಿ ಆಪತ್ತು ಅಲ್ಲ. ಎಲ್ಲರಿಗೂ ಈ ಆಪತ್ತು. ಆದರೆ ಯಾರು ಈ ಬಗ್ಗೆ ಹಿಂದೂ ಸಮುದಾಯದ ಕಾರ್ಯಕರ್ತರು ಚಕಾರೆವೆತ್ತುತ್ತಿಲ್ಲ. ಈ ಬಗ್ಗೆ ಎಲ್ಲರೂ ಒಂದಾಗಬೇಕು. ಪಕ್ಷಾತೀತವಾಗಿ ಎಲ್ಲರೂ ಪ್ರತಿಭಟನೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್‍ನಲ್ಲಿ ಉಂಟಾದ ಬಣಗಳ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲಾ ಕಾಂಗ್ರೆಸ್‍ನಲ್ಲಿ ಯಾವುದೇ ಬಣ ಇಲ್ಲ. ಇರುವುದು ಒಂದೇ ಬಣ. ಅದು ಕಾಂಗ್ರೆಸ್ ಬಣ. ನಾವೆಲ್ಲರೂ ಒಟ್ಟಿಗೆ ಪಕ್ಷ ಸಂಘಟನೆ ಮಾಡುತ್ತೇವೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವುದು ಪಕ್ಷಕ್ಕೆ ಮತ್ತಷ್ಟು ಶಕ್ತಿ ತಂದಿದೆ. ಹೊಸ ಸಮಿತಿಯಿಂದ ರಾಜ್ಯದಲ್ಲಿ ಪಕ್ಷ ಬಲಿಷ್ಠಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ನಿರಂಜನ್, ಆಟೋ ರಾಜು, ಮೆಹಬೂಬ್ ಪಾಷ, ಜ್ವಾಲಮಾಲ ರಾಜಣ್ಣ, ತರುಣೇಶ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
