ಕ್ರೀಡಾನಗರವಾಗಿ ತುಮಕೂರು ನಗರ ಘೋಷಣೆಗೆ ಒತ್ತಾಯ

ತುಮಕೂರು:

        ರಾಜ್ಯದ ಸಮ್ಮಿಶ್ರ ಸರಕಾರ 2018-19ನೇ ಬಜೆಟ್ ನಲ್ಲಿ ಘೋಷಿಸಿರುವ ತುಮಕೂರು ನಗರವನ್ನು ಕ್ರೀಡಾ ನಗರವಾಗಿ ಮಾರ್ಪಡಿಸಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸರಕಾರದ ಒತ್ತಡ ತರುವ ನಿಟ್ಟಿನಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಅವರಿಗೆ ಕ್ರೀಡಾನಗರಿ ಯೋಜನೆಯ ಪ್ರಮುಖ ಪ್ರವರ್ತಕರಲ್ಲಿ ಒಬ್ಬರಾದ ನವೀದ್ ಬೇಗ್ ನೇತೃತ್ವದ ತಂಡ ಮಂಗಳವಾರ ಮನವಿ ಸಲ್ಲಿಸಿದರು.

         ನವೀದ್ ಬೇಗ್ ಅವರೊಂದಿಗೆ ಹಿರಿಯ ಕ್ರೀಡಾಪಟುಗಳಾದ ಶ್ರೀಸಿದ್ದಗಂಗಾ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಶಾಂತಕುಮಾರ್,ಸಿಎಂಎ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹಮದ್,ಜಲಸ್ತಂಭ ಕ್ರೀಡಾಪಟು ನಾಗಾನಂದಸ್ವಾಮಿ,ಸಿದ್ದಗಂಗಾ ಡಿಪ್ಲಮೋ ಕಾಲೇಜಿನ ಪ್ರಾಂಶುಪಾಲ ಮಲ್ಲೇಶ್,ಫಯಾಜ್ ಅಹಮದ್,ಅಂತರರಾಷ್ಟ್ರೀಯ ಬಾಲ್ ಬ್ಯಾಟ್ಮಿಂಟನ್ ಆಟಗಾರರಾದ ದಿವಾಕರ್, ಸೈಯದ್ ಕುತುಬ್ ಆಲಂ, ಸುಧೀಪ್ ಅವರುಗಳು ಸಿದ್ದಗಂಗ ಮಠದ ಶ್ರೀಸಿದ್ದಲಿಂಗಸ್ವಾಮೀಜಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

       ಈ ವೇಳೆ ಮಾತನಾಡಿದ ನವೀದ್ ಬೇಗ್, ಸಮಾನ ಮನಸ್ಕ ಗೆಳೆಯರೆಲ್ಲಾ ಸೇರಿ ಕಳೆದ ಐದಾರು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಸಮ್ಮಿಶ್ರ ಸರಕಾರ 2018-19ನೇ ಬಜೆಟ್ ನಲ್ಲಿ ತುಮಕೂರು ಜಿಲ್ಲೆಯನ್ನು ಕ್ರೀಡಾ ಸಾಮಗ್ರಿಗಳ ನಗರವಾಗಿ ಪರಿವರ್ತಿಸುವುದಾಗಿ ಘೋಷಿಸಿ,ಇದಕ್ಕಾಗಿ 2000 ರೂಗಳ ಬಂಡವಾಳ ಹೂಡಿಕೆ ಮಾಡುವ ಸಂಬಂಧ ಪ್ರಸ್ತಾಪ ನಡೆಸಿತ್ತು.ಆದರೆ ಇದುವರೆಗೂ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ.

       ಬಜೆಟ್‍ನ ಘೋಷಣೆಗಳು ಕೈಗೂಡಬೇಕಾದರೆ ನಿರಂತರ ಪ್ರಯತ್ನ ಮಾಡಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಸರಕಾರದ ಮೇಲೆ ಒತ್ತಡ ತರುವ ಪ್ರಯತ್ನ ನಿರಂತರವಾಗಿ ನಡೆಯುಬೇಕು.ಇದರ ಒಂದು ಭಾಗವಾಗಿ ಇಂದು ಸಿದ್ದಗಂಗಾ ಶ್ರೀಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ ಎಂದರು.

         ತುಮಕೂರು ಜಿಲ್ಲೆಯಲ್ಲಿ ಕ್ರೀಡಾ ಸಾಮಗ್ರಿಗಳ ಕೈಗಾರಿಕೆ ತೆರೆಯುವುದರ ಜೊತೆಗೆ,ತುಮಕೂರು ನಗರವನ್ನು ಕ್ರೀಡಾನಗರವಾಗಿ ಅಭಿವೃದ್ದಿಪಡಿಸುವುದರಿಂದ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳು ಅಭಿವೃದ್ದಿಯಾಗುವುದರ ಜೊತೆಗೆ, ನಮ್ಮ ಜಿಲ್ಲೆಯ ಮಕ್ಕಳಿಗೆ ರಾಷ್ಟ್ರೀಯ,ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಅವಕಾಶಗಳು ಲಭಿಸಲಿವೆ.ಅಲ್ಲದೆ ಕ್ರೀಡಾ ಪ್ರವಾಸೋದ್ಯಮ ಜಿಲ್ಲೆಯಾಗಿ ಅಭಿವೃದ್ದಿ ಪಡಿಸಲು ಅವಕಾಶ ದೊರೆಯಲಿದೆ. ಕ್ರೀಡೆಗೆ ಸಂಬಂಧಿಸಿದ ವ್ಯಾಪಾರ, ವಹಿವಾಟು ಹೆಚ್ಚುವುದರ ಜೊತೆಗೆ,ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ.

        ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 2015 ರಿಂದಲೂ ತುಮಕೂರು ನಗರವನ್ನು ಕ್ರೀಡಾನಗರವಾಗಿ ಘೋಷಣೆ ಮಾಡಲು ಅಂದಿನ ಎಲ್ಲಾ ಸಚಿವರು, ಶಾಸಕರು, ವಿವಿಧ ಪಕ್ಷಗಳ ಅಧ್ಯಕ್ಷರುಗಳಿಗೆ ಮನವಿ ಸಲ್ಲಿಸಲಾಗಿತ್ತು. ಇದರ ಫಲವಾಗಿಯೇ 2018-19ನೇ ಸಾಲಿನ ಬಜೆಟ್ ನಲ್ಲಿ ಸರಕಾರ ತುಮಕೂರು ಜಿಲ್ಲೆಯಲ್ಲಿ ಸ್ಟೋಟ್ರ್ಸ್ ಹಬ್ ಆಗಿ ನಿರ್ಮಾಣ ಮಾಡಲು ಮುಂದಾಗಿದೆ. ಇದರ ಲಾಭವನ್ನು ಪಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ವರ್ಗದ ಜನರು ಕೈಜೊಡಿಸಬೇಕಿದೆ ಎಂದು ನವೀದ್ ಬೇಗ್ ತಿಳಿಸಿದರು.

       ಮನವಿ ಸ್ವೀಕರಿಸಿದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಅವರು,ಇದೊಂದು ಉತ್ತಮ ಕೆಲಸ ಶೈಕ್ಷಣಿಕ ನಗರಿಯಾಗಿ ಅಭಿವೃದ್ದಿಯಾಗಿರುವ ತುಮಕೂರು ಜಿಲ್ಲೆ,ಕ್ರೀಡಾನಗರಿಯಾಗಿಯೂ ಬೆಳೆಯಲು ಉತ್ತಮ ಅವಕಾಶ ಕಲ್ಪಿಸಿದಂತಾಗುತ್ತದೆ.ಆದ್ದರಿಂದ ಈ ಸಂಬಂಧ ಶ್ರೀಮಠದ ವತಿಯಿಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಂಬಂಧಪಟ್ಟ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು ಎಂದು ನವೀದ್ ಬೇಗ ತಿಳಿಸಿದರು.

       ಇದೇ ತಂಡ ಸಿದ್ದಗಂಗಾ ಮಠದ ಹಿರಿಯ ಶ್ರೀಗಳನ್ನು ಭೇಟಿಯಾಗಿ, ತುಮಕೂರು ನಗರವನ್ನು ಕ್ರೀಡಾನಗರಿಯಾಗಿ ಘೋಷಿಸುವ ಯೋಜನೆಯ ಕುರಿತು ವಿವರಿಸಿದ್ದು,ಡಾ.ಶ್ರೀಶಿವಕುಮಾರಸ್ವಾಮೀಜಿ ಅವರು ಸಹ ತಮ್ಮ ಬೆಂಬಲ ಸೂಚಿಸಿದ್ದಾರೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಹಿರಿಯ ಸಚಿವರನ್ನು ಭೇಟಿಯಾಗಿ ಬಜೆಟ್ ಘೋಷಣೆಯಂತೆ ತುಮಕೂರು ನಗರವನ್ನು ಕ್ರೀಡಾ ನಗರವಾಗಿ ಘೋಷಿಸಲು ಮನವಿ ಸಲ್ಲಿಸಿ ಒತ್ತಾಯಿಸ ಲಾಗುವುದು ಎಂದು ನವೀದ್ ಬೇಗ್ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ